Hassan
lekhaka-Veeresha H G
ಹಾಸನ, ಜೂನ್, 20: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ (ಜೂನ್ 20) ಮುಂಗಾರು ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಅದೇ ರೀತಿ ಹಾಸನ ಜಿಲ್ಲೆಯ ಹಲವು ಭಾಗಗಳಲ್ಲಿ ದೊಡ್ಡ ದೊಡ್ಡ ಅವಘಡಗಳನ್ನು ಸೃಷ್ಟಿಸಿದೆ. ಹಾಗಾದರೆ ಎಲ್ಲೆಲ್ಲೆ ಏನೇನು ಅನಾಹುತಗಳು ಆಗಿವೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಘಟನೆ 1: ಹಾಸನ ಜಿಲ್ಲೆಯ ವಿವಿಧೆಡೆ ಇಂದು ಭಾರೀ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಬೇಲೂರು ತಾಲೂಕಿನ, ಬಿಕ್ಕೊಡು ಹೋಬಳಿ, ದೊಡ್ಡಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದ ಹಸು ಪ್ರದೀಪ್ ಎಂಬುವವರಿಗೆ ಸೇರಿದ್ದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಳೆ ಶುರುವಾದ ಹಿನ್ನೆಲೆ ಮರದ ಕೆಳಗೆ ಹಸು ಕಟ್ಟಿ ಪ್ರದೀಪ್ ಮನೆಯೊಳಗೆ ಓಡಿ ಹೋಗಿದ್ದಾರೆ. ಈ ವೇಳೆ ಸುಮಾರು ಮೂವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಹಸು ಸಿಡಿಲು ಬಡಿದು ಸಾವನ್ನಪ್ಪಿದೆ. ಹಸು ಕಳೆದುಕೊಂಡು ಕಂಗಾಲಾದ ರೈತ ಪ್ರದೀಪ್ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಘಟನೆ 2: ಮತ್ತೊಂದೆಡೆ ಹಾಸನದ ಹೊಯ್ಸಳ ನಗರದಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಯಲ್ಲಿದ್ದ ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣ ನಾಶವಾಗಿವೆ. ಇನ್ನು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳೆದುಕೊಂಡವರು ಆತಂಕಕ್ಕೆ ಒಳಗಾಗಿದ್ದಾರೆ.
ಅಗ್ನಿ ಶಾಸಕ ಸಿಬ್ಬಂದಿ ನೆರವಿನೊಂದಿಗೆ ಮನೆಗೆ ನುಗ್ಗಿದ ನೀರನ್ನು ಹೊರ
ಹಾಕಲು ಇಲ್ಲಿನ ಜನರು ಹರಸಾಹಸವನ್ನೇ ಪಟ್ಟಿದ್ದಾರೆ. ಅಲ್ಲದೆ ನಮಗೆ ಸೂಕ್ತ ಪರಿಹಾರ ಕಲ್ಪಿಸಿ ಎಂದು ಮಳೆಹಾನಿಗೆ ಸಿಲುಕಿದ ಕುಟುಂಬಗಳು ಸರ್ಕಾರಕ್ಕೆ ಆಗ್ರಹಿಸಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಘಟನೆ 3: ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆ ಜಲಾವೃತವಾಗಿದ್ದು, ಈ ವೇಳೆ ರಸ್ತೆಯಲ್ಲಿ ನಡೆದು ಹೋಗುವಾಗ ವ್ಯಕ್ತಿಯೊಬ್ಬ ಚರಂಡಿಗೆ ಬಿದ್ದ ಘಟನೆ ಹಾಸನದ ಕುವೆಂಪು ನಗರ ಬಡಾವಣೆಯಲ್ಲಿ ನಡೆದಿದೆ. ಇನ್ನು ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರೀ ಮಳೆ
ಮತ್ತೊಂದೆಡೆ ಚಿಕ್ಕಮಗಳೂರು ನಗರ, ಸಖರಾಯಪಟ್ಟಣ, ಉದ್ದೇಬೋರಹಳ್ಳಿಯಲ್ಲಿ ಕಳೆದೊಂದು ಗಂಟೆಯಿಂದಲೂ ಭಾರೀ ಮಳೆ ಸುರಿದಿದ್ದು, ಇಲ್ಲಿನ ರಸ್ತೆಗಳೆಲ್ಲ ಕೆರೆಯಂತಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು ಮುಂದಕ್ಕೂ ಹೋಗದೆ, ಹಿಂದಕ್ಕೂ ಬಾರದೆ ನಡುರಸ್ತೆಯಲ್ಲೇ ಪರದಾಡಿದ ಘಟನೆಗಳು ನಡೆದಿವೆ. ಮತ್ತೊಂದೆಡೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಈ ಪ್ರದೇಶಗಳಲ್ಲಿ ಕೆಲವೇ ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
English summary
Monsoon Rain: Heavy Damages due to rain in Many places of Hassan district, here see details