Last Updated:
14 ವರ್ಷದ ಬಾಲಕ ಜತಿನ್ ಜೋಶಿ ಹಠಾತ್ ಹೃದಯಾಘಾತದಿಂದ ಸಾವನಪ್ಪಿದ್ದಾನೆ. ಇದರಿಂದ ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿತ್ತು. ಆದರೆ ತಾಯಿಯೊಬ್ಬಳು ಮಗನ ಅಗಲಿಕೆಯ ನೋವನ್ನು ತಾಳಲಾಗದೇ ತಾನೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉತ್ತರಾಖಂಡದ (Uttarakhand) ಪಿಥೋರಗಢ ಜಿಲ್ಲೆಯಲ್ಲಿ ಒಂದು ಮನಕಲಕುವ ದುರಂತ ನಡೆದಿದೆ. 14 ವರ್ಷದ ಬಾಲಕನೊಬ್ಬ ಬೆಳಗಿನ ವಾಕಿಂಗ್ ವೇಳೆ ಮೈದಾನದಲ್ಲೇ ಕುಸಿದು ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಯ್ತು. ಮಗನ ಅಗಲಿಕೆಯನ್ನು ತಾಳಲಾರದೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಡೆ ಗ್ರಾಮದಲ್ಲಿ ನಡೆದ ಈ ಅವಳಿ ದುರಂತ ಇಡೀ ಹಳ್ಳಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈಗಾಗಲೇ ಮಗನನ್ನು ಕಳೆದುಕೊಂಡು ನೋವಲ್ಲಿದ್ದ ಕುಟುಂಬಕ್ಕೆ ತಾಯಿಯು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಘಾತವಾಗಿದೆ.
ಮಡೆ ಗ್ರಾಮದ 14 ವರ್ಷದ ಜತಿನ್ ಜೋಶಿ ಶನಿವಾರ ಬೆಳಗ್ಗೆ 6 ಗಂಟೆಗೆ ಝೌಲ್ಖೇತ್ ಕ್ರೀಡಾಂಗಣದಲ್ಲಿ ಎಂದಿನಂತೆ ಓಡಾಟ ಮುಗಿಸಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಾಯಿ ಪೂನಂ ಜೋಶಿ ತಕ್ಷಣ ಅವನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವನು ಆಗಲೇ ಮೃತಪಟ್ಟಿದ್ದಾನೆಂದು ತಿಳಿಸಿದರು. ಪ್ರಾಥಮಿಕ ವರದಿಗಳ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ.
ಏಕೈಕ ಪುತ್ರನ ಮರಣದಿಂದ ಆಘಾತಕ್ಕೊಳಗಾದ ತಾಯಿ ಪೂನಂ, ಆಸ್ಪತ್ರೆಯಿಂದ ಮನೆಗೆ ಮರಳುವ ಬದಲು ಗಂಗೋಲಿಹಾಟ್ ಕಡೆಗೆ ತೆರಳುತ್ತಿದ್ದ ಟ್ಯಾಕ್ಸಿ ಹತ್ತಿದ್ದಾರೆ. ಸುಮಾರು 30 ಕಿಲೋಮೀಟರ್ ದೂರದ ಘಾಟ್ ಸೇತುವೆ ಬಳಿ ಕಾರು ನಿಲ್ಲಿಸಲು ಹೇಳಿ, ಅಲ್ಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ಯಾಕ್ಸಿ ಚಾಲಕ ಮತ್ತು ಸ್ಥಳೀಯರು ಆಕೆಯನ್ನು ಉಳಿಸಲು ಪ್ರಯತ್ನಿಸಿದರೂ ನದಿಯ ರಭಸಕ್ಕೆ ಕೊಚ್ಚಿಹೋದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆಕೆಯ ಮೃತದೇಹವನ್ನು ಹೊರತೆಗೆದಿದ್ದಾರೆ.
ಇದೀಗ ಕುಟುಂಬಕ್ಕೆ ಸರಣಿ ಆಘಾತ ಎದುರಾಗಿವೆ. ಪೂನಂ ಅವರ ಪುತ್ರಿ ಕೇವಲ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಏಕೈಕ ಆಧಾರವಾಗಿದ್ದ ಮಗನೂ ಇಲ್ಲವಾದಾಗ ಆ ತಾಯಿಗೆ ಬದುಕಿನ ಭರವಸೆಯೇ ನಶಿಸಿಹೋಗಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಒಂದೇ ದಿನ ತಾಯಿ-ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ಯುವಕರಲ್ಲಿ ವ್ಯಾಯಾಮ ಅಥವಾ ಕ್ರೀಡೆಯ ವೇಳೆ ಸಂಭವಿಸುವ ಹಠಾತ್ ಹೃದಯಾಘಾತಗಳು ಹೆಚ್ಚುತ್ತಿವೆ. ಜನ್ಮಜಾತ ಹೃದಯದ ತೊಂದರೆಗಳು ಅಥವಾ ಅತಿಯಾದ ಒತ್ತಡ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ. ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹದಿಹರೆಯದವರಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ.
ಕುಟುಂಬದಲ್ಲಿ ಅನಿರೀಕ್ಷಿತ ದುರಂತ ಸಂಭವಿಸಿದಾಗ ಆಘಾತಕ್ಕೊಳಗಾದ ವ್ಯಕ್ತಿಗಳನ್ನು ಒಬ್ಬರೇ ಬಿಡದೆ, ಅವರಿಗೆ ತಕ್ಷಣವೇ ಸಾಂತ್ವನ ಮತ್ತು ಮನೋವೈದ್ಯಕೀಯ ಕೌನ್ಸೆಲಿಂಗ್ ನೀಡುವುದು ಇಂತಹ ದುರಂತಗಳನ್ನು ತಡೆಯಲು ಅತ್ಯಂತ ಮುಖ್ಯ. ಆಘಾತದ ಸಂದರ್ಭದಲ್ಲಿ ಕೌನ್ಸೆಲಿಂಗ್ ಅನಿವಾರ್ಯ ಎಂದು ತಜ್ಞರು ಹೇಳುತ್ತಾರೆ. ಪೊಲೀಸರು ತಾಯಿ ಮತ್ತು ಮಗ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಘಟನೆ ಕುರಿತು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಗ್ರಾಮದ ಜನರು ಈ ದುರಂತದಿಂದ ಆಘಾತಕ್ಕೊಳಗಾಗಿದ್ದಾರೆ. ಕುಟುಂಬಕ್ಕೆ ಸಾಂತ್ವನ ನೀಡುತ್ತಿದ್ದಾರೆ.














