Last Updated:
ಸಿಇಸಿ ಜ್ಞಾನೇಂದ್ರ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ ಕೊಟ್ಟಿದ್ದ ಸಿಜೆಪಿ ಮುಖಂಡರಿಗೆ ಬಿಗ್ ಶಾಕ್ ಎದುರಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಸ್‌ಐಆರ್ (SIR) ವಿಚಾರಕ್ಕೆ ಶುರುವಾಗಿರೋ ಕಿಚ್ಚು ಇವತ್ತು ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟಗೊಂಡಿತ್ತು. ಆಯೋಗದ ಅಧ್ಯಕ್ಷ ಜ್ಞಾನೇಂದ್ರ ಕುಮಾರ್ (Gyanendra Kumar) ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಸಂಸ್ಥಾಪಕ ಅಭಿಷೇಕ್ ದೀಪ್ಕೆ (Abhijeet Dipke) ಕರೆ ಕೊಟ್ಟಿದ್ರು. ಜಂತರ್ ಮಂತರ್‌ನಲ್ಲಿ ಒಟ್ಟಾಗಿ ಸೇರಿ ಈ ಹಿಂದೆ ನೀಟ್ ಹೋರಾಟದ ಮಾದರಿಯಲ್ಲೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳೂ ನಡೆದಿದ್ವು. ಆದ್ರೆ, ಇವತ್ತು ದಿಲ್ಲಿ ಪೊಲೀಸರ ಮುಂದೆ ಕಾಕ್ರೋಚ್‌ಗಳ ಆಟ ನಡೆಯಲೇ ಇಲ್ಲ.
ಅಲ್ಲದೆ ಜನಪಥ್, ಕರ್ತವ್ಯ ಪಥ್ ಕ್ರಾಸಿಂಗ್ ಸುತ್ತಮುತ್ತ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು. ನವದೆಹಲಿ ಜಿಲ್ಲೆಯನ್ನ 20 ವಲಯಗಳಾಗಿ ವಿಂಗಡಿಸಿ, ಪ್ರಮುಖ ಸ್ಥಳಗಳಲ್ಲಿ ಬಹುಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಮಧ್ಯ ದೆಹಲಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಲಾಗಿತ್ತು. ಹೀಗಿದ್ರೂ ಪ್ರತಿಭಟನೆಗೆ ಮುಂದಾಗಿದ್ದ ನಾಯಕರನ್ನ ಎಲ್ಲೆಲ್ಲಿ ಇದ್ರೋ ಅಲ್ಲಲ್ಲೇ ವಶಕ್ಕೆ ಪಡೆಯಲಾಯ್ತು.
ಸಿಜೆಪಿ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ರಾತ್ರಿಯಿಂದ್ಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ರು. ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಧ್ರುವ್ ರಾಠಿ ಅವರನ್ನ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ನಿವಾಸದಿಂದ ಪೊಲೀಸರು ಬೆಳಗ್ಗೆಯೇ ವಶಕ್ಕೆ ಪಡೆದುಕೊಂಡ್ರು. ಮತ್ತೊಂದೆಡೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನೇರ ವಿಮಾನದೊಳಗೇ ಪ್ರವೇಶಿಸಿದ ಪೊಲೀಸರು, ಅವ್ರನ್ನ ವಶಕ್ಕೆ ಪಡೆದುಕೊಂಡ್ರು. ಈ ವೇಳೆ ವಿಮಾನದಲ್ಲಿ ಹೈಡ್ರಾಮವೇ ನಡೆದೋಯ್ತು. ತಮ್ಮನ್ನ ಪೊಲೀಸರು ವಶಕ್ಕೆ ಪಡೆಯುವ ಮುನ್ಸೂಚನೆಯನ್ನ ಮೊದಲೇ ಅರಿತಿದಿದ್ದ ಅಭಿಜಿತ್ ದೀಪ್ಕೆ, ಜಂತರ್ ಮಂತರ್‌ನಲ್ಲಿ ಕರೆ ನೀಡಲಾಗಿದ್ದ ಪ್ರತಿಭಟನೆಯ ಹೊಣೆಯನ್ನ ಅಜಿಂಕ್ಯ ಶಿಂಧೆಗೆ ವಹಿಸಿದ್ರು.
ಇನ್ನು, ಬೆಳಗ್ಗೆ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿಯಾಗುತ್ತಿದ್ದಂತೆ ದೆಹಲಿ ಪೊಲೀಸರು, ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ಸೌರವ್ ದಾಸ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಬಿಡುಗಡೆಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಸಿಜೆಪಿ ನಾಯಕರನ್ನು ಹೊರತುಪಡಿಸಿ ಉಳಿದೆಲ್ಲ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ. ಆದ್ರೆ, ಸಿಜೆಪಿ ನಾಯಕರಿಗೆ ಸೂಕ್ತ ಕಾನೂನು ಪ್ರಕ್ರಿಯನ್ನು ಅನುಸರಿಸಲಾಗುವುದು ಎಂದು ಎಎನ್ಐ ವರದಿ ಮಾಡಿದೆ.














