PBKS vs RCB: ಪಂಜಾಬ್ ವಿರುದ್ಧ 23 ರನ್​ಗಳಿಂದ ಗೆದ್ದ ಆರ್​ಸಿಬಿ! ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews

ಆರ್​ಸಿಬಿಗೆ ಗೆಲುವು


Last Updated:

2026ರ ಐಪಿಎಲ್​​ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್​ಗಳ ರೋಚಕ ಜಯ ಸಾಧಿಸಿ ಈ ವರ್ಷ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ.

ಆರ್​ಸಿಬಿಗೆ ಗೆಲುವು
ಆರ್​ಸಿಬಿಗೆ ಗೆಲುವು

2026ರ ಐಪಿಎಲ್​​ನ (IPL 2026) 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) 23 ರನ್​ಗಳ ರೋಚಕ ಜಯ ಸಾಧಿಸಿ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕಳಪೆ ಆರಂಭ ಪಡೆದರೂ, ಕೊಹ್ಲಿ (58), ವೆಂಕಟೇಶ್ ಅಯ್ಯರ್ (73) ಅರ್ಧಶತಕ ಹಾಗೂ ದೇವದತ್ ಪಡಿಕ್ಕಲ್ (45) ಅಬ್ಬರದ ನೆರವಿನಿಂದ ಆರ್​ಸಿಬಿ 20 ಓವರ್​​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್​ಗಳಿಸಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ 223 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್​ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ 56 ರನ್​​ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು.

ಆರಂಭಿಕ ಆಘಾತ

223 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೆಟ್ಟ ಆರಂಭ ಪಡೆದುಕೊಂಡಿತು. ಮೊದಲ ಓವರ್​ನಲ್ಲೇ ಪ್ರಿಯಾಂಶ್ ಆರ್ಯ ಖಾತೆ ತೆರೆಯದೇ ಭುವನೇಶ್ವರ್ ಕುಮಾರ್ ಬೌಲಿಂಗ್​​ನಲ್ಲಿ ಶೆಫರ್ಡ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಪ್ರಭಸಿಮ್ರನ್ ಸಿಂಗ್ 5 ಎಸೆತಗಳನ್ನಾಡಿ 2 ರನ್​ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ದೇವದತ್ ಪಡಿಕ್ಕಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 3 ಎಸೆತಗಳಲ್ಲಿ 1 ರನ್​​ಗಳಿಸಿ ನಿರ್ಗಮಿಸಿದರು.

ಚೇತರಿಕೆ ನೀಡಿದ ಕೊನೊಲಿ-ಶೆಡ್ಗೆ

ಪಂಜಾಬ್ ಕಿಂಗ್ಸ್ ಪವರ್ ಪ್ಲೇ ಒಳಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ಹಂತದಲ್ಲಿ ಒಂದಾದ ಕೊನೊಲಿ ಹಾಗೂ ಸೂರ್ಯಂಶ್ ಶೆಡ್ಗೆ 43 ರನ್​ ಸೇರಿಸಿ ಚೇತರಿಕೆ ನೀಡಿದರು. ಆದರೆ ಶೆಫರ್ಡ್ ಬೌಲಿಂಗ್​​ನಲ್ಲಿ ಕೊನೊಲಿ ಬೆಥೆಲ್​ಗೆ ಕ್ಯಾಚ್ ನೀಡಿ ಔಟ್ ಆದರು. 5ನೇ ವಿಕೆಟ್​​ಗೆ ಜೊತೆಯಾಟ ಸೂರ್ಯಾಂಶ್ ಶೆಡ್ಗೆ ಹಾಗೂ ಮಾರ್ಕಸ್ ಸ್ಟೋಯ್ನಿಸ್ 31 ರನ್​ ಸೇರಿಸಿದರು. 22 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ 35 ರನ್​ಗಳಿಸಿ ಸುಯಾಶ್ ಶರ್ಮಾ ಬೌಲಿಂಗ್​​ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂಜಾಬ್ ತಂಡ 93ಕ್ಕೆ5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನ ಭೀತಿ ಎದುರಿಸಿತ್ತು.

ಶಶಾಂಕ್ ಹೋರಾಟ ವ್ಯರ್ಥ

ಈ ಹಂತದಲ್ಲಿ ಜೊತೆಯಾದ ಸ್ಟೋಯ್ನಿಸ್ ಹಾಗೂ ಶಶಾಂಕ್ ಸಿಂಗ್ 6ನೇ ವಿಕೆಟ್​ ಜೊತೆಯಾಟದಲ್ಲಿ 67 ರನ್​ ಸೇರಿಸಿ ತಂಡವನ್ನ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುವಂತೆ ಮಾಡಿದರು. ಆದರೆ 17ನೇ ಓವರ್​ನಲ್ಲಿ ಹ್ಯಾಜಲ್​ವುಡ್​ 25 ಎಸೆತಗಳಲ್ಲಿ 37 ರನ್​ಗಳಿಸಿದ್ದ ಮಾರ್ಕಸ್ ಸ್ಟೋಯ್ನಿಸ್​ರನ್ನ ಎಲ್​ಬಿಡಬ್ಲ್ಯೂ ಮಾಡಿ ಪಂದ್ಯವನ್ನ ಮತ್ತೆ ಆರ್​ಸಿಬಿ ಕಡೆಗೆ ತಂದು ನಿಲ್ಲಿಸಿದರು. ಶಶಾಂಕ್​ ಸಿಂಗ್ 27 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್​ಗಳ ಸಹಿತ 56 ರನ್​ ಗಳಿಸಿ ಕೊನೆಯವರೆಗೂ ಹೋರಾಡಿ 20ನೇ ಓವರ್​ನಲ್ಲಿ ರಸಿಕ್ ಸಲಾಮ್​ ಬೌಲಿಂಗ್​​ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಅಜ್ಮತ್​​ವುಲ್ಲಾ ಒಮರ್ಝೈ 10 ಎಸೆತಗಳಲ್ಲಿ 14 ರನ್​ಗಳಿಸಿದರು.

ಮಿಂಚಿದ ಭುವನೇಶ್ವರ್

ಆರ್​ಸಿಬಿ ಪರ ಎಂದಿನಂತೆ ಭುವನೇಶ್ವರ್ ಕುಮಾರ್ ಇಂದೂ ಕೂಡ 38 ರನ್​ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಯುವ ಬೌಲರ್ ರಸಿಕ್ ಸಲಾಮ್ ಕೂಡ 36 ರನ್​ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಜೋಶ್ ಹ್ಯಾಜಲ್​ವುಡ್ ಮೊದಲ ಎರಡು ಓವರ್​ಗಳಲ್ಲಿ 26 ರನ್​ ಬಿಟ್ಟುಕೊಟ್ಟರೂ, ಕೊನೆಯ ಎರಡೂ ಓವರ್​ಗಳಲ್ಲಿ ಕೇವಲ 10 ರನ್​ ಬಿಟ್ಟುಕೊಟ್ಟರು. ಒಟ್ಟಾರೆ 36 ರನ್​ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಸುಯಾಶ್ ಶರ್ಮಾ 50 ರನ್​​ಗೆ 1 ವಿಕೆಟ್ ಪಡೆದು ದುಬಾರಿಯಾದರು. ರೊಮ್ಯಾರಿಯೋ ಶೆಫರ್ಡ್ 8ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಕೊಹ್ಲಿ-ವೆಂಕಿ ಅರ್ಧಶತಕ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್​ಗಳಿಸಿತ್ತು. ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ಸಹಿತ 58 ರನ್, ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್​ಗಳ ಸಹಿತ ಅಜೇಯ 73 ರನ್, 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ಸಹಿತ 45 ಹಾಗೂ ಟಿಮ್ ಡೇವಿಡ್ 12 ಎಸೆತಗಳಲ್ಲಿ 28 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಈ ಗೆಲುವಿನೊಂದಿಗೆ ಆರ್​ಸಿಬಿ 9ನೇ ಜಯ ಸಾಧಿಸಿತು. 13 ಪಂದ್ಯಗಳನ್ನಾಡಿದ್ದು, 9 ಜಯ ಹಾಗೂ 4 ಸೋಲು ಕಂಡಿದೆ. 18 ಅಂಕಗಳಿಸಿರುವ ಆರ್​ಸಿಬಿ ಅಗ್ರಸ್ಥಾನದಲ್ಲಿದ್ದು, ಮೊದಲ ತಂಡವಾಗಿ ಪ್ಲೇಆಫ್​​ ಪ್ರವೇಶಿಸಿದೆ. ಇನ್ನು ಸೋಲು ಕಂಡ ಪಂಜಾಬ್ ಕಿಂಗ್ಸ್ ತಂಡ ತನ್ನ ಪ್ಲೇ ಆಫ್ ಚಾನ್ಸ್​ಗಾಗಿ ಬೇರೆ ತಂಡಗಳ ಫಲಿತಾಂಶವನ್ನ ಅವಲಂಭಿಸಬೇಕಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed