Akhilesh Reddy Ban: ಮ್ಯಾಚ್​ ಫಿಕ್ಸಿಂಗ್ ಆರೋಪ! ಭಾರತೀಯ ಮೂಲದ ಕ್ರಿಕೆಟಿಗನನ್ನ 8 ವರ್ಷ ನಿಷೇಧಿಸಿದ ಐಸಿಸಿ | ಕ್ರೀಡಾ ಸುದ್ದಿ | ACTPnews

ಅಖಿಲೇಷ್​ ರೆಡ್ಡಿ


Last Updated:

ದುಬೈನಲ್ಲಿ ನಡೆದ ಅಬುಧಾಬಿ ಟಿ10 ಲೀಗ್ ಟೂರ್ನಮೆಂಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ ಮತ್ತು ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಗಂಭೀರ ಆರೋಪ ಇವರ ಮೇಲೆ ಸಾಬೀತಾಗಿದೆ.

ಅಖಿಲೇಷ್​ ರೆಡ್ಡಿ
ಅಖಿಲೇಷ್​ ರೆಡ್ಡಿ

ಮ್ಯಾಚ್ ಫಿಕ್ಸಿಂಗ್‌ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ಕ್ರಿಕೆಟಿಗ ಅಖಿಲೇಶ್ ರೆಡ್ಡಿ (Bodugum Akhilesh Reddy ) ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council) ಎಂಟು ವರ್ಷಗಳ ಕಾಲ ನಿಷೇಧಿಸಿದೆ. ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿಯು ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು (CC Anti-Corruption Tribunal) ಉಲ್ಲಂಘಿಸಿದ್ದಕ್ಕಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ. ದುಬೈನಲ್ಲಿ ನಡೆದ ಅಬುಧಾಬಿ ಟಿ10 ಲೀಗ್ ಟೂರ್ನಮೆಂಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ ಮತ್ತು ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಗಂಭೀರ ಆರೋಪ ಇವರ ಮೇಲೆ ಸಾಬೀತಾಗಿದೆ.

ಐಸಿಸಿಯ ಸ್ವತಂತ್ರ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿಯು (Anti-Corruption Tribunal) ಸುದೀರ್ಘ ತನಿಖೆಯ ನಂತರ ಈ ತೀರ್ಪನ್ನು ನೀಡಿದೆ. ಅಖಿಲೇಶ್ ರೆಡ್ಡಿ ಅವರನ್ನು ಆರಂಭದಲ್ಲಿ ನವೆಂಬರ್ 21, 2025 ರಂದು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಇದೀಗ ಸಂಪೂರ್ಣ ತನಿಖೆ ಮುಗಿದು ಅಪರಾಧ ಸಾಬೀತಾಗಿರುವುದರಿಂದ, ಈ 8 ವರ್ಷಗಳ ನಿಷೇಧದ ಅವಧಿಯನ್ನು ಅವರ ಅಮಾನತು ಆರಂಭವಾದ ದಿನಾಂಕದಿಂದಲೇ (ನವೆಂಬರ್ 21, 2025) ಅನ್ವಯಿಸಲಾಗುತ್ತದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಸಹ ಆಟಗಾರನಿಗೆ ಆಮಿಷ ಒಡ್ಡಿದ್ದ ಆರೋಪ

ವರದಿಗಳ ಪ್ರಕಾರ, ಅಬುಧಾಬಿ ಟಿ10 ಲೀಗ್‌ನಲ್ಲಿ ಅಸ್ಪಿನ್ ಸ್ಟಾಲಿಯನ್ಸ್ ತಂಡದ ಪರ ಆಡುತ್ತಿದ್ದ ಅಖಿಲೇಶ್ ರೆಡ್ಡಿ, ಪಂದ್ಯವೊಂದಕ್ಕೂ ಮುನ್ನ ಹೋಟೆಲ್ ಕೊಠಡಿಯಲ್ಲಿ ತನ್ನದೇ ತಂಡದ ಬೌಲರ್ ಒಬ್ಬರನ್ನು ಸಂಪರ್ಕಿಸಿದ್ದರು. ಮ್ಯಾನೇಜ್‌ಮೆಂಟ್ ಸೂಚನೆ ಎಂದು ಹೇಳಿ, ಬೌಲಿಂಗ್ ಮಾಡುವಾಗ ಉದ್ದೇಶಪೂರ್ವಕವಾಗಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುವಂತೆ (ಸ್ಪಾಟ್ ಫಿಕ್ಸಿಂಗ್) ಆ ಆಟಗಾರನಿಗೆ ಪ್ರಚೋದಿಸಿದ್ದರು. ಆದರೆ, ಆ ಸಹ ಆಟಗಾರ ಅಖಿಲೇಶ್ ಅವರ ಆಮಿಷವನ್ನು ತಿರಸ್ಕರಿಸಿ, ತಕ್ಷಣವೇ ಈ ವಿಷಯವನ್ನು ಐಸಿಸಿಯ ಭ್ರಷ್ಟಾಚಾರ ವಿರೋಧಿ ಘಟಕದ (ACU) ಗಮನಕ್ಕೆ ತಂದಿದ್ದರು.

ಸಾಕ್ಷ್ಯ ನಾಶಪಡಿಸಲು ಯತ್ನ

ಆ ಆಟಗಾರ ಮ್ಯಾನೇಜ್​ಮೆಂಟ್​​ಗೆ ಮಾಹಿತಿ ನೀಡಿದ ಬಳಿಕ, ತನ್ನ ವಿರುದ್ಧ ತನಿಖೆ ಆರಂಭವಾಗುತ್ತಿದ್ದಂತೆ ಹೆದರಿದ ಅಖಿಲೇಶ್ ರೆಡ್ಡಿ, ತನಿಖಾಧಿಕಾರಿಗಳಿಗೆ ದಾರಿ ತಪ್ಪಿಸಲು ಯತ್ನಿಸಿದ್ದರು. ತಮ್ಮ ಮೊಬೈಲ್ ಫೋನ್‌ನಲ್ಲಿದ್ದ ವಾಟ್ಸಾಪ್ ಚಾಟ್‌ಗಳು, ಸಂದೇಶಗಳು ಮತ್ತು ಕರೆಗಳ ದಾಖಲೆಗಳನ್ನು (Call Logs) ಸಂಪೂರ್ಣವಾಗಿ ಡಿಲೀಟ್ ಮಾಡುವ ಮೂಲಕ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು. ತನಿಖೆಯ ವೇಳೆ ಇದನ್ನು ಕೇವಲ ‘ಡೇಟಾ ಹೈಜೀನ್’ (ರೂಟೀನ್ ಕ್ಲೀನಿಂಗ್) ಎಂದು ಅಖಿಲೇಶ್ ವಾದಿಸಿದ್ದರು. ಆದರೆ ನ್ಯಾಯಮಂಡಳಿ ಇದನ್ನು ತನಿಖೆಗೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಕೃತ್ಯ ಎಂದು ಪರಿಗಣಿಸಿ ರೆಡ್ಡಿಯನ್ನ ಆರೋಪಿ ಎಂದು ಪರಿಗಣಿಸಿದೆ.

ನಿಯಮಾವಳಿಗಳ ಉಲ್ಲಂಘನೆ

ಐಸಿಸಿ ನ್ಯಾಯಮಂಡಳಿಯು ಅಖಿಲೇಶ್ ರೆಡ್ಡಿ ಅವರನ್ನು ಮೂರು ಪ್ರಮುಖ ನಿಯಮಗಳ ಉಲ್ಲಂಘನೆಯಡಿ ದೋಷಿ ಎಂದು ಘೋಷಿಸಿದೆ. ಮೊದಲನೆಯದಾಗಿ, ಪಂದ್ಯದ ಫಲಿತಾಂಶ ಅಥವಾ ಹರಿವನ್ನು ಅಸಹಜವಾಗಿ ಬದಲಾಯಿಸಲು ಯತ್ನಿಸಿದ್ದು (ಆರ್ಟಿಕಲ್ 2.1.1). ಎರಡನೆಯದಾಗಿ, ಮತ್ತೊಬ್ಬ ಆಟಗಾರನನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರಚೋದಿಸಿದ್ದು (ಆರ್ಟಿಕಲ್ 2.1.4). ಮತ್ತು ಮೂರನೆಯದಾಗಿ, ಮೊಬೈಲ್ ಡೇಟಾ ಅಳಿಸಿ ತನಿಖಾಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದು (ಆರ್ಟಿಕಲ್ 2.4.7) ಇವರ ಮೇಲಿನ ಅಪರಾಧಗಳಾಗಿವೆ.

ವೃತ್ತಿ ಜೀವನ ಬಹುತೇಕ ಅಂತ್ಯ

26 ವರ್ಷದ ಆಫ್-ಸ್ಪಿನ್ನರ್ ಆಗಿರುವ ಬೋಡುಗಂ ಅಖಿಲೇಶ್ ರೆಡ್ಡಿ ಮೂಲತಃ ಭಾರತದ ಹೈದರಾಬಾದ್ ಮೂಲದವರಾಗಿದ್ದು, ನಂತರ ಅಮೆರಿಕಕ್ಕೆ ವಲಸೆ ಹೋಗಿದ್ದರು. ಯುಎಸ್ಎ (USA) ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ ಇವರು 2025ರ ಏಪ್ರಿಲ್‌ನಲ್ಲಿ ಕೇಮನ್ ಐಲ್ಯಾಂಡ್ಸ್ ವಿರುದ್ಧ ಅಂತರರಾಷ್ಟ್ರೀಯ ಟಿ20 (T20I) ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ ಅಲ್ಪಾವಧಿಯ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇವರು ಅಮೆರಿಕ ಪರ 4 ಟಿ20 ಪಂದ್ಯಗಳನ್ನು ಆಡಿ 1 ವಿಕೆಟ್ ಪಡೆದಿದ್ದಾರೆ.

ಆದರೆ ಈ ನಿಷೇಧದ ಆದೇಶದೊಂದಿಗೆ ಅಖಿಲೇಶ್ ರೆಡ್ಡಿ ಅವರ ಕ್ರಿಕೆಟ್ ಬದುಕು ಸದ್ಯಕ್ಕೆ ಸಂಪೂರ್ಣವಾಗಿ ಕೊನೆಗೊಂಡಂತಾಗಿದೆ. ಮುಂಬರುವ 8 ವರ್ಷಗಳ ಕಾಲ ಅವರು ಯಾವುದೇ ಅಧಿಕೃತ ಲೀಗ್‌ಗಳು, ದೇಶೀಯ ಅಥವಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡುವಂತಿಲ್ಲ ಹಾಗೂ ಯಾವುದೇ ಕ್ರಿಕೆಟ್ ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳುವಂತಿಲ್ಲ. ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ಬಲವಾದ ಸಂದೇಶವನ್ನು ಐಸಿಸಿ ಈ ಕಠಿಣ ತೀರ್ಪಿನ ಮೂಲಕ ಜಗತ್ತಿಗೆ ರವಾನಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed