Sports
oi-Naveen Kumar N
ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ಕ್ಕೆ ಅರ್ಹತೆ ಪಡೆದುಕೊಂಡಿವೆ. ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದ ಶ್ರೀಲಂಕಾ ಮೊದಲನೆಯ ತಂಡವಾಗಿ ಅರ್ಹತೆ ಪಡೆದುಕೊಂಡರೆ, ಎರಡನೇ ತಂಡವಾಗಿ ನೆದರ್ಲ್ಯಾಂಡ್ಸ್ ಅರ್ಹತೆ ಪಡೆದುಕೊಂಡಿದೆ.
ಅರ್ಹತಾ ಪಂದ್ಯಾವಳಿಯಲ್ಲಿ ಕೆರಿಬಿಯನ್ ದೈತ್ಯರಾದ ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲಾಂಡ್ ತಂಡಗಳನ್ನು ಸೋಲಿಸುವ ಮೂಲಕ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಮತ್ತೊಂದೆಡೆ ಇಡೀ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದ ಶ್ರೀಲಂಕಾ ಭಾನುವಾರ ನಡೆದ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಫೈನಲ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 128 ರನ್‌ಗಳ ಭಾರಿ ಜಯ ದಾಖಲಿಸಿತು.
ಇದರೊಂದಿಗೆ 2023ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ 10 ತಂಡಗಳ ಹೆಸರು ಅಂತಿಮವಾಗಿದೆ. ಈ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಆಡುವ ತಂಡ ಕೂಡ ಅಂತಿಮವಾಗಿದೆ.
ಭಾರತ-ನೆದರ್ಲ್ಯಾಂಡ್ಸ್ ಮುಖಾಮುಖಿ
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಏಕದಿನ ವಿಶ್ವಕಪ್‌ನ 5 ಪಂದ್ಯಗಳು ನಡೆಯಲಿವೆ. ಭಾರತ ಕೂಡ ಚಿನ್ನಸ್ವಾಮಿ ಅಂಗಳದಲ್ಲಿ ಒಂದು ಪಂದ್ಯವನ್ನಾಡಲಿದ್ದು ನವೆಂಬರ್ 11ರಂದು ನೆದರ್ಲ್ಯಾಂಡ್ಸ್ ವಿರುದ್ಧ ಸೆಣೆಸುವುದು ಖಚಿತವಾಗಿದೆ. ಹೌದು, ಭಾರತ ಏಕದಿನ ವಿಶ್ವಕಪ್‌ನ ಲೀಗ್ ಹಂತದ ತನ್ನ ಕೊನೆಯ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲಿದ್ದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಭಾರತ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಏಕದಿನ ಮಾದರಿಯಲ್ಲಿ ಇದುವರೆಗೂ ಎರಡು ಬಾರಿ ಮುಖಾಮುಖಿಯಾಗಿದ್ದು ಎರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಆದರೆ, ಈ ಬಾರಿ ನೆದರ್ಲ್ಯಾಂಡ್ಸ್ ತಂಡವನ್ನು ಹಗುರವಾಗಿ ಪರಿಗಣಿಸಲಾಗದು.
ಅರ್ಹತಾ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನೇ ಸೋಲಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದೆ. ಅನುಭವಿ ಆಟಗಾರರ ಅನುಪಸ್ಥಿತಿಯ ನಡುವೆಯೇ ನೆದರ್ಲ್ಯಾಂಡ್ಸ್ ಈ ಸಾಧನೆ ಮಾಡಿದ್ದು, ಅನುಭವಿ ಆಟಗಾರರು ಏಕದಿನ ವಿಶ್ವಕಪ್‌ನಲ್ಲಿ ಆಡಲಿದ್ದು, ಯಾವ ತಂಡಕ್ಕೆ ಶಾಕ್ ಕೊಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಬೆಂಗಳೂರಿನ 5 ಪಂದ್ಯಗಳ ವಿವರ
ಏಕದಿನ ವಿಶ್ವಕಪ್ ಪಂದ್ಯಾವಳಿಯು ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ನವೆಂಬರ್ 18ರಂದು ಇದೇ ಅಂಗಳದಲ್ಲಿ ಫೈನಲ್ ಪಂದ್ಯದ ಮೂಲಕ ಕೊನೆಯಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಬೆಂಗಳೂರಿನಲ್ಲಿ 5 ಪಂದ್ಯಗಳು ನಡೆಯಲಿದ್ದು, ಭಾರತ, ನೆದರ್ಲ್ಯಾಂಡ್ಸ್, ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಚಿನ್ನಸ್ವಾಮಿ ಅಂಗಳದಲ್ಲಿ ಸೆಣೆಸಲಿವೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಬೆಂಗಳೂರಿನಲ್ಲಿ ತಲಾ ಎರಡು ಪಂದ್ಯಗಳನ್ನು ಆಡಲಿವೆ.
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಏಕದಿನ ವಿಶ್ವಕಪ್ ಪಂದ್ಯಗಳು
ಅಕ್ಟೋಬರ್ 20, ಶುಕ್ರವಾರ : ಆಸ್ಟ್ರೇಲಿಯಾ-ಪಾಕಿಸ್ತಾನ ಸಮಯ: ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 26, ಗುರುವಾರ : ಇಂಗ್ಲೆಂಡ್-ಶ್ರೀಲಂಕಾ ಸಮಯ: ಮಧ್ಯಾಹ್ನ 2 ಗಂಟೆಗೆ
ನವೆಂಬರ್ 4, ಶನಿವಾರ : ನ್ಯೂಜಿಲೆಂಡ್- ಪಾಕಿಸ್ತಾನ ಸಮಯ: ಬೆಳಗ್ಗೆ 10.30 ಗಂಟೆಗೆ
ನವೆಂಬರ್ 9, ಗುರುವಾರ : ನ್ಯೂಜಿಲೆಂಡ್- ಶ್ರೀಲಂಕಾ ಸಮಯ: ಮಧ್ಯಾಹ್ನ 2 ಗಂಟೆಗೆ
ನವೆಂಬರ್ 11, ಶನಿವಾರ : ಭಾರತ- ನೆದರ್ಲ್ಯಾಂಡ್ಸ್ ಸಮಯ: ಮಧ್ಯಾಹ್ನ 2 ಗಂಟೆಗೆ
English summary
Sri Lanka and the Netherlands have secured qualification for the upcoming ODI World Cup 2023. On November 11th, India will face the Netherlands at Chinnaswamy Stadium in Bengaluru.
Story first published: Sunday, July 9, 2023, 19:48 [IST]