Karnataka
oi-Naveen Kumar N

ವಿದ್ಯುತ್ ಬಿಲ್ ಬೆಲೆ ಏರಿಕೆ ಬಳಿಕ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಾಗಲಿದೆ. ನಂದಿನಿ ಹಾಲಿನ ದರ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕ ಹಾಲು ಮಾರಾಟ ಮಹಾಮಂಡಳದ (KMF) ನೂತನ ಅಧ್ಯಕ್ಷರಾಗಿ, ಅವಿರೋಧವಾಗಿ ಆಯ್ಕೆಯಾದ ಭೀಮಾ ನಾಯ್ಕ್ ಈ ಸುಳಿವು ನೀಡಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ನಂದಿನ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಎಂದು ಹೇಳಿದರು. ದರ ಹೆಚ್ಚಳ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಚರ್ಚಿಸಲಾಗುವುದು, ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಎಲ್ಲಾ ಹಾಲು ಒಕ್ಕೂಟಗಳು 5 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿವೆ. ದರ ಹೆಚ್ಚಳ ಮಾಡುವುದು ಮಾತ್ರವಲ್ಲದೆ, ಗ್ರಾಹಕರಿಗೆ ಗುಣಮಟ್ಟದ ಹಾಲು, ಮೊಸರು, ತುಪ್ಪವನ್ನು ಪೂರೈಕೆ ಮಾಡಲು ಆದ್ಯತೆ ನೀಡುತ್ತೇವೆ ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆ
ಕೆಎಂಎಫ್ ಅಧ್ಯಕ್ಷರ ಸ್ಥಾನಕ್ಕೆ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರ ನಾಮಪತ್ರ ಸಲ್ಲಿಸಿದ್ದ ಕಾರಣ ಮತದಾನ ಕೂಡ ನಡೆಯದೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ, ಹಿರಿಯರ ಶ್ರಮದ ಫಲವಾಗಿ ಕೆಎಂಎಫ್ ಈ ಮಟ್ಟಕ್ಕೆ ಬೆಳೆದಿದೆ. ಸರ್ಕಾರದ ಮಾರ್ಗದರ್ಶನ, ಗ್ರಾಹಕರ ಸಹಕಾರ ಬೇಕು, ನಂದಿನಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ, ಖಾಸಗಿ ಕಂಪನಿಗಳಿಗೆ ಸ್ಪರ್ಧೆ ನೀಡುತ್ತೇವೆ ಎಂದು ಹೇಳಿದರು.
ಚರ್ಮಗಂಟು ರೋಗದಿಂದ ಹಾಲು ಕಡಿಮೆಯಾಗಿತ್ತು. ಹೀಗಾಗಿ ತುಪ್ಪದ ಕೊರತೆ ಉಂಟಾಗಿತ್ತು ಎಂದು ಹೇಳಿದ್ದಾರೆ. ಹಾಲಿನ ದರ 5 ರೂಪಾಯಿ ಹೆಚ್ಚಿಸುವಂತೆ ಮನವಿ ಮಾಡಿದ್ದರೂ, ಇದರಲ್ಲಿ 2 ರೂಪಾಯಿಗಳನ್ನು ರೈತರಿಗೆ ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು. ಈಗಾಗಲೇ 5 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ, ದರ ಹೆಚ್ಚಳವಾದ ಬಳಿಕ ಇನ್ನೂ 2 ರೂಪಾಯಿ ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.
ಸಹಕಾರ ಸಚಿವ ಕೆಎನ್ ರಾಜಣ್ಣ ಮಾಹಿತಿ
ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಹೈನುಗಾರರಿಂದ ಖರೀದಿ ಮಾಡುವ ಹಾಲಿನ ದರ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿದ ಬಳಿಕ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
ಬೇಸಿಗೆ ಸಮಯದಲ್ಲಿ ರೈತರಿಗೆ ಕೊಡುತ್ತಿದ್ದ ವಿಶೇಷ ಪ್ರೋತ್ಸಾಹ ಧನ ಕಡಿಮೆ ಮಾಡಲು ಇತ್ತೀಚೆಗೆ ಒಕ್ಕೂಟ ನಿರ್ಧರಿಸಿತ್ತು. ಆದರೆ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹಾಲಿನ ಪ್ರೋತ್ಸಾಹ ಧನ ಕಡಿಮೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು.
ನಂದಿನಿ ಹಾಲಿನ ದರ ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಒತ್ತಾಯ ಮಾಡುತ್ತಿವೆ. ಲೀಟರ್ ಹಾಲಿನ ದರ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು.
English summary
The new chairman of KMF (Karnataka Milk Federation) has stated that they have proposed to the government an increase in the price of Nandini milk by Rs 5 per litre.
Story first published: Wednesday, June 21, 2023, 15:33 [IST]