Last Updated:
LPG Cylinder Rules: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ (Public) ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಗ್ರಾಹಕರ ಮೊಬೈಲ್‌ಗಳಿಗೆ (Mobile) ಬರುತ್ತಿರುವ ಗ್ಯಾಸ್ ಕಂಪನಿಗಳ ಇತ್ತೀಚಿನ ಸಂದೇಶಗಳು ಅಡುಗೆಮನೆಯ ಬಜೆಟ್ (Budget) ಏರುಪೇರಾಗುವ ಭೀತಿಯನ್ನು ಸೃಷ್ಟಿಸಿವೆ. ಆದರೆ, ಈ ಹೊಸ ನಿಯಮಗಳ (New Rules) ಹಿಂದಿರುವ ಅಸಲಿ ಆಟ ಮತ್ತು ಸತ್ಯಾಸತ್ಯತೆ ಏನು? ಯಾರ ಸಿಲಿಂಡರ್ ನಿಜವಾಗಿಯೂ ಸ್ಥಗಿತಗೊಳ್ಳಲಿದೆ? ಈ ಕುರಿತ ಒಂದು ಆಳವಾದ ವಿಶ್ಲೇಷಣೆ ಇಲ್ಲಿದೆ.
ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಜೂನ್ 1 ರಿಂದ ಅತ್ಯಂತ ಕಟ್ಟುನಿಟ್ಟಾದ “ಒಂದು ಕುಟುಂಬ, ಒಂದು ಸಂಪರ್ಕ” (One Household, One Connection) ನೀತಿಯನ್ನು ಜಾರಿಗೊಳಿಸುತ್ತಿವೆ. ಈ ನಿಯಮದ ನೇರ ಪರಿಣಾಮ ಬೀರುವುದು ಯಾರ ಮನೆಯಲ್ಲಿ ಈಗಾಗಲೇ PNG (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕವಿದೆಯೋ ಮತ್ತು ಜೊತೆಗೆ ಮುನ್ನೆಚ್ಚರಿಕೆಯಾಗಿ ಅಥವಾ ಬ್ಯಾಕಪ್ ಆಗಿ LPG (ಸಿಲಿಂಡರ್) ಸಂಪರ್ಕವನ್ನೂ ಇಟ್ಟುಕೊಂಡಿದ್ದಾರೋ ಅಂತವರ ಮೇಲೆ ಮಾತ್ರ. ಹೊಸ ಮಾರ್ಗಸೂಚಿಗಳ ಪ್ರಕಾರ, ಪೈಪ್ ಗ್ಯಾಸ್ (PNG) ಸೌಲಭ್ಯವಿರುವ ಮನೆಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ.
ಈ ಬಾರಿ ಗ್ರಾಹಕರು ನಿಯಮದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಗ್ಯಾಸ್ ಪೂರೈಕೆದಾರ ಕಂಪನಿಗಳು ಗ್ರಾಹಕರ ಡೇಟಾವನ್ನು ಸಂಪೂರ್ಣವಾಗಿ ‘ಡಿಜಿಟಲ್ ಏಕೀಕರಣ’ ಮಾಡಿಕೊಂಡಿವೆ. ಆಧಾರ್ ಮತ್ತು ಪಡಿತರ ಚೀಟಿಗಳ ಲಿಂಕಿಂಗ್ ಆಧಾರದ ಮೇಲೆ ಒಂದೇ ಕುಟುಂಬದ ಹೆಸರಿನಲ್ಲಿರುವ ಹೆಚ್ಚುವರಿ ಸಂಪರ್ಕಗಳನ್ನು ಸಾಫ್ಟ್‌ವೇರ್ ಮೂಲಕ ಪತ್ತೆಹಚ್ಚಲಾಗುತ್ತಿದೆ. ಹೊಸದಾಗಿ PNG ಸಂಪರ್ಕ ಪಡೆದ ಗ್ರಾಹಕರು 30 ದಿನಗಳ ಒಳಗಾಗಿ ತಮ್ಮ ಹಳೆಯ LPG ಸಿಲಿಂಡರ್ ಸಂಪರ್ಕವನ್ನು ಕಡ್ಡಾಯವಾಗಿ ಸರೆಂಡರ್ ಮಾಡಬೇಕು. ಈ ನಿಯಮಗಳ ಪಾಲನೆ ಹಾಗೂ ಅಗತ್ಯ ದಾಖಲೆಗಳ ಸಲ್ಲಿಕೆಗೆ ಜೂನ್ 30 ಅನ್ನು ಅಂತಿಮ ಗಡುವನ್ನಾಗಿ ನಿಗದಿಪಡಿಸುವ ಸಾಧ್ಯತೆಗಳಿದ್ದು, ನಿಯಮ ಉಲ್ಲಂಘಿಸುವವರ ಗ್ಯಾಸ್ ಸಬ್ಸಿಡಿಯನ್ನು ಕಡಿತಗೊಳಿಸಲು ಇಲಾಖೆ ತೀರ್ಮಾನಿಸಿದೆ.
ಭಾರತ ಸರ್ಕಾರ ಇದ್ದಕ್ಕಿದ್ದಂತೆ ಇಂತಹ ಕಠಿಣ ರೇಷನಿಂಗ್ ನಿರ್ಧಾರ ಕೈಗೊಳ್ಳಲು ಒಂದು ಬಲವಾದ ಅಂತರರಾಷ್ಟ್ರೀಯ ಕಾರಣವಿದೆ. ಮಧ್ಯಪ್ರಾಚ್ಯದಲ್ಲಿ ಹದಗೆಡುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಜಾಗತಿಕವಾಗಿ ಅತ್ಯಂತ ಆಯಕಟ್ಟಿನ ಹಡಗು ಮಾರ್ಗವಾದ ಹೊರ್ಮುಜ್ ಜಲಸಂಧಿ ಮುಚ್ಚುವ ಭೀತಿಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಭಾರತವು ತನ್ನ ಒಟ್ಟು ಎಲ್‌ಪಿಜಿ ಬಳಕೆಯ ಸುಮಾರು ಶೇಕಡಾ 60 ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಆಮದಿನ ಬಹುಪಾಲು ಹೊರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಹೀಗಾಗಿ, ಭವಿಷ್ಯದಲ್ಲಿ ಎದುರಾಗಬಹುದಾದ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸಿಲಿಂಡರ್‌ಗಳ ಕಾಳಸಂತೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ.
ನಗರ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದುರುಪಯೋಗ ತಡೆಯಲು ‘ರೀಫಿಲ್ ಲಾಕ್-ಇನ್’ ಅವಧಿಯನ್ನು ನಿಗದಿಪಡಿಸಲಾಗಿದೆ. ಹೊಸ ನಿಯಮದ ಪ್ರಕಾರ, ನಗರಗಳಲ್ಲಿ ಒಂದು ಸಿಲಿಂಡರ್ ವಿತರಣೆಯಾದ ನಂತರ ಮುಂದಿನ ಸಿಲಿಂಡರ್ ಬುಕ್ ಮಾಡಲು ಕನಿಷ್ಠ 25 ದಿನಗಳ ಕಡ್ಡಾಯ ಗಡುವು ಇರಲಿದೆ. ಗ್ರಾಮೀಣ ಭಾಗದಲ್ಲಿ ಈ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿದೆ. ಆದರೆ, ವರ್ಷಕ್ಕೆ ಸಿಗುವ 12 ಸಬ್ಸಿಡಿ ಸಿಲಿಂಡರ್‌ಗಳ ಕೋಟಾದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಒಂದು ವೇಳೆ ನೀವು ಸಿಲಿಂಡರ್ ಸರೆಂಡರ್ ಮಾಡಿದ ನಂತರ, ಭವಿಷ್ಯದಲ್ಲಿ ಪೈಪ್ ಗ್ಯಾಸ್ (PNG) ಸೌಲಭ್ಯವಿಲ್ಲದ ಬೇರೆ ಊರಿಗೆ ಅಥವಾ ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆಯಾದರೆ ಏನು ಮಾಡುವುದು ಎಂಬ ಆತಂಕ ಗ್ರಾಹಕರಲ್ಲಿ ಮೂಡುವುದು ಸಹಜ. ಅದಕ್ಕೂ ಸರ್ಕಾರ ಪರಿಹಾರ ನೀಡಿದೆ. ಅಂತಹ ಗ್ರಾಹಕರಿಗೆ ‘ಟ್ರಾನ್ಸ್‌ಫರ್ ವೌಚರ್’ (Transfer Voucher) ಸೌಲಭ್ಯ ನೀಡಲಾಗುತ್ತಿದ್ದು, ಅದನ್ನು ತೋರಿಸಿ ಹೊಸ ಜಾಗದಲ್ಲಿ ಹಳೆಯ LPG ಸಂಪರ್ಕವನ್ನು ತಕ್ಷಣವೇ ಮರುಸ್ಥಾಪಿಸಿಕೊಳ್ಳಬಹುದು.
ಈ ಇಡೀ ಹೊಸ ನಿಯಮಗಳ ಸಾರಾಂಶವೇನೆಂದರೆ, ನಿಮ್ಮ ಮನೆಯಲ್ಲಿ ಕೇವಲ ಸಾಮಾನ್ಯ LPG ಸಿಲಿಂಡರ್ ಸಂಪರ್ಕ ಮಾತ್ರ ಇದ್ದು, ಯಾವುದೇ ಪೈಪ್ ಗ್ಯಾಸ್ (PNG) ಇಲ್ಲದಿದ್ದರೆ ನೀವು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಸಿಲಿಂಡರ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ಹೊಸ ಡಿಜಿಟಲ್ ಚಾವಟಿ ಕೇವಲ ಒಂದೇ ಸೂರಿನಡಿ ಎರಡು ವಿಭಿನ್ನ ಗ್ಯಾಸ್ ಸೌಲಭ್ಯಗಳನ್ನು ಅನುಭವಿಸುತ್ತಿರುವ ನಗರದ ಶ್ರೀಮಂತ ಅಥವಾ ಮಧ್ಯಮ ವರ್ಗದ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.
May 31, 2026 11:12 PM IST













