Last Updated:
ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ‘ವಿಭಿನ್ನ ರೀತಿಯ ಪ್ರತಿಭೆ’ ಮತ್ತು ಭಾರತದ ಭವಿಷ್ಯ ಎಂದು ಬಣ್ಣಿಸಿದ್ದಾರೆ. 1996ರ ವಿಶ್ವಕಪ್ ಹೀರೊ ಜಯಸೂರ್ಯ ಅವರು, ಈ ಯುವ ಆಟಗಾರನನ್ನು ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳಲು ಗಡಿಬಿಡಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ (Sanath Jayasuriya) ಅವರು ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸೂರ್ಯವಂಶಿ ಅವರನ್ನು ‘ವಿಭಿನ್ನ ರೀತಿಯ ಪ್ರತಿಭೆ’ ಎಂದು ಕರೆದಿರುವ ಜಯಸೂರ್ಯ, ಈ ಯುವ ಆಟಗಾರನನ್ನು ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ (Playing XI) ಸೇರಿಸಲು ಅವಸರ ಪಡಬಾರದು ಎಂದು ಹೇಳಿದ್ದಾರೆ. ಸೂರ್ಯವಂಶಿ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗೆ ಭಾರತ ತಂಡದ ಭಾಗವಾಗಿದ್ದರು, ಆದರೆ ತಂಡದ ಮ್ಯಾನೇಜ್‌ಮೆಂಟ್ ಇನ್ನಿಂಗ್ಸ್ ಆರಂಭಿಸಲು ನಿಯಮಿತ ಜೋಡಿಯಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಮೇಲೆಯೇ ಭರವಸೆ ಮುಂದುವರಿಸಿತ್ತು.
ಜಯಸೂರ್ಯ ಅವರು ಈ ಬಗ್ಗೆ ಮಾತನಾಡಿ, ‘ವೈಭವ್ ವಿಭಿನ್ನ ರೀತಿಯ ಪ್ರತಿಭೆ. ಅವರು ಭಾರತದ ಭವಿಷ್ಯ ಎಂದು ನಾನು ಭಾವಿಸುತ್ತೇನೆ. ಅವರ ಬಳಿ ಸಾಕಷ್ಟು ಸಮಯವಿದೆ. ಆದ್ದರಿಂದ ಅವರಿಗೆ ಉತ್ತಮ ಪ್ರದರ್ಶನ ನೀಡಲು ಅವಕಾಶ ಕೊಡಿ ಮತ್ತು ಅವರು ಖಂಡಿತವಾಗಿಯೂ ಉತ್ತಮವಾಗಿ ಆಡುತ್ತಾರೆ’ ಎಂದಿದ್ದಾರೆ.
1996ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರ ಸ್ಟಾರ್ ಪ್ರದರ್ಶನ ನೀಡಿದ್ದ ಜಯಸೂರ್ಯ, ಸೂರ್ಯವಂಶಿ ಅವರಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳುವ ಸಂಪೂರ್ಣ ಸಾಮರ್ಥ್ಯವಿದೆ. ಮುಂದೆಯೂ‘ಅವಕಾಶಗಳು ಸಿಗಲಿವೆ. ಅವರು ಯಾವ ಸ್ಥಾನದಲ್ಲಿ ಆಡುತ್ತಾರೆ ಎಂದು ನಾನು ಹೇಳಲು ಸಾಧ್ಯವಿಲ್ಲ, ಅದು ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅವರಿಗೆ ಅವಕಾಶ ಸಿಕ್ಕಾಗ, ಅವರು ಅದನ್ನು ಖಂಡಿತವಾಗಿಯೂ ಸದುಪಯೋಗಪಡಿಸಿಕೊಳ್ಳುತ್ತಾರೆ. ಆದ್ದರಿಂದ ಕಾದು ನೋಡೋಣ’ ಎಂದಿದ್ದಾರೆ.
ಜಯಸೂರ್ಯ ವೈಭವ್ ಆಯ್ಕೆ ಮತ್ತು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಾ, ‘ನಾನು ಆತನ ಆಯ್ಕೆ ಮತ್ತು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನನ್ನ ಪ್ರಕಾರ ಯುವ ಆಟಗಾರ ಅತ್ಯಂತ ಪ್ರತಿಭಾವಂತರು’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಕೂಡ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಜಯಸೂರ್ಯ ಹೇಳಿದರು. ‘ಪ್ರತಿಯೊಬ್ಬ ಆಟಗಾರನಲ್ಲೂ ವಿಭಿನ್ನ ಪ್ರತಿಭೆ ಇರುತ್ತದೆ ಮತ್ತು ಅವರು ಅಭ್ಯಾಸ ಹಾಗೂ ತರಬೇತಿಯಲ್ಲಿ ಕಷ್ಟಪಟ್ಟು ಶ್ರಮಿಸುತ್ತಾರೆ. ಭಾರತದಲ್ಲಿ ಯಾವಾಗಲೂ ಅವರ ಸ್ಥಾನವನ್ನು ಪಡೆದು ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರು ಸಿದ್ಧರಾಗಿರುತ್ತಾರೆ. ಇಲ್ಲಿ ಪೈಪೋಟಿ ತುಂಬಾ ಹೆಚ್ಚಿದೆ ಎಂಬುದಕ್ಕೆ ಟಿ20 ತಂಡವೇ ಸಾಕ್ಷಿ ಎಂದಿದ್ದಾರೆ.
ಈ 57 ವರ್ಷದ ಮಾಜಿ ದಂತಕಥೆ ಮೂರೂ ಮಾದರಿಗಳಲ್ಲಿ ಭಾರತೀಯ ಕ್ರಿಕೆಟ್‌ನ ಉನ್ನತ ಮಟ್ಟವನ್ನು ಶ್ಲಾಘಿಸಿದರು. ‘ಭಾರತದಲ್ಲಿ ಕ್ರಿಕೆಟ್ ಮಟ್ಟ ತುಂಬಾ ಉನ್ನತವಾಗಿದೆ. ಟೀಮ್ ಇಂಡಿಯಾ ಎಲ್ಲಾ ಮಾದರಿಗಳಲ್ಲಿ (ಏಕದಿನ, ಟಿ20 ಮತ್ತು ಟೆಸ್ಟ್) ಉತ್ತಮವಾಗಿ ಆಡುತ್ತಿದೆ. ಮೂರೂ ಮಾದರಿಗಳಲ್ಲಿ ಆಡುವಾಗ ಅದು ಸುಲಭವಲ್ಲ. ಭಾರತೀಯ ಆಟಗಾರರಲ್ಲಿ ದೇಶಕ್ಕಾಗಿ ಆಡುವ ಉತ್ಸಾಹ ತುಂಬಾ ಹೆಚ್ಚಾಗಿದೆ ಮತ್ತು ಇದೇ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.














