India
oi-Shankrappa Parangi
ಬೆಂಗಳೂರು, ಜೂನ್ 26: ಮಳೆಯ ಹೋಯ್ದಾಟದ ನಡುವೆ ರೈತರು ತಾವು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಅವರಿಗೆ ಹರಸಾಹಸವಾಗಿದೆ. ಬೆಳೆಗಳಿಗೆ ಪ್ರಾಣಿ-ಪಕ್ಷಿಗಳ ಹಾವಳಿಯಿಂದ ತಪ್ಪಿಸಲು ಕೆಲವೊಮ್ಮೆ ವಾರ, ತಿಂಗಳುಗಟ್ಟಲೇ ಶ್ರಮಪಡಬೇಕಾಗುತ್ತದೆ. ಹೀಗೆ ಪ್ರಾಣಿಗಳ ಹಾವಳಿ ತಡೆಗೆ ಮನವಿ ಮಾಡಿದ್ದಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸಂಬಂಧ ರೈತರು ಕರಡಿ ವೇಷಧಾರಿಯಾಗಿ ಪಾಠ ಕಲಿಸುತ್ತಿರುವ ಘಟನೆ ನಡೆದಿದೆ.
ಪ್ರಾಣಿ-ಪಕ್ಷಗಳ ಹಾವಳಿಯಿಂದಾಗಿ ಎಷ್ಟೋ ಭಾರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತು ಕಂಗಾಲಾಗುತ್ತಾರೆ. ಇಂತಹ ಘಟನೆಗಳು ಸಾಮಾನ್ಯ ಎಂಬಂತಾಗಿದೆ. ಇದೇ ವಿಚಾರದಲ್ಲಿ ಉತ್ತರ ಪ್ರದೇಶದ ರೈತರು ಭಿನ್ನವೆನಿಸಿಕೊಂಡಿದ್ದಾರೆ. ಅಲ್ಲಿಯ ರೈತರ ಕರಡಿ ವೇಷಧಾರಣೆ ಒಂದು ವಿಧಾನವಾಗಿ, ದೈನಂದಿನ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ.
ಎಷ್ಟೋ ತಂತ್ರಗಳನ್ನು ಉಪಯೋಗಿಸಿದರೂ ಪ್ರಾಣಿ ಹಾನಿಯಿಂದ ಬೆಳೆ ರಕ್ಷಿಸಲು ಸಾಧ್ಯವಾಗಿಲ್ಲ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ರೈತರ ಬಗ್ಗೆ ಕಾಳಜಿ ತೋರಿಲ್ಲ. ಹೀಗಾಗಿ ರೈತರು ಕರಡಿ ವೇಷದ ಮೊರೆ ಹೋಗಿ ಹೊಸ ತಂತ್ರವೊಂದನ್ನು ಬಳಸು ಮೂಲಕ ಬೆಳೆ ಹಾನಿ ಮಾಡುವ ಪ್ರಾಣಿಗಳಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ. ಕರಡಿ ವೇಷಧಾರಿ ರೈತರನ್ನು ಕಂಡು ಜಮೀನಿನಲ್ಲಿ ಮಂಗಗಳು ಕಾಲಿಡಲು ಭಯಪಡುತ್ತಿವೆ. ಇದರಿಂದ ಕಬ್ಬಿಗೆ ಉಂಟಾಗುತ್ತಿದ್ದ ಹಾನಿ ಕಡಿಮೆಯಾಗಿದೆ.
ಕರಡಿ ವೇಷಧಾರಿಗಳ ಫೋಟೊ ವೈರಲ್
ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರು ತಮ್ಮ ಕಬ್ಬಿನ ಬೆಳೆಗೆ ಹಾನಿ ಮಾಡುವ ಮಂಗಗಳನ್ನು ಹೆದರಿಸಲು ಕರಡಿ ವೇಷಭೂಷಣಗಳನ್ನು ಧರಿಸುತ್ತಿದ್ದಾರೆ. ಹೊಲದಲ್ಲಿ ರೈತರು ಕರಡಿ ವೇಷ ಧರಿಸಿ ಹೊಲದಲ್ಲಿ ಕುಳಿತ ಕೆಲವು ಫೋಟೊಗಳನ್ನು ಎಎನ್‌ಐ ಸಂಸ್ಥೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಗಮನಹರಿಸದ ಹಿನ್ನೆಲೆ ನಾವೇ ಕರಡಿ ವೇಷದ ಮೊರೆ ಹೋಗಬೇಕಾಯಿತು. ಲಖೀಂಪುರದ ಅನೇಕ ರೈತರು ಸುಮಾರು ₹4,000 ಹಣ ಕರಡಿ ವೇಷ ಖರೀದಿಸುತ್ತಿದ್ದಾರೆ. ನಿತ್ಯ ಅದನ್ನು ಧರಿಸಿ ಹೊಲದಲ್ಲಿ ಕೂತ ತಮ್ಮ ಕಬ್ಬು ಇನ್ನಿತರ ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ರೈತರೊಬ್ಬರು ಮಾಹಿತಿ ನೀಡಿದರು.
ರೈತರಿಗೆ ಅರಣ್ಯಾಧಿಕಾರಿ ನೀಡಿದ ಭರವಸೆ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ರೈತರು, ಲಖೀಂಪುರ ವ್ಯಾಪ್ತಿಯ ಹೊಲಗಳಲ್ಲಿ ನಿತ್ಯವು 40-45 ಮಂಗಗಳ ಗುಂಪು ಸಂಚರಿಸುತ್ತವೆ. ಆಗಾಗ ಬಂದು ಬೆಳೆ ಹಾನಿ ಮಾಡುತ್ತವೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನಹರಿಸಿಲ್ಲ. ಹೀಗಾಗಿ ವೇಷ ಧರಿಸಿದ್ದೇವೆ. ಇದರಿಂದ ಬೆಳೆ ರಕ್ಷಿಸಿಕೊಳ್ಳುತ್ತಿದ್ದೇವೆ ಎಂದರು.
ಈ ವಿಚಾರ ಮತ್ತು ರೈತರ ಕರಡಿ ವೇಷದ ಫೋಟೊಗಳು ವೈರಲ್ ಆಗುತ್ತಿದ್ದಂತೆ ಲಖಿಂಪುರ ಖೇರಿ ವಿಭಾಗೀಯ ಅರಣ್ಯ ಅಧಿಕಾರಿ ಸಂಜಯ್ ಬಿಸ್ವಾಲ್ ಸ್ಪಂದಿಸಿದ್ದಾರೆ. “ಮಂಗಗಳು ಬೆಳೆಗಳನ್ನು ಹಾನಿಗೊಳಿಸುವುದನ್ನು ತಡೆಯಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ರೈತರಿಗೆ ಭರವಸೆ ನೀಡಿದ್ದಾರೆ.
ಇನ್ನೂ ರೈತರು ಹೀಗೆ ಕಷ್ಟಪಡುತ್ತಿರುವುದನ್ನು ನೋಡಿದರೆ, ಚಿತ್ರಗಳು ರೈತರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಾಳಜಿ ವ್ಯಕ್ತವಾಗುತ್ತಿದೆ. ಕೆಲವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಖುಷಿಪಟ್ಟು ರೈತರನ್ನು ಶ್ಲಾಘಿಸಿದ್ದಾರೆ.
ಟ್ವೀಟ್ಟರ್‌ನಲ್ಲಿ ಕೆಲವರು, ಮಂಗಗಳಿಂದ ತಮ್ಮ ಬೆಳೆಗಳನ್ನು ಉಳಿಸಲು ಕರಡಿ ವೇಷಭೂಷಣದಲ್ಲಿ ಕುಳಿತಿದ್ದಾರೆ ಎಂದು ಬರೆದಿಕೊಂಡಿದ್ದಾರೆ. ಇನ್ನೂ ಕೆಲವರು ಮಂಗಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ನಮಗೆ ಉತ್ತರ ಪರಿಹಾರದ ಅಗತ್ಯತೆ ಇದೆ. ಅವು ಪ್ರತಿ ವರ್ಷ ಉಂಟುಮಾಡುವ ಭೌತಿಕ ಮತ್ತು ಆರ್ಥಿಕ ಹಾನಿಗಳಿಂದ ದುಸ್ತರವಾಗಿದ್ದೇವೆ ಎಂದು ತಿಳಿಸಿದರು.
English summary
Farmers dressed as bears to protect crops by monkey in Uttar Pradesh
Story first published: Monday, June 26, 2023, 19:31 [IST]