Karnataka
oi-Malathesha M
ರಾಜ್ಯದಲ್ಲಿ ಈ ವಾರ ಮಳೆ ಅಬ್ಬರಿಸಿ ಬೊಬ್ಬಿರಿದೆ. ಅದರಲ್ಲೂ ಕರ್ನಾಟಕದ ಕರಾವಳಿ & ಮಲೆನಾಡು ಪ್ರದೇಶ ಸೇರಿ ರಾಜ್ಯದ ಒಳನಾಡು ಪ್ರದೇಶಲ್ಲೂ ಭಾರಿ ಮಳೆ ಬಿದ್ದಿದೆ. ಆದರೆ ದಿಢೀರ್ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಹಾಗಾದರೆ ಹೀಗೆ ದಿಢೀರ್ ಮಳೆ ಕಡಿಮೆ ಆಗಿದ್ದೇಕೆ? ಈವರೆಗೆ ಮಲೆನಾಡು ಭಾಗದಲ್ಲಿ ಎಷ್ಟು ಮಳೆ ಬಿದ್ದಿತ್ತು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಕರ್ನಾಟಕದ ಪಶ್ಚಿಮ ಘಟ್ಟಗಳು ಹತ್ತಾರು ನದಿಗಳ ಉಗಮ ಸ್ಥಾನ. ಹೀಗೆ ಪಶ್ಚಿಮ ಘಟ್ಟದ ಪ್ರದೇಶಗಳನ್ನು ಕನ್ನಡಿಗರು ಮಲೆನಾಡು ಅಂದ್ರೆ ಬೆಟ್ಟಗಳ ಪ್ರದೇಶ ಎಂದು ಕರೆಯುತ್ತಾರೆ. ಆದರೆ ಜೂನ್ ತಿಂಗಳಲ್ಲಿ ಮಲೆನಾಡು ಭಾಗದಲ್ಲಿ ಮಳೆಯೇ ಇರಲಿಲ್ಲ, ಹೀಗಾಗಿ ರಾಜ್ಯದ ರೈತರಿಗೆ ಚಿಂತೆಯಾಗಿ ಹೋಗಿತ್ತು. ಈಗ ಜುಲೈ ಆರಂಭದಿಂದ ದಿಢೀರ್ ಮಳೆ ಆರ್ಭಟವು ಶುರುವಾಗಿದೆ. ಈ ವಾರ ಪೂರ್ತಿ ಭರ್ಜರಿಯಾಗಿ ಮಳೆ ಬಿದ್ದಿದ್ದು, ಮಲೆನಾಡು ಭಾಗದಲ್ಲಿ ಹುಟ್ಟುವ ನದಿಗಳೂ ಭೋರ್ಗರೆಯುತ್ತಿವೆ. ಆದರೆ ಏಕೋ ಗೊತ್ತಿಲ್ಲ ದಿಢೀರ್ ಮಲೆನಾಡಿನ ಮಳೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ.
ಮಲೆನಾಡಿನ ಹೆಬ್ಬಾಗಿಲಲ್ಲೇ ಮಳೆ ಕಂಟ್ರೋಲ್!
ಹೌದು, ಮಲೆನಾಡಿನ ಹೆಬ್ಬಾಗಿಲು ಎಂಬ ಬಿರುದು ಪಡೆದ ಶಿವಮೊಗ್ಗದಲ್ಲಿ ಭೀಕರ ಮಳೆ ಹಿಡಿತಕ್ಕೆ ಸಿಕ್ಕಿದೆ. ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 3.04 ಸೆಂ.ಮೀ ಮಳೆ ಬಿದ್ದಿದೆ. ಶುಕ್ರವಾರ 19.70 ಸೆಂ.ಮೀ ಮಳೆ ಬಿದ್ದಿತ್ತು. ಮಳೆ ಹಿಡಿತಕ್ಕೆ ಸಿಕ್ಕ ಹಿನ್ನೆಲೆ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ಗಾಜನೂರಿನ ತುಂಗಾ ಜಲಾಶಯದಲ್ಲಿ ಒಳಹರಿವು 16,383 ಕ್ಯುಸೆಕ್ ಇದೆ. 17,149 ಕ್ಯುಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ನಿನ್ನೆ 15,271 ಕ್ಯುಸೆಕ್ ಒಳಹರಿವು ಇತ್ತು. ಇದರ ಜೊತೆ ಇನ್ನೂ ಹಲವು ಜಲಾಶಯಗಳ ಒಳಹರಿವು ವ್ಯತ್ಯಾಸ ಕಂಡಿದೆ.
ಮಲೆನಾಡಿನಲ್ಲಿ ಭಾರಿ ಕಟ್ಟೆಚ್ಚರ
ಇಷ್ಟೆಲ್ಲದರ ನಡುವೆ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ಒಳಹರಿವು ತಗ್ಗಿದೆ. ಭದ್ರಾ ಡ್ಯಾಂನಲ್ಲಿ 6030 ಕ್ಯುಸೆಕ್ ಒಳಹರಿವು ಇದೆ. ಇನ್ನೊಂದ್ಕಡೆ 1200 ಕ್ಯುಸೆಕ್ ಕಡಿಮೆ ಆಗಿದ್ದು, ಜಲಾಶಯದಲ್ಲಿ 139.8 ಅಡಿ ನಿರು ಇದೆ. ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 166.4 ಅಡಿ ನೀರು ಇತ್ತು. ಹಾಗೇ ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವು ಬರೋಬ್ಬರಿ 22,157 ಕ್ಯುಸೆಕ್ ತಲುಪಿದೆ. ನಿನ್ನೆ 23,252 ಕ್ಯುಸೆಕ್ ಒಳಹರಿವನ್ನು ಈ ಡ್ಯಾಂ ದಾಖಲಾಗಿತ್ತು. 472 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಮಳೆ ಹಿನ್ನೆಲೆ ಭಾರಿ ಕಟ್ಟೆಚ್ಚರವನ್ನ ವಹಿಸಲಾಗಿದೆ.
ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಅಂದಹಾಗೆ ಕುಮಟಾ ತಾಲೂಕು ಪೋಸ್ಟ್ ಬೆಟ್ಟುಳಿಯಲ್ಲಿ ಎರಡು ದಿನಗಳ ಹಿಂದೆ ಭಾರಿ ಮಳೆ ಕಾರಣ ಘೋರ ದುರಂತ ನಡೆದಿತ್ತು. ಗದ್ದೆಯಲ್ಲಿ ತುಂಬಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದ ಸತೀಶ ನಾಯ್ಕ ಮತ್ತು ಉಲ್ಲಾಸ ಗಾವಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ತಲಾ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ನೀಡಿದ್ದಾರೆ. ಬೆಟ್ಕುಳಿ ಗ್ರಾಮದಲ್ಲಿ ಮಳೆಯ ಪರಿಣಾಮ ಭಾರಿ ಅನಾಹುತವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಸಂತ್ರಸ್ತರಿಂದಲೇ ಸಚಿವ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಪಡೆದರು. ಅಲ್ಲದೆ ಕರ್ನಾಟಕ ಮಳೆ ಬಗ್ಗೆ & ಮೋಡ ಬಿತ್ತನೆ ಬಗ್ಗೆ ಮಹತ್ವದ ಮಾಹಿತಿ ತಿಳಿಸಿದ್ದಾರೆ ಸಚಿವರು, ಮಾಹಿತಿಗೆ ಮುಂದೆ ಇದೆ ಓದಿ.
ಮೃತಪಟ್ಟ ಇತರರ ಕುಟುಂಬಕ್ಕೂ 5 ಲಕ್ಷ ಪರಿಹಾರ
ಕರಾವಳಿ ಕರ್ನಾಟಕ ಭಾಗದ ಮಳೆ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗೆ ಬೇಗ ಸ್ಪಂದಿಸಲು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು. ಈಗ ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಂತಹ ವಿಕೋಪ ಉಂಟಾದರೂ ವಿಪತ್ತು ನಿರ್ವಹಣಾ ಪಡೆ ಸಂಪರ್ಕಿಸಿ ಸಹಾಯ ಪಡೆಯಬೇಕೆಂದು ಸಚಿವರು ಸೂಚಿಸಿದ್ದಾರೆ. ನಂತರ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ನೆರೆಯಿಂದ ಮೃತಪಟ್ಟವರ ಕುಟುಂಬಕ್ಕೆ ಶೀಘ್ರದಲ್ಲಿ 5 ಲಕ್ಷ ಪರಿಹಾರ ನೀಡಬೇಕು, ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕು ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಒಟ್ನಲ್ಲಿ ಬರದ ಬೇಗೆಯ ಚಿಂತೆಯಲ್ಲಿದ್ದ ಕರ್ನಾಟಕದ ರೈತರಿಗೆ ಮಳೆರಾಯನ ರೌದ್ರಾವತಾರ ಮತ್ತೊಂದು ಟೆನ್ಷನ್ ಕೊಟ್ಟಿತ್ತು. ಮುಂಗಾರು ಮಾರುತಗಳು ಅಬ್ಬರ ಜೋರಾಗಿ, ಪ್ರವಾಹದ ಭೀತಿ ಶುರುವಾಗಿತ್ತು. ಈಗ ಮಲೆನಾಡು ಭಾಗದಲ್ಲಿ ಮಳೆ ತಗ್ಗಿದ್ದು, ಇನ್ನೂ ಕೆಲವು ದಿನ ಸಾಮಾನ್ಯ ಮಳೆ ಬೀಳುವ ಮಾಹಿತಿ ಇದೆ. ಹಾಗೇ ಜೂನ್‌ನಲ್ಲಿ ಆವರಿಸಿದ್ದ ಬರದ ಛಾಯೆ ಜುಲೈ ತಿಂಗಳ ಮೊದಲ ವಾರವೇ ಮರೆಯಾಗಿ ಹೋಗಿದೆ. ಭರ್ಜರಿ ಮಳೆ ಸುರಿದಿದ್ದು, ಜನರು ಹಾಗೂ ಮುಖ್ಯವಾಗಿ ರೈತರು ಖುಷಿಯಾಗಿದ್ದಾರೆ. ರಾಜ್ಯದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಈಗ ಹರಿದು ಬರುತ್ತಿದ್ದು, ಕರ್ನಾಟಕದ ಡ್ಯಾಂಗಳ ನೀರು ಸಂಗ್ರಹಣೆ ಹೆಚ್ಚಾಗುತ್ತಿದೆ.
English summary
Heavy Rain stops in Karnataka Malnad region.