Shakti Scheme: ಬೆಣ್ಣೆನಗರಿ ದಾವಣಗೆರೆಯಲ್ಲಿ “ಶಕ್ತಿ” ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಹೆಚ್ಚು ಲಾಭ? | Shakti scheme: How many KSRTC Buses available for Shakti scheme in Davanagere division?, know details

Travel

lekhaka-Yogaraja G H

By ದಾವಣಗೆರೆ ಪ್ರತಿನಿಧಿ

|

Google Oneindia Kannada News

ದಾವಣಗೆರೆ, ಜೂನ್‌, 26: ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಆಯಾ ಜಿಲ್ಲಾವಾರು ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸಿದೆ. ಅದೇ ರೀತಿ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಎಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಮಾಡುತ್ತಿವೆ, ಇದರಿಂದ ಯಾವ ಕ್ಷೇತ್ರಕ್ಕೆ ಹೆಚ್ಚು ಲಾಭ ಆಗಲಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

ಕಾಂಗ್ರೆಸ್ ನಾಯಕರು ಚುನಾವಣೆಗೂ ಮುನ್ನ ಭರ್ಜರಿ 5 ಬಂಪರ್ ಗ್ಯಾರಂಟಿಗಳನ್ನು ಘೋಷಿಸಿದ್ದರು. ಅದರಲ್ಲಿ ಪ್ರಮುಖವಾಗಿ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರು ಉಚಿತ ಪ್ರಯಾಣಕ್ಕೆ ಮುಗಿಬೀಳುವ ಜೊತೆಗೆ ತಾ ಮುಂದು ನಾ ಮುಂದು ಅಂತಾ ಬಸ್ ಹತ್ತುತ್ತಿದ್ದಾರೆ. ಈ ಮೂಲಕ ಖಾಲಿ ಖಾಲಿಯಾಗಿ ತೆರಳುತ್ತಿದ್ದ ಬಸ್‌ಗಳು ತುಂಬಿ ತುಳುಕುತ್ತಿವೆ. ಇದರಿಂದ ಪ್ರವಾಸೋದ್ಯಮಕ್ಕೂ ಹೊಸ ಕಳೆ ಬಂದಂತಾಗಿದೆ.

Shakti Scheme

ಕಳೆದ ಹಲವು ದಿನಗಳ ಹಿಂದೆ ಈ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ. ಅದೇ ರೀತಿಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿಯೂ ಚಾಲನೆ ನೀಡಲಾಗಿದೆ. ಈ ವೇಳೆ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಲು ಮುಗಿಬಿದ್ದಿದ್ದರು. ಪ್ರತಿನಿತ್ಯ ಗಾರ್ಮೆಂಟ್ಸ್, ಫ್ಯಾಕ್ಟರಿ, ಅಂಗಡಿಗಳಿಗೆ ಕೆಲಸಕ್ಕೆ ಬರುವ ಮಹಿಳೆಯರಿಗೆ ತುಂಬಾನೇ ಅನುಕೂಲವಾಗಿದೆ.

ಕಾರ್ಮಿಕರ ಅಭಿಪ್ರಾಯ ಏನು?

ತಿಂಗಳಿಗೆ ಐದರಿಂದ ಆರು ಸಾವಿರ ರೂಪಾಯಿ ವೇತನ ಸಿಗುತಿತ್ತು. ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುವುದರಿಂದ ಕನಿಷ್ಠ ಅಂದರೂ ಒಂದು ಸಾವಿರ ರೂಪಾಯಿ ಉಳಿತಾಯ ಆಗುತ್ತದೆ. ಅಷ್ಟೇ ಅಲ್ಲದೆ ಸರ್ಕಾರಿ ಬಸ್‌ಗಳ ಸಂಚಾರ ಉತ್ತಮ ಆಗಿರುವುದರಿಂದ ಸರಿಯಾದ ವೇಳೆಗೆ ಕೆಲಸಕ್ಕೆ ಹಾಗೂ ಮನೆಗೆ ತಲುಪುತ್ತಿದ್ದೇವೆ. ಸರ್ಕಾರ ನೀಡಿರುವ ಈ ಯೋಜನೆ ತುಂಬಾ ಅನುಕೂಲವಾಗಿದೆ ಎಂದು ಮಹಿಳಾ ಕಾರ್ಮಿಕರು ಹೇಳುತ್ತಿದ್ದಾರೆ.

Shakti scheme: ಮೈಸೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಲಾಭ?, ಇಲ್ಲಿದೆ ವಿವರShakti scheme: ಮೈಸೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಲಾಭ?, ಇಲ್ಲಿದೆ ವಿವರ

ವಿದ್ಯಾರ್ಥಿಗಳು ಹೇಳಿದ್ದೇನು?

ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಶಾಲಾ, ಕಾಲೇಜುಗಳಿಗೆ ಆಗಮಿಸುತ್ತಾರೆ. ತಾಲೂಕು ಮಟ್ಟ ಹಾಗೂ ಗ್ರಾಮೀಣ ಭಾಗದಲ್ಲಿಯೂ ಯುವತಿಯರು, ಬಾಲಕಿಯರು ಕಾಲೇಜು ಹಾಗೂ ಶಾಲೆಗಳಿಗೆ ತೆರಳುತ್ತಾರೆ. ಮೊದಲು ಬಸ್ ಪಾಸ್ ಮಾಡಿಸಬೇಕಿತ್ತು. ಕನಿಷ್ಠ ಅಂದರೂ 600 ರೂಪಾಯಿ ಖರ್ಚಾಗುತಿತ್ತು. ಆದರೆ ಕೆಲವರು ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಬಸ್ ಪಾಸ್ ಪಡೆಯಲು ಹೆಣಗಾಡಬೇಕಾಗಿತ್ತು. ಆದರೆ ಸರ್ಕಾರಿ ಬಸ್‌ನಲ್ಲಿ ಫ್ರೀಯಾಗಿ ಓಡಾಡುವುದರಿಂದ ಈ ಹೊರೆ ಕಡಿಮೆಯಾಗಿದೆ ಎನ್ನುವುದು ವಿದ್ಯಾರ್ಥಿನಿಯರ ಅಭಿಪ್ರಾಯವಾಗಿದೆ.

ಪ್ರವಾಸೋದ್ಯಮಕ್ಕೆ ಕಳೆ ತಂದ “ಶಕ್ತಿ” ಯೋಜನೆ

ಇನ್ನು ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರು, ಭಕ್ತರು ಪ್ರವಾಸೋದ್ಯಮ ಸ್ಥಳಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಬಸ್‌ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ರಾಜ್ಯದ ಹಲವು ಭಾಗಗಳಿಂದ ದೇಗುಲಗಳು, ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ.

ಅದರಲ್ಲೂ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸುತ್ತಲೇ ಇದ್ದಾರೆ. ಇನ್ನು ಅಮವಾಸ್ಯೆ ದಿನದಂತೂ ನಿರೀಕ್ಷೆಗೆ ಮೀರಿದ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಚನ್ನಗಿರಿ ತಾಲೂಕಿನ ಸೂಳೆಕೆರೆ, ಕೊಂಡಜ್ಜಿ ಕೆರೆ, ಗ್ಲಾಸ್ ಹೌಸ್ ಸೇರಿದಂತೆ ಜಿಲ್ಲೆಯ ಇನ್ನಿತರ ಪ್ರವಾಸೋದ್ಯಮ ತಾಣಗಳಿಗೆ ಹೊಸ ಕಳೆ ಬಂದಂತಾಗಿದೆ.

ಈ ಪ್ರವಾಸಿ ತಾಣಗಳಿಗೆ ಹೆಚ್ಚು ಭೇಟಿ

1. ಸೂಳೆಕೆರೆ (ಶಾಂತಿಸಾಗರ), ಚನ್ನಗಿರಿ ತಾಲೂಕು

2. ಕೊಂಡಜ್ಜಿ ಕೆರೆ

3. ಗ್ಲಾಸ್ ಹೌಸ್

4. ಸಂತೆಬೆನ್ನೂರು ಪುಷ್ಕರಣಿ

ವ್ಯಾಪಾರ ಬಲು ಜೋರು

ದೇವಸ್ಥಾನಗಳಿಗೆ ಉಚಿತವಾಗಿ ಪ್ರಯಾಣ ಬೆಳೆಸುವ ಮಹಿಳೆಯರು ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿಸಲೇಬೇಕು. ದೇವರಿಗೆ ಅರ್ಪಿಸಲು ಹಣ ಕೊಟ್ಟು ಪಡೆಯುತ್ತಾರೆ. ಇದರಿಂದಾಗಿ ವ್ಯಾಪಾರವೂ ಹೆಚ್ಚಾಗಿದೆ. ಈ ಹಿಂದೆ ದೇವಸ್ಥಾನಕ್ಕೆ ಬರುವವರು ಮನೆಯಿಂದ ಬರುವಾಗಲೇ ಪೂಜಾ ಸಾಮಗ್ರಿಗಳನ್ನು ತರುತ್ತಿದ್ದರು. ಈಗ ದೇವಸ್ಥಾನಕ್ಕೆ ಬರುವ ಬಹುತೇಕರು ಇಲ್ಲಿಯೇ ಖರೀದಿ ಮಾಡುತ್ತಾರೆ. ನಾವು ಈ ಹಿಂದೆ ಮಾಡುತ್ತಿದ್ದ ವ್ಯಾಪಾರಕ್ಕಿಂತ ಈಗ ವ್ಯಾಪಾರ ಜಾಸ್ತಿಯಾಗಿದೆ.

ಅದರಲ್ಲೂ ಶಕ್ತಿ ಯೋಜನೆ ಜಾರಿ ಆದಾಗಿನಿಂದ ದೇವಸ್ಥಾನಕ್ಕೆ ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಹೂವು, ಹಣ್ಣು ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಅಲ್ಲದೆ ಪ್ರವಾಸೋದ್ಯಮಕ್ಕೂ ಹೆಚ್ಚು ಲಾಭ ಆಗುತ್ತಿದೆ. ವೀಕೆಂಡ್ ದಿನಗಳಲ್ಲಿ ಮಹಿಳೆಯರು ತಂಡೋಪತಂಡವಾಗಿ ರಾಜ್ಯದ ನಾನಾ ಮೂಲೆಗಳಿಂದ ಇಲ್ಲಿನ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ.

ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿಗೆ ನಷ್ಟ ತಂದಿದೆ ಎಂದಾದರೆ, ಮತ್ತೊಂದೆಡೆ ಈ ಯೋಜನೆಯಿಂದ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ನಾರಿ ಶಕ್ತಿ ಸಂಚಾರದಿಂದ ದಾವಣಗೆರೆ ಜಿಲ್ಲೆಯೊಂದರಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಟಿಕೆಟ್ ಪಡೆಯಲಾಗಿದೆ. ಲಕ್ಷಾಂತರ ಮಹಿಳೆಯರು ಪ್ರಯಾಣ ಮಾಡಿದ್ದು, ಇದರಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟವಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

ಆದರೆ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ವ್ಯಾಪಾರವೂ ಜೋರಾಗಿದೆ. ಬಸ್‌ಗಳಲ್ಲಿ ಉಚಿತವಾಗಿ ಬಂದರೂ ಇಲ್ಲಿ ಹಣ ಕೊಟ್ಟು ಖರೀದಿಸಲೇಬೇಕು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಬೋಟಿಂಗ್‌ಗೂ ಬೇಡಿಕೆ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಸಂತೇಬೆನ್ನೂರಿನ ಪುಷ್ಕರಣಿ ಸೌಂದರ್ಯ ವೀಕ್ಷಣೆಗೂ ತಂಡೋಪ ತಂಡವಾಗಿ ಕಾಲೇಜು ಯುವತಿಯರು, ಮಹಿಳೆಯರು ಆಗಮಿಸುತ್ತಿರುವುದು ವಿಶೇಷವಾಗಿದೆ.

ಎಷ್ಟು ವಾಹನಗಳು ಸಂಚರಿಸುತ್ತವೆ..?

ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಸಿ.ಇ.ಶ್ರೀನಿವಾಸ್ ಅವರು ನೀಡಿರುವ ಮಾಹಿತಿ ಪ್ರಕಾರ, ದಾವಣಗೆರೆ ವಿಭಾಗದಲ್ಲಿ 386 ವಾಹನಗಳಿದ್ದು, ಇವು 368 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಪ್ರತಿನಿತ್ಯ 1.50 ಲಕ್ಷ ಕಿಲೋ ಮೀಟರ್‌ ಕ್ರಮಿಸುವ ಮೂಲಕ 1.25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವಿಭಾಗದಲ್ಲಿ 17 ವೋಲ್ವೋ, 3 ಸ್ಕ್ಯಾನಿಯ, 6 ನಾನ್ ಎಸಿ ಸ್ಲೀಪರ್, 29 ರಾಜಹಂಸ, 205 ಸಾರಿಗೆ, 16 ಗ್ರಾಮೀಣ ಸಾರಿಗೆ, 37 ಎಲ್.ಇ.ಡಿ.ನಗರ ಸಾರಿಗೆ, 61 ನಗರ ಸಾರಿಗೆ, 12 ಇವಿ ಪವರ್ ಪ್ಲಸ್ ವಾಹನಗಳಿವೆ.

English summary

Shakti scheme: KSRTC Buses available for Shakti Yojana in Davanagere division, here see complete details

Source link