Mekedatu: ಕರ್ನಾಟಕಕ್ಕೆ ಮೇಕೆದಾಟು ಯೋಜನೆ ಏಕೆ ಬೇಕು? ಸಿದ್ದರಾಮಯ್ಯ ಸರ್ಕಾರ ಯೋಜನೆ ಪೂರ್ಣಗೊಳಿಸುತ್ತಾ? | Discover why Karnataka needs Mekedatu dam project

Karnataka

oi-Malathesha M

|

Google Oneindia Kannada News

ಸಿದ್ದರಾಮಯ್ಯ ಇಂದು ಮಂಡಿಸಿದ 2023ನೇ ಸಾಲಿನ ಬಜೆಟ್ ಹಲವು ರೀತಿಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಯೋಜನೆಗೆ ಜೈ ಅನ್ನೋರ ಜೊತೆ ಬಜೆಟ್ ಬಗ್ಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆದರೆ ಅದೊಂದೇ ಒಂದು ವಿಚಾರ ಈಗ ಸಿದ್ದರಾಮಯ್ಯ ಬಜೆಟ್ ಅನ್ನ ನೆರೆಯ ತಮಿಳುನಾಡು ತನಕ ಕೊಂಡೊಯ್ದಿದೆ. ಹಾಗೇ ವಿಪರೀತ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಆ ವಿಚಾರ ಬೇರೆ ಯಾವುದೂ ಅಲ್ಲ, ಮೇಕೆದಾಟು ಯೋಜನೆ!

ಕರ್ನಾಟಕ ಸರ್ಕಾರ ತೊಡೆತಟ್ಟಿ ನಿಂತಿದೆ. ಹೇಗಾದರೂ ಮಾಡಿ ಮೇಕೆದಾಟ ಯೋಜನೆಗೆ ಅಂತಿಮ ರೂಪ ಕೊಡಬೇಕು ಅಂತಾ ನಿರ್ಧರಿಸಿದೆ. ಇದೇ ಕಾರಣಕ್ಕೆ ಬಜೆಟ್‌ನಲ್ಲಿ ಕೂಡ ಸಿದ್ದರಾಮಯ್ಯ ಮೇಕೆದಾಟು ಯೋಜನೆ ಕುರಿತಾಗಿ ಪ್ರಸ್ತಾಪಿಸಿದ್ದು, ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಆದರೆ ಈ ವಿಚಾರ ಈಗ ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆಯನ್ನು ನೀಡುತ್ತಿದೆ. ಹಾಗಾದರೆ ಮೇಕೆದಾಟು ಯೋಜನೆ ಕನ್ನಡಿಗರ ಪಾಲಿಗೆ ಎಷ್ಟು ಮುಖ್ಯ? ಬನ್ನಿ ತಿಳಿಯೋಣ.

Mekedatu dam project

ಇಂದು ಬಜೆಟ್ ಮಂಡಿಸುವಾಗ ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ‘ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಹಾಗೂ ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಶೀಘ್ರ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಅರಣ್ಯೀಕರಣಕ್ಕೆ ಅಗತ್ಯವಿರುವ ಭೂಮಿ ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು’ ಎಂದಿದ್ದಾರೆ. ಈ ಮೂಲಕ ಶೀಘ್ರವೇ ಮೇಕೆದಾಟು ಯೋಜನೆಗೆ ಚಾಲನೆ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ ಸಿಎಂ. ಹಾಗಿದ್ರೆ, ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೆ ಏನೆಲ್ಲಾ ಲಾಭ ಆಗಲಿದೆ? ಮುಂದೆ ಓದಿ.

ಕನ್ನಡಿಗರಿಗೆ ‘ಮೇಕೆದಾಟು’ ಏಕೆ ಬೇಕು?

1) ಮಳೆಗಾಲದಲ್ಲಿ ಸುಖಾಸುಮ್ಮನೆ ವ್ಯರ್ಥವಾಗುವ ನೀರನ್ನು ಕರ್ನಾಟಕದ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳುವುದು.

2) 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾಗುತ್ತಿದೆ, ಇದನ್ನ ತಪ್ಪಿಸುವ ಉದ್ದೇಶ.

3) ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಒದಗಿಸುವ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಉತ್ಪಾದನೆಗೆ ಸಹಕಾರಿ.

4) 5252 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸುವ ಡ್ಯಾಂಗೆ 3181 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಜಾಗ ಅಗತ್ಯ.

5) ಯೋಜನೆ ಬಳಿಕ ಒಟ್ಟು 5 ಹಳ್ಳಿಗಳು ಮುಳುಗಲಿದ್ದು, 201 ಹೆಕ್ಟೇರ್ ಖಾಸಗಿ ಭೂಮಿ ಕೂಡ ಬೇಕಾಗುತ್ತದೆ.

6) ಮೇಕೆದಾಟು ಯೋಜನೆ ಪೂರ್ಣಗೊಂಡರೆ ಬೆಂಗಳೂರು ಹೊರವಲಯದಲ್ಲಿ ನೀರಿನ ಸಮಸ್ಯೆ ಬಹುತೇಕ ಶಮನ.

7) ಮೇಕೆದಾಟು ಯೋಜನೆ ಬರದಲ್ಲಿ ಬೆಂದು ಹೋಗಿರುವ ರಾಮನಗರ ಜಿಲ್ಲೆಗೂ ವರ ನೀಡಬಲ್ಲದು ಎಂಬ ವಿಶ್ವಾಸ.

8) ರಾಮನಗರ ಸುತ್ತಮುತ್ತಲ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ, ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಅಂತರ್ಜಲ ಮಟ್ಟ ಏರಿಕೆ.

9) ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.

10) ಬರದ ಸಂದರ್ಭದಲ್ಲಿ 65-66 ಟಿಎಂಸಿ ಹೆಚ್ಚುವರಿ ನೀರನ್ನು ಬಳಸಿಕೊಂಡು ಮುಂದೆ ತಮಿಳುನಾಡಿಗೂ ಬಿಡಲು ಸಾಧ್ಯವಾಗುತ್ತದೆ.

Mekedatu dam project

‘ಮೇಕೆದಾಟು’ ವಿರುದ್ಧ ತಮಿಳುನಾಡು ಸಮರ ಏಕೆ?

ಹೌದು, ಒಂದು ಕಡೆ ಕರ್ನಾಟಕ ‘ಮೇಕೆದಾಟು’ ಯೋಜನೆ ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಆರಂಭಿಸಲು ಮುಂದಾಗಿದೆ. ಆದರೆ ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಏಕೆ? ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದಕ್ಕೆ ಸಹಜ ಉತ್ತರ ರಾಜಕೀಯ ಎನ್ನಬಹುದು. ಯಾಕಂದ್ರೆ ತಮಿಳುನಾಡು ರಾಜಕೀಯದಲ್ಲಿ ಕಾವೇರಿ ವಿವಾದ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕಿರಿಕ್ ಶುರುವಾಗಿದೆ. ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ಹಾಗೂ ವಿಪಕ್ಷಗಳು ಕಿರಿಕ್ ತೆಗೆದಿವೆ. ಹಾಗಾದರೆ ತಮಿಳುನಾಡು ಸರ್ಕಾರ ಯೋಜನೆಗೆ ವಿರೋಧ ಮಾಡುತ್ತಿರುವುದು ಏಕೆ? ಮುಂದೆ ಓದಿ.

1) ಮೇಕೆದಾಟು ಡ್ಯಾಂ ನಿರ್ಮಾಣವಾದರೆ ನೀರಿನ ಕೊರತೆ ಎದುರಾಗುವ ಭಯವಿದೆ ಎನ್ನುತ್ತಿದೆ ತಮಿಳುನಾಡು ಸರ್ಕಾರ.

2) ಕೆಆರ್‌ಎಸ್‌ ಡ್ಯಾಂ ಬಳಿಕ ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣವತಿ ನದಿಗಳು ಕಾವೇರಿ ನದಿಗೆ ಸೇರಿ ಅನಿಯಂತ್ರಿತವಾಗಿ ನದಿ ಹರಿಯುತ್ತದೆ.

3) ತಮಿಳುನಾಡು ಗಡಿ ಭಾಗದಲ್ಲಿ ಡ್ಯಾಂ ನಿರ್ಮಾಣವಾದರೆ ಅನಿಯಂತ್ರಿತವಾಗಿ ನದಿಯ ಹರಿವು ತಡೆದಂತಾಗುತ್ತದೆ ಎಂಬ ವಾದವಿದೆ.

4) ಈಗಾಗಲೇ ತಮಿಳುನಾಡು ಸರ್ಕಾರ ಕೂಡ ಕಾವೇರಿ ನೀರನ್ನೇ ನಂಬಿಕೊಂಡು ಸಾಕಷ್ಟು ಯೋಜನೆ ಕೈಗೆತ್ತಿಕೊಂಡಿದೆ.

5) ಮೇಕೆದಾಟು ಯೋಜನೆ ತಮಿಳುನಾಡಲ್ಲಿ ಬಹುತೇಕ ರಾಜಕೀಯವಾಗಿ ಬದಲಾಗಿದ್ದು, ದೊಡ್ಡ ಸಮಸ್ಯೆ ಎದುರಾಗಿದೆ.

 Karnataka Budget 2023: ಮೇಕೆದಾಟು ಯೋಜನೆಗೆ ಭೂಸ್ವಾಧೀನ: ಎತ್ತಿನಹೊಳೆ ಯೋಜನೆಗೆ ವೇಗ, ಉ.ಕ. ನೀರಿನ ಸಮಸ್ಯೆಗೆ ಪರಿಹಾರ! Karnataka Budget 2023: ಮೇಕೆದಾಟು ಯೋಜನೆಗೆ ಭೂಸ್ವಾಧೀನ: ಎತ್ತಿನಹೊಳೆ ಯೋಜನೆಗೆ ವೇಗ, ಉ.ಕ. ನೀರಿನ ಸಮಸ್ಯೆಗೆ ಪರಿಹಾರ!

ಹೀಗೆ ಎರಡೂ ರಾಜ್ಯಗಳ ನಡುವೆ ‘ಮೇಕೆದಾಟು’ ಯೋಜನೆ ಮತ್ತೊಮ್ಮೆ ಕಿಚ್ಚು ಹಚ್ಚುವ ಮುನ್ಸೂಚನೆ ನೀಡಿದೆ. ಆದರೆ ಕರ್ನಾಟಕ ಸರ್ಕಾರ ಇದಕ್ಕೆ ತಲೆಕೆಡಸಿಕೊಂಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡ ಬಜೆಟ್‌ನಲ್ಲಿ ‘ಮೇಕೆದಾಟು’ ಯೋಜನೆ ಬಗ್ಗೆ ಮಾತನಾಡಿ, ಯೋಜನೆ ಪೂರ್ಣಗೊಳಿಸುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ನೀರಿನ ಸಮಸ್ಯೆ ನೀಗಿಸಿ, ಬೆಂಗಳೂರಿಗೆ ಅಗತ್ಯವಿರುವ ನೀರು ತಲುಪಿಸುವ ಮಾತು ಕೊಟ್ಟಿದ್ದಾರೆ. ಆದ್ರೆ ಈ ಪರಿಸ್ಥಿತಿ ನೋಡಿದರೆ, ಮುಂದೆ ಕಾನೂನು ಹೋರಾಟ ಮಾಡಬೇಕಿದೆ. ಇದಕ್ಕೂ ರಾಜ್ಯ ಸರ್ಕಾರ ಸಿದ್ಧವಾಗುತ್ತಿದ್ದು, ಏನಾಗುತ್ತೋ ಕಾದು ನೋಡಬೇಕು.

ತಮಿಳುನಾಡು ಸರ್ಕಾರದಿಂದ ಫೈಟಿಂಗ್!

ಒಟ್ನಲ್ಲಿ ತಮಿಳುನಾಡು ರಾಜಕೀಯದಲ್ಲಿ ಕಾವೇರಿ ಹೆಸರು ಎತ್ತದೆ ವೋಟ್ ಬೀಳಲ್ಲ. ಹೀಗಾಗಿ ಅಲ್ಲಿನ ರಾಜಕಾರಣಿಗಳಿಗೆ ಕಾವೇರಿ ನೀರಿನ ವಿಚಾರ ದೊಡ್ಡ ಅಸ್ತ್ರವಾಗಿದೆ. ಕರ್ನಾಟಕದಲ್ಲಿ ನೀರಿದ್ದಾಗ ಸಾವಿರಾರು ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಸಲಾಗಿತ್ತು. ಅದೇ ಹೀಗೆ ಬರಗಾಲ ಬಂದಾಗ ರಾಜಕೀಯ ಶುರುವಾಗಿದೆ. ಈಗಲೂ ಕಾವೇರಿ ಹೋರಾಟ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ಹಲವು ಬಾರಿ ತಮಿಳುನಾಡು ವಿಪಕ್ಷಗಳ ನಾಯಕರು ಹಾಗೂ ಆಡಳಿತ ಪಕ್ಷದ ನಾಯಕರು ಮೇಕೆದಾಟು ಯೋಜನೆ ಬಗ್ಗೆ ಎಚ್ಚರಿಸಿದ್ದಾರೆ. ಈಗ ಬಜೆಟ್ ಸಂದರ್ಭದಲ್ಲೂ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿರುವುದು ಕಿಚ್ಚು ಹೊತ್ತಿಸಿದೆ.

ಮೇಕೆದಾಟು ಸಮೀಪ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿರುವಾಗಲೇ, ತಮಿಳುನಾಡಿನಲ್ಲಿ ಕರ್ನಾಟಕದ ನಡೆ ಬಗ್ಗೆ ಚರ್ಚೆ ಶುರುವಾಗಿ ಚರ್ಚೆ ನಡೀತಿದೆ. ಮುಂದೆ ಇದು ಜ್ವಾಲೆಯಾಗಿ ಸ್ಫೋಟಿಸುವ ಸಾಧ್ಯತೆ ಕೂಡ ಇದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬುದು ಕರ್ನಾಟಕ ಸರ್ಕಾರದ ಆಗ್ರಹ. ಇದೆಲ್ಲಾ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕು. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಮೇಕೆದಾಟು ವಿಚಾರಕ್ಕೆ ದೆಹಲಿಗೆ ತೆರಳಿದ್ದನ್ನ ಇಲ್ಲಿ ಸ್ಮರಿಸಬಹುದು.

English summary

Discover why Karnataka needs Mekedatu dam project

Story first published: Friday, July 7, 2023, 20:28 [IST]

Source link