Last Updated:
ಮಹಾರಾಜ ಸಿನಿಮಾ ಹಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದು, ಇದೇ ಸಿನಿಮಾದಲ್ಲಿ ತಾನೂ ನಟಿಸಬೇಕು ಎಂಬ ಆಸೆಯನ್ನು ವಿಜಯ್ ಸೇತುಪತಿ ವ್ಯಕ್ತಪಡಿಸಿದ್ದಾರೆ.
ವಿಜಯ್ ಸೇತುಪತಿ (Vijay Sethupathi) ಅಭಿನಯದ ಮಹಾರಾಜ (Maharaja) ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಅದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. 2024ರಲ್ಲಿ ತೆರೆಕಂಡ ಈ ತಮಿಳು ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರೇಕ್ಷಕರ ಗಮನ ಸೆಳೆದಿತ್ತು. ವಿಭಿನ್ನ ಕಥೆ ಹಾಗೂ ವಿಜಯ್ ಸೇತುಪತಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಹಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದು, ಇದೇ ಸಿನಿಮಾದಲ್ಲಿ ತಾನೂ ನಟಿಸಬೇಕು ಎಂಬ ಆಸೆಯನ್ನು ವಿಜಯ್ ಸೇತುಪತಿ ವ್ಯಕ್ತಪಡಿಸಿದ್ದಾರೆ.
ನಿತಿಲನ್ ಸ್ವಾಮಿನಾಥನ್ ನಿರ್ದೇಶನದ ಮಹಾರಾಜ ಸಿನಿಮಾ 2024ರಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ವಿಮರ್ಶಕರು ಮತ್ತು ಚಿತ್ರರಂಗದ ಗಣ್ಯರ ಗಮನ ಸೆಳೆದಿತ್ತು. ಭಾರತದ ಹಲವು ಭಾಗಗಳಲ್ಲಿ ಜನಪ್ರಿಯವಾಗಿದ್ದ ಸಿನಿಮಾ ಜಪಾನ್ ಸೇರಿದಂತೆ ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಇದೀಗ ಮಹಾರಾಜ ಸಿನಿಮಾದ ಕಥೆ ಹಾಲಿವುಡ್ ಪ್ರೇಕ್ಷಕರನ್ನು ತಲುಪಲು ಸಿದ್ಧವಾಗಿದೆ. ಚಿತ್ರದ ಹಾಲಿವುಡ್ ರಿಮೇಕ್ ಹಕ್ಕುಗಳನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಖರೀದಿಸಿರುವುದಾಗಿ ನಿರ್ಮಾಪಕರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಿಜಯ್ ಸೇತುಪತಿ ಕೂಡ ಹಾಲಿವುಡ್ ರಿಮೇಕ್‌ನಲ್ಲಿ ನಟಿಸುವ ತಮ್ಮ ಆಸೆಯನ್ನು ಬಹಿರಂಗಪಡಿಸಿದ್ದಾರೆ.
ಮಹಾರಾಜ ಸಿನಿಮಾ ಹಾಲಿವುಡ್‌ಗೆ ಹೋಗುತ್ತಿರುವ ಬಗ್ಗೆ ಮಾತನಾಡಿರುವ ವಿಜಯ್ ಸೇತುಪತಿ, ಈ ಮಟ್ಟಿಗೆ ಸಿನಿಮಾ ಯಶಸ್ಸು ಪಡೆಯುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂಬ ನಂಬಿಕೆ ಆರಂಭದಿಂದಲೂ ತಮ್ಮಲ್ಲಿತ್ತು. ಆದರೆ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಹೇಳಿದ್ದಾರೆ.
ಚಿತ್ರದ ಹಾಲಿವುಡ್ ಹಕ್ಕುಗಳು ಮಾರಾಟವಾದ ವಿಚಾರವನ್ನು ನಿರ್ಮಾಪಕರು ತಮಗೆ ದೂರವಾಣಿ ಮೂಲಕ ತಿಳಿಸಿದರು ಎಂದು ವಿಜಯ್ ಸೇತುಪತಿ ಹೇಳಿದ್ದಾರೆ. ಈ ವೇಳೆ ತಾನು ಹಾಲಿವುಡ್ ರಿಮೇಕ್‌ನಲ್ಲಿ ಒಂದು ಪಾತ್ರ ನೀಡಿದರೆ ಉಚಿತವಾಗಿ ನಟಿಸುವುದಾಗಿ ನಿರ್ಮಾಪಕರಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.
ಮಹಾರಾಜ ಸಿನಿಮಾದ ಕಥೆ ಹಾಲಿವುಡ್‌ನಲ್ಲೂ ಪ್ರೇಕ್ಷಕರ ಗಮನ ಸೆಳೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೀಗ ಮೂಡಿದೆ. ಆದರೆ ರಿಮೇಕ್‌ನಲ್ಲಿ ಮೂಲ ಸಿನಿಮಾದ ಯಾವ ಅಂಶಗಳನ್ನು ಉಳಿಸಿಕೊಳ್ಳಲಾಗುತ್ತದೆ ಮತ್ತು ಕಥೆಯಲ್ಲಿ ಯಾವ ರೀತಿಯ ಬದಲಾವಣೆ ಮಾಡಲಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಇದರ ನಡುವೆ ವಿಜಯ್ ಸೇತುಪತಿ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯನ್ನು ನೀಡಿದ್ದಾರೆ. ಮಹಾರಾಜ 2 ಸಿನಿಮಾ ಕೂಡ ಬರಲಿದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ನಿತಿಲನ್ ಸ್ವಾಮಿನಾಥನ್ ಅವರು ಈಗಾಗಲೇ ಸೀಕ್ವೆಲ್‌ನ ಕಥೆಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ವಿಜಯ್ ಸೇತುಪತಿ ತಿಳಿಸಿದ್ದಾರೆ.














