India
oi-Ravindra Gangal
ನವದೆಹಲಿ, ಜೂನ್ 27: ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಟ್ ಬೀಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷವಾದ ಡಿಎಂಕೆ ಬಿಜೆಪಿಯನ್ನು ಕಟುವಾಗಿ ಟೀಕಿಸಿವೆ.
ಮೊದಲು ಹಿಂದೂಗಳಿಗೆ ಏಕರೂಪದ ಸಂಹಿತೆಯನ್ನು ಅನ್ವಯಿಸಬೇಕು ಎಂದು ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆ ತಿಳಿಸಿದೆ. ಆ ನಂತರ ಎಲ್ಲಾ ಜಾತಿಗಳ ಜನರಿಗೆ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ವಾದಿಸಿದೆ.
‘ಹಿಂದೂ ಧರ್ಮದಲ್ಲಿ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ದೇಶದ ಯಾವುದೇ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನ ನೀಡಿರುವ ಕಾರಣ ಮಾತ್ರ ನಮಗೆ ಏಕರೂಪ ನಾಗರಿಕ ಸಂಹಿತೆ ಬೇಡ. ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ಬೇಕು’ ಎಂದು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
‘ದೇಶದಲ್ಲಿನ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಪಿಎಂ ಮೋದಿ ಮೊದಲು ಮಾತನಾಡಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ.
‘ಅವರು ಮಣಿಪುರ ವಿಷಯದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಇಡೀ ರಾಜ್ಯವು ಹೊತ್ತಿ ಉರಿಯುತ್ತಿದೆ. ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿರುವ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಮೋದಿ ಬ್ಯಾಟ್ ಬೀಸಿದ್ದಾರೆ. ‘ಒಂದು ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ನಿಯಮಗಳು ಇರಬಾರದು. ಇದರಿಂದ ಕುಟುಂಬ ಅಥವಾ ದೇಶ ನಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ವಾದಿಸಲಾಗುತ್ತಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷಿಯಾ, ಕತಾರ್, ಜೋರ್ಡಾನ್ ಮತ್ತು ಸಿರಿಯಾದಂತಹ ಮುಸ್ಲಿಂ ಬಾಹುಳ್ಯ ದೇಶಗಳಲ್ಲಿ ಏಕೆ ಆಚರಣೆಯಲ್ಲಿಲ್ಲ ಎಂದು ಮೋದಿ ಪ್ರಶ್ನಿಸಿದ್ದಾರೆ.
ಕಳೆದ ವಾರ ತಾವು ಭೇಟಿ ನೀಡಿದ್ದ ಈಜಿಪ್ಟ್‌ನ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, 80-90 ವರ್ಷಗಳ ಹಿಂದೆಯೇ ದೇಶವು ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ. ಅದರ ಜನಸಂಖ್ಯೆಯ 90 ಪ್ರತಿಶತದಷ್ಟು ಸುನ್ನಿ ಮುಸ್ಲಿಮರಿದ್ದರೂ ಸಹ ಕಾನೂನನ್ನು ತಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ತ್ರಿವಳಿ ತಲಾಖ್ ಪರವಾಗಿ ಇರುವವರು ಮತಬ್ಯಾಂಕ್‌ಗಾಗಿ ಹಸಿದು ಕುಳಿತಿದ್ದಾರೆ. ಅವರು ಮುಸ್ಲಿಂ ಹೆಣ್ಣು ಮಕ್ಕಳಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಕೇವಲ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡುವುದಿಲ್ಲ. ಅದರಿಂದ ಇಡೀ ಕುಟುಂಬ ಹಾಳಾಗುತ್ತದೆ’ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯು ದೇಶದ ಪ್ರತಿಯೊಬ್ಬರಿಗೂ ಅನ್ವಯಿಸುತ್ತಿದೆ. ಧರ್ಮ-ಆಧಾರಿತ ವೈಯಕ್ತಿಕ ಕಾನೂನುಗಳು, ಉತ್ತರಾಧಿಕಾರದ ನಿಯಮಗಳು, ದತ್ತು ಮತ್ತು ಉತ್ತರಾಧಿಕಾರವನ್ನು ಬದಲಿಸುವ ಕಾನೂನುಗಳನ್ನು ಒಳಗೊಂಡಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ಸಮಿತಿಯನ್ನು ರಚಿಸಲಾಯಿತು. ಇದಕ್ಕೆ ಸಂಬಂಧಿಸಿದ ವರದಿಯನ್ನು ಒಪ್ಪಿಸಲು ಖಾಸಗಿ ಸದಸ್ಯರ ಮಸೂದೆಯನ್ನು ವಿರೋಧ ಪಕ್ಷಗಳ ತೀವ್ರ ಪ್ರತಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ಈ ತಿಂಗಳ ಆರಂಭದಲ್ಲಿ, ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಕುರಿತು ಹೊಸ ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
English summary
Uniform Civil Code: DMK, the ruling party in Tamil Nadu, said that a uniform code should be applied to Hindus first,
Story first published: Tuesday, June 27, 2023, 20:04 [IST]