Last Updated:
ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರಾದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್, ಆಸ್ಟ್ರೇಲಿಯಾ ವಿರುದ್ಧದ ಭಾರತದ ಅಂಡರ್-19 ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
ಭಾರತೀಯ ಕ್ರಿಕೆಟ್ನ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ (Virender Sehwag) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರರು ಕ್ರಿಕೆಟ್ ಅಂಗಳದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಅಂಡರ್-19 ಯೂತ್ ಏಕದಿನ ಪಂದ್ಯದಲ್ಲಿ ಇಂಡಿಯಾ ‘ಎ’ ಪರ ಕಣಕ್ಕಿಳಿದ ಆರ್ಯವೀರ್ ಸೆಹ್ವಾಗ್ (Aryavir Sehwag), ತಮ್ಮ ತಂದೆಯ ರೀತಿಯಲ್ಲೇ ಬ್ಯಾಟ್ ಬೀಸಿ ಬೌಂಡರಿಗಳ ಸುರಿಮಳೆಗೈದರು, ಆದರೆ ಸಣ್ಣ ತಪ್ಪಿನಿಂದ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತಮ್ಮ ಮಗನ ಈ ಮೊದಲ ಐತಿಹಾಸಿಕ ಇನ್ನಿಂಗ್ಸ್ ವೀಕ್ಷಿಸಲು ಸ್ವತಃ ವೀರೇಂದ್ರ ಸೆಹ್ವಾಗ್ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದರು.
ಆರ್ಯವೀರ್ ತಮ್ಮ ಇನ್ನಿಂಗ್ಸ್ನ 5ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಖಾತೆ ತೆರೆದರು. ಇದರ ಬಳಿಕ 2 ಮತ್ತು 3ನೇ ಓವರ್ನಲ್ಲೂ ಅತ್ಯುತ್ತಮ ಬೌಂಡರಿಗಳನ್ನು ಗಳಿಸಿದರು. 5ನೇ ಓವರ್ನಲ್ಲಿ ಆಸ್ಟ್ರೇಲಿಯಾದ ಲೆಗ್-ಬ್ರೇಕ್ ಬೌಲರ್ ಸ್ಪೆನ್ಸರ್ ಗ್ರೀನ್ ಬೌಲಿಂಗ್ನಲ್ಲಿ ಅವರು ಅತ್ಯಾಕರ್ಷಕ ಬೌಂಡರಿ ಬಾರಿಸಿದರು.
ಈ ಇಬ್ಬರೂ ಆಟಗಾರರು ವೇಗದ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಸಾಮಾನ್ಯವಾಗಿ ಡಿಫೆನ್ಸಿವ್ ಆಟಕ್ಕೆ ಹೆಸರುವಾಸಿಯಾದ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್, ಈ ಬಾರಿ ಮೈದಾನದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅನ್ವಯ್ ಕೇವಲ 18 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ಗಳು ಮತ್ತು 2 ಬೌಂಡರಿಗಳ ಸಹಿತ ಅಜೇಯ 38 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ದಿಗ್ಗಜ ಆಟಗಾರರಾದ ಸೆಹ್ವಾಗ್ ಮತ್ತು ದ್ರಾವಿಡ್ ಅವರ ಮಕ್ಕಳು ಒಂದೇ ಪಂದ್ಯದಲ್ಲಿ ಇಂತಹ ಸ್ಫೋಟಕ ಪ್ರದರ್ಶನ ನೀಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.














