India
oi-Ravindra Gangal
ಕೋಲ್ಕತ್ತಾ, ಜುಲೈ 08: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯು ಹಿಂಸಾರೂಪ ಪಡೆದುಕೊಂಡಿದೆ. ಶನಿವಾರ ಬೆಳಿಗ್ಗೆಯಿಂದ ಈ ವರೆಗೂ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ನೂರಾರು ಮಂದಿಗೆ ಗಾಯಗಳಾಗಿವೆ. ಮತದಾನ ಕೇಂದ್ರಗಳಿಗೆ ನುಗ್ಗುತ್ತಿರುವ ಉದ್ರಿಕ್ತರು ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದಾರೆ. ಮತದಾನ ಕೇಂದ್ರವೊಂದರ ಬಳಿ ನಡೆದ ಗುಂಡಿನ ದಾಳಿಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಹತ್ಯೆಯಾದವರಲ್ಲಿ ಆರು ತೃಣಮೂಲ ಸದಸ್ಯರು, ಬಿಜೆಪಿ, ಸಿಪಿಎಂ, ಕಾಂಗ್ರೆಸ್ ಮತ್ತು ಐಎಸ್‌ಎಫ್‌ನ ತಲಾ ಒಬ್ಬರು ಕಾರ್ಯಕರ್ತ ಸೇರಿದ್ದಾರೆ.
ಕೇಂದ್ರ ಭದ್ರತಾ ಪಡೆಗಳನ್ನು ತರಾಟೆಗೆ ತೆಗೆದುಕೊಂಡಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಚುನಾವಣೆಗೆ ನಿಯೋಜಿಸಲಾಗಿರುವ ಕೇಂದ್ರದ ಭದ್ರತಾ ಪಡೆಗಳಿಂದ ದೊಡ್ಡ ವೈಫಲ್ಯ ಎಂದು ಆರೋಪಿಸಿದೆ.
ರಾಜಸ್ಥಾನದಲ್ಲಿ ಅರಳಲಿದೆ ಕಮಲ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಜೆಪಿ ಉಸ್ತುವಾರಿ ಹೊಣೆ
ಹಿಂಸಾತ್ಮಕ ಘರ್ಷಣೆಗಳಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಲ್ಲದೇ, ಹಲವರಿಗೆ ಗಂಭೀರ ಗಾಯಗಳಾಗಿವೆ. ರಾಜ್ಯದ ಹಲವು ಭಾಗಗಳಲ್ಲಿ ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
22 ಜಿಲ್ಲಾ ಪರಿಷತ್‌ಗಳು, 9,730 ಪಂಚಾಯಿತಿ ಸಮಿತಿಗಳು ಮತ್ತು 63,229 ಗ್ರಾಮ ಪಂಚಾಯಿತಿಗಳ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 5.67 ಕೋಟಿ ಜನರು 2.06 ಲಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಮಧ್ಯಾಹ್ನ 1 ಗಂಟೆಯವರೆಗೆ ಶೇ.36.66ರಷ್ಟು ಮತದಾನವಾಗಿದೆ.
ಗವರ್ನರ್ ಸಿವಿ ಆನಂದ ಬೋಸ್ ಉತ್ತರ 24 ಪರಗಣ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಹಿಂಸಾಚಾರದಲ್ಲಿ ಗಾಯಗೊಂಡ ಜನರಿಗೆ ಸಾಂತ್ವನ ಹೇಳಿ, ಮತದಾರರೊಂದಿಗೆ ಸಂವಾದ ನಡೆಸಿದ್ದಾರೆ.
ಜೂನ್ 8 ರಂದು ಚುನಾವಣೆ ಘೋಷಣೆಯಾದ ದಿನದಿಂದ, ಬಂಗಾಳದಾದ್ಯಂತ ವ್ಯಾಪಕ ಹಿಂಸಾಚಾರ ವರದಿಯಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ವರೆಗೆ 30 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತೃಣಮೂಲ ಪ್ರಚಾರದ ನೇತೃತ್ವ ವಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬಿಜೆಪಿಯ ಪ್ರಚಾರದ ನೇತೃತ್ವ ವಹಿಸಿದ್ದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ತಮ್ಮ ಪಕ್ಷಗಳ ಚುನಾವಣಾ ಪ್ರಚಾರವನ್ನು ಮುನ್ನಡೆಸಿದ್ದರು.
‘ಜನರು ಮತ ಚಲಾಯಿಸುತ್ತಾರೆಯೇ ಹೊರತು ಕೇಂದ್ರದ ಶಕ್ತಿಗಳಲ್ಲ ಎಂಬುದನ್ನು ಬಿಜೆಪಿ ಮರೆತಂತಿದೆ. ಬಿಜೆಪಿಗೆ ಜನರ ಬೆಂಬಲವಿಲ್ಲದಿದ್ದರೆ, ಕೇಂದ್ರದ ಶಕ್ತಿಗಳನ್ನು ಉಪಯೋಗಿಸಿದರೂ ಜನಾದೇಶ ಬದಲಾಗುವುದಿಲ್ಲ’ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಅಮಿತ್ ಮಾಳವೀಯ, ‘ಬೆಳಿಗ್ಗೆಯಿಂದ 9 ಜನರು ಸಾವನ್ನಪ್ಪಿದ್ದಾರೆ. ಇವತ್ತು ಇನ್ನೂ ಎಷ್ಟು ಮಂದಿ ಸಾಯುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಈ ರಕ್ತಪಾತಕ್ಕೆ ಮಮತಾ ಬ್ಯಾನರ್ಜಿ ಹೊಣೆಗಾರರು. ಅವರು ಸಿಎಪಿಎಫ್ ಅನ್ನು ನಿಯೋಜಿಸಲಿಲ್ಲ “ಎಂದು ಟ್ವೀಟ್ ಮಾಡಿದ್ದಾರೆ.
ಕೂಚ್‌ಬೆಹಾರ್ ಜಿಲ್ಲೆಯ ಫಲಿಮಾರಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧಬ್ ಬಿಸ್ವಾಸ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ಕಪಾಸ್‌ದಂಗ ಪ್ರದೇಶದಲ್ಲಿ ರಾತ್ರೋರಾತ್ರಿ ನಡೆದ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಮೃತರನ್ನು ಬಾಬರ್ ಅಲಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಖಾರ್‌ಗ್ರಾಮ್ ಪ್ರದೇಶದಲ್ಲಿ ಮತ್ತೊಬ್ಬ ಟಿಎಂಸಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಆತನನ್ನು ಸಾಬಿರುದ್ದೀನ್ ಎಸ್ಕೆ ಎಂದು ಗುರುತಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಟಿಎಂಸಿ ಬೂತ್ ಸಮಿತಿ ಸದಸ್ಯ ಗಣೇಶ್ ಸರ್ಕಾರ್ ಸಾವನ್ನಪ್ಪಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಟಿಎಂಸಿ ನಾಯಕನ ಸಹೋದರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಣಿಕ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿಶಾರತ್ತೋಲಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಾಲೆಕ್ ಶೇಖ್ ಎಂದು ಗುರುತಿಸಲಾಗಿದೆ.
English summary
West Bengal Panchayat elections have turned violent. At least 12 people have been killed and hundreds injured since Saturday morning,