Last Updated:
ತಮ್ಮ ಸಹೋದರ ಸೊಹೈಲ್ ಖಾನ್ಗೆ ಬೆಂಬಲ ನೀಡಲು ‘ಅಲೈಯನ್ಸ್’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಲ್ಮಾನ್ ಖಾನ್, ಅನೇಕ ವಿಚಾರಗಳ ಬಗ್ಗೆ ಮಾತನಾಡಿ ಜೈಲಿನ ಅನುಭವವನ್ನು ನೆನಪಿಸಿಕೊಂಡರು. ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದರೂ, ಜೈಲಿನಲ್ಲಿದ್ದಾಗ ಎದುರಿಸಿದ ಪರಿಸ್ಥಿತಿಗಳು ತಮ್ಮ ಬದುಕಿನ ಅತ್ಯಂತ ಕಠಿಣ ಅನುಭವಗಳಲ್ಲಿ ಒಂದಾಗಿದ್ದವು ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ (Bollywood Actor Salman Khan) ತಮ್ಮ ಜೀವನದಲ್ಲಿ ಎದುರಿಸಿದ ಹಲವು ಸವಾಲುಗಳ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಅಮೆಜಾನ್ ಪ್ರೈಮ್ನ ರಿಯಾಲಿಟಿ ಶೋ ‘ಅಲೈಯನ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಜೋಧ್ಪುರ ಜೈಲಿನಲ್ಲಿ ಕಳೆದ ದಿನಗಳ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆ ಸಮಯದಲ್ಲಿ 50ರಿಂದ 60 ಮಂದಿ ಒಂದೇ ಶೌಚಾಲಯವನ್ನು ಬಳಸಬೇಕಾಗಿದ್ದ ಪರಿಸ್ಥಿತಿ ಸೇರಿದಂತೆ ಜೈಲಿನ ಕಠಿಣ ಜೀವನದ ಕುರಿತು ಅವರು ಹೇಳಿದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಮ್ಮ ಸಹೋದರ ಸೊಹೈಲ್ ಖಾನ್ಗೆ ಬೆಂಬಲ ನೀಡಲು ‘ಅಲೈಯನ್ಸ್’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಲ್ಮಾನ್ ಖಾನ್, ಅನೇಕ ವಿಚಾರಗಳ ಬಗ್ಗೆ ಮಾತನಾಡಿ ಜೈಲಿನ ಅನುಭವವನ್ನು ನೆನಪಿಸಿಕೊಂಡರು. ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದರೂ, ಜೈಲಿನಲ್ಲಿದ್ದಾಗ ಎದುರಿಸಿದ ಪರಿಸ್ಥಿತಿಗಳು ತಮ್ಮ ಬದುಕಿನ ಅತ್ಯಂತ ಕಠಿಣ ಅನುಭವಗಳಲ್ಲಿ ಒಂದಾಗಿದ್ದವು ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್, ಹಲವು ವರ್ಷಗಳ ಹಿಂದೆ ನಾನು ಜೈಲಿನಲ್ಲಿದ್ದಾಗ, ನಮ್ಮ ಮುಂದೆ ಕಬ್ಬಿಣದ ಸರಪಳಿಗಳಿದ್ದವು. ಸುಮಾರು 50ರಿಂದ 60 ಕೈದಿಗಳನ್ನು ಒಂದೇ ಸಣ್ಣ ಜಾಗದಲ್ಲಿ ಇರಿಸಲಾಗಿತ್ತು. ಅಲ್ಲಿ ಕೇವಲ ಒಂದು ಭಾರತೀಯ ಶೈಲಿಯ ಶೌಚಾಲಯ ಮಾತ್ರ ಇತ್ತು. ನೆಲದಲ್ಲಿ ಕೊಳಕು ನೀರು ತುಂಬಿಕೊಂಡಿರುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ ಬದುಕುವುದು ತುಂಬಾ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.
1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣದ ವೇಳೆ ಜೋಧ್ಪುರದ ಸಮೀಪ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪದಲ್ಲಿ ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣಮೃಗ ಪವಿತ್ರ ಪ್ರಾಣಿಯಾಗಿರುವುದರಿಂದ ಈ ಪ್ರಕರಣ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಕಾಲ ನ್ಯಾಯಾಂಗ ಪ್ರಕ್ರಿಯೆ ನಡೆಯಿತು. 2018ರಲ್ಲಿ ಜೋಧ್ಪುರ ಜೈಲಿನಲ್ಲಿ ಅವರು ಕೆಲ ದಿನಗಳನ್ನು ಕಳೆಯಬೇಕಾಯಿತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಸೊಹೈಲ್ ಖಾನ್ ಎಲಿಮಿನೇಟ್ ಆದ ನಂತರ ಭಾವುಕರಾಗಿದ್ದರು. ಈ ಸಂದರ್ಭದಲ್ಲಿ ಅವರನ್ನು ಸಮಾಧಾನಪಡಿಸಲು ಸಲ್ಮಾನ್ ಖಾನ್ ಸೆಟ್ಗೆ ಆಗಮಿಸಿದ್ದು, ಇಬ್ಬರು ಸಹೋದರರ ನಡುವಿನ ಆತ್ಮೀಯ ಕ್ಷಣಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
ಸಲ್ಮಾನ್ ಖಾನ್ ಜೈಲು ಜೀವನದ ಅನುಭವ ಹಂಚಿಕೊಂಡಿರುವ ಈ ಪ್ರೊಮೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Bangalore [Bangalore],Bangalore,Karnataka














