Travel
oi-Naveen Kumar N
ಧಾರವಾಡ, ಜೂನ್ 25: ಬಹು ನಿರೀಕ್ಷಿತ ರಾಜ್ಯದ ಎರಡನೇ ವಂದೇ ಭಾರತ್ ರೈಲು ಓಡಾಟ ಆರಂಭವಾಗಲು ದಿನ ಗಣನೆ ಆರಂಭವಾಗಿದೆ. ಜೂನ್ 27ರಂದು ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಈಗಾಗಲೇ ಧಾರವಾಡ ರೈಲ್ವೆ ನಿಲ್ದಾಣ ತಲುಪಿದ್ದು, ಮಂಗಳವಾರದಿಂದ ಸಂಚಾರ ಆರಂಭಿಸಲಿದೆ. ರೈಲ್ವೆ ಇಲಾಖೆ ಈಗ ಮೊದಲ ದಿನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಾವ ನಿಲ್ದಾಣವನ್ನು ಎಷ್ಟು ಗಂಟೆಗೆ ತಲುಪಲಿದೆ ಎಂದು ಮಾಹಿತಿ ನೀಡಿದೆ.
ರೈಲ್ವೆ ಇಲಾಖೆ ನೀಡಿರುವ ವೇಳಾಪಟ್ಟಿಯ ಪ್ರಕಾರ ಜೂನ್ 27ರಂದು ಬೆಳಗ್ಗೆ 10.35ಕ್ಕೆ ಧಾರವಾಡ ನಿಲ್ದಾಣದಿಂದ ಹೊರಡಲಿದೆ. 11 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದ್ದು 11.05ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಡಲಿದೆ. ಮಧ್ಯಾಹ್ನ 12.05 ಗಂಟೆಗೆ ಹಾವೇರಿ, 12.26ಕ್ಕೆ ರಾಣಿಬೆನ್ನೂರು, 12.44ಕ್ಕೆ ಹರಿಹರ, 12.58 ಗಂಟೆಗೆ ದಾವಣಗೆರೆ ನಿಲ್ದಾಣಕ್ಕೆ ತಲುಪಲಿದೆ.
ದಾವಣಗೆರೆ, ಅರಸೀಕೆರೆಯಲ್ಲಿ 2 ನಿಮಿಷ ನಿಲುಗಡೆ
ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಕೇವಲ 2 ನಿಮಿಷಗಳು ಮಾತ್ರ ನಿಲುಗಡೆ ನೀಡಲಿದೆ. ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ನಿಲ್ದಾಣದಿಂದ ಹೊರಡಲಿದ್ದು, 2.43ಕ್ಕೆ ಅರಸೀಕೆರೆ ತಲುಪಲಿದೆ. 3.03 ಗಂಟೆಗೆ ತಿಪಟೂರು, 3.51 ಗಂಟೆಗೆ ತುಮಕೂರು ನಿಲ್ದಾಣಕ್ಕೆ ಆಗಮಿಸಲಿದ್ದು, 4.38ಕ್ಕೆ ಯಶವಂತಪುರಕ್ಕೆ ತಲುಪಲಿದೆ. ಇಲ್ಲಿ ಕೇವಲ 2 ನಿಮಿಷ ರೈಲು ನಿಲುಗಡೆಯಾಗಲಿದ್ದು, ಸಂಜೆ 5.05 ಗಂಟೆಗೆ ಬೆಂಗಳೂರು ರೈಲು ನಿಲ್ದಾಣ ತಲುಪಲಿದೆ. ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ಯಶವಂತರಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಗಳಲ್ಲಿ ಮಾತ್ರ ರೈಲು ನಿಲುಗಡೆ ಇರುತ್ತದೆ.
ಈ ವೇಳಾಪಟ್ಟಿ ಕೇವಲ ಉದ್ಘಾಟನಾ ದಿನಕ್ಕೆ ಮಾತ್ರ ಸೀಮಿತವಾಗಿರಲಿದೆ. ಮರುದಿನದಿಂದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಬೆಳಗ್ಗೆ 5.45ಕ್ಕೆ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟು, ಮಧ್ಯಾಹ್ನ 12.40 ಕ್ಕೆ ಧಾರವಾಡ ತಲುಪಲಿದ್ದು, ಮತ್ತೆ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 8.10ಕ್ಕೆ ಬೆಂಗಳೂರು ತಲುಪಲಿದೆ. ವಾರದ 6 ದಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ನಡೆಸಲಿದೆ.
ಟಿಕೆಟ್ ದರ ಎಷ್ಟು?
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಎಸಿ ಚೇರ್ ಕಾರ್ ಕ್ಲಾಸ್‌ನಲ್ಲಿ ಪ್ರಯಾಣಕ್ಕೆ ಸುಮಾರು 1,205 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗೆ 2,395 ರೂ. ಟಿಕೆಟ್ ದರ ನಿಗದಿ ಮಾಡಲಾಗುತ್ತದೆ. ಇದರಲ್ಲಿ ಊಟದ ವೆಚ್ಚ ಕೂಡ ಸೇರಿರುತ್ತದೆ ಎಂದು ವರದಿಯಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ 16 ಬೋಗಿಗಳನ್ನು ಹೊಂದಿದ್ದು, ಆರಂಭಿಕ ಹಂತದಲ್ಲಿ 8 ಬೋಗಿಗಳು ಮಾತ್ರ ಇರಲಿವೆ, ಒಟ್ಟು 530 ಪ್ರಯಾಣಿಕರು ಸಂಚರಿಸಬಹದಾಗಿದೆ.
ಜೂನ್ 27ರಂದು ಒಂದೇ ದಿನ ದೇಶಾದ್ಯಂತ 5 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಆರಂಭಿಸಲಿವೆ. ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರು-ಧಾರವಾಡ, ಮುಂಬೈ-ಗೋವಾ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಮತ್ತು ಭೋಪಾಲ್-ಜಬಲ್ಪುರ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ.
English summary
Vande Bharat Express: Dharwad to Bengaluru Operations to Commence from June 27th; Railway Officials Release Inaugural Day Timetable. Check here for Departure and Arrival Details.
Story first published: Sunday, June 25, 2023, 22:51 [IST]