ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ದೈತ್ಯ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ (Kieron Pollard) 14,999 ರನ್‌ಗಳೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸಿಂಹಾಸನ ಏರಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ 30 ರನ್ ಚಚ್ಚಿದ ಬಟ್ಲರ್, ಪೊಲಾರ್ಡ್ ಅವರ ಸುದೀರ್ಘ ದಾಖಲೆಯನ್ನು ಹಿಂದಿಕ್ಕಿ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ವಿಶ್ವದ ‘ನಂಬರ್ 1’ ಟಿ20 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಪೊಲಾರ್ಡ್ 14,999 ರನ್ ಗಳಿಸಲು ಬರೋಬ್ಬರಿ 754 ಪಂದ್ಯಗಳನ್ನು ಆಡಿದ್ದರೆ, ಜೋಸ್ ಬಟ್ಲರ್ ಕೇವಲ 528 ಪಂದ್ಯಗಳಲ್ಲಿಯೇ 15,000 ರನ್‌ಗಳ ಗಡಿಯನ್ನು ದಾಟಿ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಬಟ್ಲರ್ ಅಂತಾರಾಷ್ಟ್ರೀಯ ಟಿ20 ಹಾಗೂ ಐಪಿಎಲ್ ಸೇರಿ ವಿವಿಧ ಟಿ20 ಲೀಗ್ಗಳು ಸೇರಿ 528 ಪಂದ್ಯಗಳನ್ನಾಡಿ 35.46 ಸರಾಸರಿಯಲ್ಲಿ 15,000+ ರನ್ಗಳಿಸಿದ್ದಾರೆ. 147.46ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಅವರು 9 ಶತಕಗಳು ಹಾಗೂ 107 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 131. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 162 ಟಿ20 ಪಂದ್ಯಗಳಿಂದ 4322 ರನ್ಗಳಿಸಿದ್ದಾರೆ. ಇದರಲ್ಲಿ 29 ಅರ್ಧಶತಕ ಹಾಗೂ 2 ಶತಕ ಸಿಡಿಸಿದ್ದಾರೆ.
1. ಜೋಸ್ ಬಟ್ಲರ್ (ಇಂಗ್ಲೆಂಡ್): 528 ಪಂದ್ಯಗಳು – 15,000 ರನ್ (9 ಶತಕ, 107 ಅರ್ಧಶತಕ)
2. ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್): 754 ಪಂದ್ಯಗಳು – 14,999 ರನ್ (2 ಶತಕ)
3. ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್): 537 ಪಂದ್ಯಗಳು – 14,581 ರನ್ (7 ಶತಕ)
4. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 463 ಪಂದ್ಯಗಳು – 14,562 ರನ್ (22 ಶತಕ)
5. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 439 ಪಂದ್ಯಗಳು – 14,284 ರನ್ (10 ಶತಕ)
ಜೋಸ್ ಬಟ್ಲರ್ ಅವರ ಈ 15,000 ರನ್‌ಗಳ ಬೃಹತ್ ಮೊತ್ತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಹಾಗೂ ವಿಶ್ವದ ಶ್ರೀಮಂತ ಲೀಗ್ ಆದ ಐಪಿಎಲ್ (IPL) ಕೊಡುಗೆ ದೊಡ್ಡದಾಗಿದೆ. ಇಂಗ್ಲೆಂಡ್ ಪರ 160ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನಾಡಿರುವ ಬಟ್ಲರ್ 4,300ಕ್ಕೂ ಅಧಿಕ ರನ್ ಗಳಿಸಿದ್ದು, ಭಾರತದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ಹೆಚ್ಚು ಟಿ20ಐ ರನ್ ಗಳಿಸಿದ ಆಟಗಾರನಾಗಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 29 ಅರ್ಧಶತಕಗಳು ಸೇರಿವೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಇತ್ತೀಚೆಗೆ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಬಟ್ಲರ್ ಐಪಿಎಲ್‌ನಲ್ಲೂ ಅಬ್ಬರಿಸಿದ್ದಾರೆ. 2022ರ ಐಪಿಎಲ್ ಸೀಸನ್‌ನಲ್ಲಿ ಒಂದೇ ವರ್ಷ 4 ಶತಕ ಸೇರಿದಂತೆ 863 ರನ್ ಚಚ್ಚಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಒಟ್ಟಾರೆ 138 ಪಂದ್ಯಗಳಲ್ಲಿ 7 ಶತಕಗಳ ಸಹಿತ 4646 ರನ್ಗಳಿಸಿದ್ದಾರೆ.
ಟಿ20 ಕ್ರಿಕೆಟ್ ಆರಂಭವಾದಾಗಿನಿಂದಲೂ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಕೀರಾನ್ ಪೊಲಾರ್ಡ್ ಅವರಂತಹ ದೈತ್ಯ ಆಟಗಾರರೇ ರನ್ ಬೇಟೆಯಲ್ಲಿ ಇಡೀ ವಿಶ್ವವನ್ನು ಆಳುತ್ತಿದ್ದರು. ಆದರೆ, ಇಂಗ್ಲೆಂಡ್‌ನ ಈ ವಿಕೆಟ್‌ಕೀಪರ್ ಬ್ಯಾಟರ್ ಅತ್ಯಂತ ವೇಗವಾಗಿ ಹಾಗೂ ಸ್ಥಿರವಾದ ಪ್ರದರ್ಶನ ನೀಡುವ ಮೂಲಕ ವಿಂಡೀಸ್ ಆಟಗಾರರನ್ನು ಕೆಳಗಿಳಿಸಿ, ಟಿ20 ಕ್ರಿಕೆಟ್ ಸಾಮ್ರಾಜ್ಯದ ನೂತನ ರಾಜನಾಗಿ ಸಿಂಹಾಸನ ಅಲಂಕರಿಸಿದ್ದಾರೆ. ಬಟ್ಲರ್ ಅವರ ಈ ಅಪರೂಪದ ಮೈಲಿಗಲ್ಲು ಮುಂದಿನ ಹಲವು ವರ್ಷಗಳ ಕಾಲ ಯಾರೂ ಮುರಿಯಲಾಗದ ದಾಖಲೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.













