Weekend Trip Plan:ಕೊಡಗಿನ ಹೆಬ್ಬಾಗಿಲ್ಲಲ್ಲೇ ಇದೆ ಪ್ರವಾಸಿಗರ ಮನಸಿಗೆ ಮುದ ನೀಡುವ ಸ್ವರ್ಗದಂತಹ ತಾಣ | Travel News: Kodagu Cauvery Nisargadhama Speciality

Travel

oi-Lavakumar B M

By ಲವ ಕುಮಾರ್‌

|

Google Oneindia Kannada News

ಮಡಿಕೇರಿ, ಜುಲೈ 20: ಕವಲೊಡೆದು ಭೋರ್ಗರೆದು ಹರಿಯುವ ಕಾವೇರಿ ನದಿ, ಅದರ ದಡದದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಚ್ಚಹಸಿರಿನ ಮರಗಿಡಗಳು, ಬಿದಿರು ಮೆಳೆಗಳು, ಚಿಲಿಪಿಲಿ ಗುಟ್ಟುವ ಹಕ್ಕಿಗಳು, ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜರಾಜ, ಛಂಗನೆ ಜಿಗಿದು ಓಡುವ ಜಿಂಕೆಗಳು..ಹೀಗೆ ಒಂದಾ.. ಎರಡಾ? ಹತ್ತಾರು ನಿಸರ್ಗ ಸುಂದರ ರಮಣೀಯತೆಯನ್ನು ತನ್ನೊಡಲಲ್ಲಿ ತುಂಬಿಕೊಂಡಿರುವ ತಾಣವೇ ಕಾವೇರಿ ನಿಸರ್ಗಧಾಮ.

ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ಕಾವೇರಿ ನಿಸರ್ಗಧಾಮಕ್ಕೆ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ದಿನ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಪ್ರಕೃತಿಯ ನಡುವೆ ಒಂದಷ್ಟು ಹೊತ್ತು ವಿಹರಿಸಿ ಹಿಂತಿರುಗುತ್ತಾರೆ. ಕಳೆದೊಂದು ದಶಕದೀಚೆಗೆ ಕಾವೇರಿ ನಿಸರ್ಗಧಾಮಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣ ಈ ತಾಣದ ಸುತ್ತಲೂ ಪ್ರವಾಸೋದ್ಯಮ ಭಾರೀ ಅಭಿವೃದ್ಧಿಯಾಗಿದೆ.

Travel News: Kodagu Cauvery Nisargadhama Speciality

ಮುಂಗಾರು ಮಳೆ ಸುರಿದಾಗ ಕಾವೇರಿ ನದಿ ಧುಮ್ಮಿಕ್ಕಿ ಹರಿದಾಗ ಇಲ್ಲಿನ ಚೆಲುವು ಇಮ್ಮಡಿಯಾಗುತ್ತದೆ. ಆದರೆ ಈ ಹಿಂದೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದಾಗ ಕೆಲವು ದಿನಗಳ ಕಾಲ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಉಳಿದಂತೆ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರಿಗೆ ವೀಕ್ಷಣೆಗೆ ತೆರೆದಿಡಲಾಗುತ್ತದೆ.

ತೂಗು ಸೇತುವೆಯೇ ಪ್ರಮುಖ ಆಕರ್ಷಣೆ

ಹಾಗೆನೋಡಿದರೆ ಕುಶಾಲನಗರ ಕೊಡಗಿನ ಹೆಬ್ಬಾಗಿಲಾಗಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡಲು ಮರೆಯುವುದಿಲ್ಲ. ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಪ್ರಮುಖ ಆಕರ್ಷಣೆಯಾಗಿದ್ದು, ತುಂಬಿ ಹರಿಯುವ ಕಾವೇರಿ ನದಿಮೇಲೆ ನಿರ್ಮಾಣವಾಗಿರುವ ಈ ಸೇತುವೆ ಮೇಲೆ ಹೆಜ್ಜೆ ಹಾಕುವುದು ಒಂದು ಮರೆಯಲಾರದ ಅನುಭವವಾಗಿದೆ.

Travel News: Kodagu Cauvery Nisargadhama Speciality

ತೂಗುಸೇತುವೆಯೇ ಕಾವರಿ ನಿಸರ್ಗಧಾಮದ ಪ್ರವೇಶ ದ್ವಾರವಾಗಿದ್ದು, ಇದರ ಮೂಲಕ ಕಾವೇರಿ ನದಿಯನ್ನು ದಾಟಿ ಒಳಹೋದರೆ ನಿಸರ್ಗದ ಸುಂದರ ನೋಟ ಕಣ್ಮುಂದೆ ಬಂದು ನಿಲ್ಲುತ್ತದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅದರ ಮೂಲಕ ಸಾಗುತ್ತಾ ಹೋದರೆ ಇಡೀ ನಿಸರ್ಗಧಾಮದ ಸೌಂದರ್ಯವನ್ನು ಸವಿದು ಬರಬಹುದಾಗಿದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ.

ಬಿದಿರು ಮೆಳೆಗಳ ಮೇಲೆ ಕುಟೀರ

ಈ ವಿಹಾರ ಧಾಮದಲ್ಲಿ ಮಕ್ಕಳು ಆಡಿ ನಲಿಯಲು ಏಣಿಯಾಟ, ಉಯ್ಯಾಲೆ, ಉದ್ದಜಿಗಿತ ಮುಂತಾದ ಆಟದ ಸಾಮಾಗ್ರಿಗಳನ್ನಿಡಲಾಗಿದೆ. ಇಲ್ಲಿಂದ ಮುಂದೆ ಬಿದಿರುಮೆಳೆಗಳ ನಡುವೆ ನಡೆದರೆ ಆನೆ ಸವಾರಿ ನಡೆಸುವ ಜಾಗವನ್ನು ತಲುಪಬಹುದು. ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ.

ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ. ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಜೊತೆಗೆ ಇಲ್ಲಿನ ನಿಸರ್ಗ ಸೌಂದರ್ಯ ಸವಿಯ ಬಹುದಾಗಿದೆ.

Travel News: Kodagu Cauvery Nisargadhama Speciality

ಕಾವೇರಿ ನದಿಯಲ್ಲಿ ದೋಣಿ ವಿಹಾರ

ನಿಸರ್ಗಧಾಮದಲ್ಲಿ ಅಡ್ಡಾಡುತ್ತಾ ಅಂಚಿಗೆ ಬಂದರೆ ವಿಶಾಲವಾಗಿ ಹರಿಯವ ಕಾವೇರಿ ನದಿಯ ದರ್ಶನವಾಗುತ್ತದೆ. ಇಲ್ಲಿ ಪ್ರವಾಸಿಗರಿಗಾಗಿ ದೋಣಿ ವಿಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ನದಿಯ ಒಳಭಾಗದಲ್ಲಿ ವಿಹಾರ ಮಾಡುವ ಸಂದರ್ಭ ಅಪಾಯವಾಗದಿರಲಿ ಎಂಬ ಉದ್ದೇಶದಿಂದ ನದಿಯಲ್ಲಿರುವ ಸುಳಿ ಹಾಗೂ ಹೆಬ್ಬಂಡೆಗಳಿರುವ ಸ್ಥಳಗಳಲ್ಲಿ ಅಪಾಯದ ಸಂಕೇತವಾದ ಕೆಂಪು ಬಾವುಟವನ್ನು ಹಾರಿಸಲಾಗಿದೆ.

ಇಲ್ಲಿ ವಿಹಾರಕ್ಕಾಗಿ ಕಪಿಲಾ, ಭದ್ರಾ, ನೇತ್ರಾವತಿ, ತುಂಗಾ, ನರ್ಮದಾ, ಬ್ರಹ್ಮಪುತ್ರ ಹೆಸರಿನ ದೋಣಿಗಳಿವೆ. ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ. ಇಟ್ಟಿಗೆ ಗೋಡೆ, ತೇಗದ ಮರ, ಹುಲ್ಲಿನ ಛಾವಣಿಯಿಂದ ನಿರ್ಮಿಸಲಾದಂತಹ ಐದು ಕಾಟೇಜ್‌ಗಳಿದ್ದು, ಇವುಗಳಿಗೆ ನಿಗದಿತ ಶುಲ್ಕ ಪಾವತಿಸ ಬೇಕಾಗುತ್ತದೆ. ಪ್ರವಾಸಿಗರಿಗಾಗಿಯೇ ಇಲ್ಲೊಂದು ಮಾಹಿತಿ ಕೇಂದ್ರವನ್ನು ಕೂಡ ನಿರ್ಮಿಸಲಾಗಿದೆ.

1989ರಲ್ಲಿ ಕಾವೇರಿ ನಿಸರ್ಗಧಾಮ ಆರಂಭ

ಕಾವೇರಿ ನದಿ ಕವಲೊಡೆದು ಹರಿದ ಪರಿಣಾಮ ದ್ವೀಪ ಪ್ರದೇಶ ನಿರ್ಮಾಣಗೊಂಡಿದ್ದು, ಇದು 1989ರ ತನಕವೂ ಅರಣ್ಯಪ್ರದೇಶವಾಗಿ ಉಳಿದಿತ್ತು. ಆದರೆ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬಹುದು ಎಂಬ ಕಲ್ಪನೆ ಬಂದಿದ್ದು ಅವತ್ತಿನ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಆರ್.ಕೆ.ತೋರ್ವೆ ಹಾಗೂ ವಲಯಾಧಿಕಾರಿ ಟಿ.ಎನ್.ನಾರಾಯಣ್‌ರವರಿಗೆ. ಅಲ್ಲಿ ತನಕ ಬಿದಿರು ಮೆಳೆ, ಕಾಡಿನಿಂದ ಆವೃತ್ತವಾಗಿದ್ದ ದ್ವೀಪಕ್ಕೆ ಹೊಸತನ ನೀಡಿ ಪ್ರವಾಸಿ ತಾಣ ಮಾಡುವ ನಿರ್ಧಾರ ಕೈಗೊಂಡರು. ಆದರೆ ಕಾವೇರಿ ನದಿಯನ್ನು ದಾಟಿ ದ್ವೀಪ ಪ್ರದೇಶಕ್ಕೆ ಹೋಗುವುದು ಹೇಗೆ?

ಇಲ್ಲಿ ಸೇತುವೆಯ ಅಗತ್ಯತೆಯಿತ್ತು. ಆದರೆ ಕಾಂಕ್ರಿಟ್ ಸೇತುವೆ ನಿರ್ಮಿಸುವ ಸ್ಥಿತಿಯಲ್ಲಿರಲಿಲ್ಲ. ಈ ವೇಳೆ ನೆನಪಾಗಿದ್ದು ತೂಗುಸೇತುವೆಗಳ ನಿರ್ಮಾತೃ ಸುಳ್ಯದ ಗಿರೀಶ್ ಭಾರದ್ವಾಜ್. ಅವರು ಮೊದಲ ಬಾರಿಗೆ ತೂಗು ಸೇತುವೆಯನ್ನು ನಿರ್ಮಿಸಿಕೊಟ್ಟರು. ಅವತ್ತಿನ ದಿನಗಳಲ್ಲಿ ಈ ತೂಗುಸೇತುವೆ ಪ್ರವಾಸಿಗರ ಆಕರ್ಷಣೆಯಾಗಿತ್ತು. 1989ರಲ್ಲಿ ಅಧಿಕೃತ ಪ್ರವಾಸಿ ತಾಣವಾಗಿ ಕಾವೇರಿ ನಿಸರ್ಗಧಾಮ ಪ್ರವಾಸಿಗರಿಗೆ ತೆರೆದುಕೊಂಡ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತಲ್ಲದೆ, ಈ ತೂಗುಸೇತುವೆ ಮೇಲೆ ನಡೆದಾಡಲೆಂದೇ ಪ್ರವಾಸಿಗರು ಇತ್ತ ಬರತೊಡಗಿದರು. ತದ ನಂತರ ಹೊಸ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ.

ಕುಶಾಲನಗರದಲ್ಲಿ ಜಿಗಿತುಕೊಂಡ ಪ್ರವಾಸೋದ್ಯಮ

ಇನ್ನು ಕಾವೇರಿ ನಿಸರ್ಗಧಾಮದ ಬಗ್ಗೆ ಹೇಳಬೇಕೆಂದರೆ ನಿಸರ್ಗಧಾಮ ನಿರ್ಮಾಣಗೊಂಡಿರುವ ದ್ವೀಪವು ಸುಮಾರು 65 ಎಕರೆ ಪ್ರದೇಶವನ್ನು ಹೊಂದಿದ್ದು, ಕೇವಲ 15 ಎಕರೆ ಪ್ರದೇಶದಲ್ಲಿ ಮಾತ್ರ ವಿವಿಧ ಸವಲತ್ತುಗಳನ್ನು ಕಲ್ಪಿಸಿ ನಿಸರ್ಗಧಾಮವನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರವಾಸಿ ಮಾಹಿತಿ ಕೇಂದ್ರವಿದೆ. ಮೊಲಗಳಿವೆ. ಕಾವೇರಿ ತಾಯಿಯ ಪ್ರತಿಮೆಯೂ ಇದೆ.

ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಇಲ್ಲಿನ ಜಾನಪದ ನೃತ್ಯ ಪ್ರಕಾರಗಳಾದ ಮಹಿಳೆಯರ ಉಮ್ಮತ್ತಾಟ್, ಪುರುಷರ ಕೋಲಾಟ್ ಮೊದಲಾದವುಗಳನ್ನು ಪರಿಚಯಿಸುವ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಕಾವೇರಿ ನಿಸರ್ಗಧಾಮ ಇತ್ತೀಚೆಗಿನ ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದ್ದು, ಈ ತಾಣದ ಸುತ್ತಲೂ ವ್ಯಾಪಾರ ವಹಿವಾಟುಗಳು ಜಿಗಿತುಕೊಂಡಿವೆ. ಬಹಳಷ್ಟು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary

Weekend Travel: Here is the more information about Kodagu Cauvery Nisargadhama. Know more.

Source link