Reviews
oi-Srinivasa A
ನಿನ್ನೆ ( ಜೂನ್ 29 ) ಬಹು ನಿರೀಕ್ಷಿತ ಆಂಥಲಜಿ ಚಿತ್ರ ಲಸ್ಟ್ ಸ್ಟೋರೀಸ್ 2 ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿದೆ. 2018ರಲ್ಲಿ ಬಿಡುಗಡೆಗೊಂಡಿದ್ದ ಲಸ್ಟ್ ಸ್ಟೋರೀಸ್ ಆಂಥಲಜಿ ಚಿತ್ರದ ಸೀಕ್ವೆಲ್ ಇದಾಗಿದೆ. ಕಥೆ, ವೀಕ್ಷಕರನ್ನು ಎಂಗೇಜಿಂಗ್ ಆಗಿ ಇಡುವ ವಿಚಾರಕ್ಕೆ ಬಂದರೆ ಎರಡನೇ ಭಾಗವನ್ನು ಮೊದಲ ಚಿತ್ರಕ್ಕೆ ಹೋಲಿಸುವುದು ತೀರ ಕಷ್ಟ ಎಂದೇ ಹೇಳಬಹುದಾಗಿದ್ದು, ಲಸ್ಟ್ ಸ್ಟೋರೀಸ್ 2 ಅರ್ಧ ಗೆದ್ದಿದೆ ಎಂದೇ ಹೇಳಬಹುದು.
Rating:
/5
Star Cast: Tamannaah Bhatia, Neena Gupta, Amrutha Subhash, Kajol, Mrunal Thakur, etc
Director: Anthology
ಲಸ್ಟ್ ಸ್ಟೋರೀಸ್ 2ನಲ್ಲಿಯೂ ವಿಭಿನ್ನ ಕಥೆಗಳುಳ್ಳ 4 ಎಪಿಸೋಡ್‌ಗಳಿವೆ. ಮೊದಲ ಎಪಿಸೋಡ್ ‘ಮೇಡ್ ಫಾರ್ ಈಚ್ ಅದರ್’ ಅನ್ನು ಆರ್ ಬಾಲ್ಕಿ ನಿರ್ದೇಶಿಸಿದ್ದು, ಎರಡನೇ ಎಪಿಸೋಡ್ ‘ದ ಮಿರರ್’ ಅನ್ನು ಕೊಂಕಣ ಸೇನ್ ನಿರ್ದೇಶಿಸಿದ್ದಾರೆ, ಮೂರನೇ ಎಪಿಸೋಡ್ ‘ಸೆ- ವಿಥ್ ಎಕ್ಸ್’ಗೆ ಸುಯೋಗ್ ಘೋಷ್ ಆಕ್ಷನ್ ಕಟ್ ಹೇಳಿದ್ದು, ನಾಲ್ಕನೇ ಎಪಿಸೋಡ್ ‘ತಿಲ್ಚಟ್ಟಾ’ಗೆ ಅಮಿತ್ ಶರ್ಮಾ ನಿರ್ದೇಶನವಿದೆ.
ಇನ್ನು ಲಸ್ಟ್ ಸ್ಟೋರೀಸ್ ಕಥೆಗಳು ಯಾವ ವಿಷಯದ ಮೇಲೆ ಆಧಾರಿತವಾಗಿವೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಕಡ್ಡಾಯವಾಗಿ ವಯಸ್ಕರು ವೀಕ್ಷಿಸುವಂತಹ ಈ ಚಿತ್ರದಲ್ಲಿ ನಾಲ್ವರು ನಿರ್ದೇಶಕರು ನಾಲ್ಕು ವಿಭಿನ್ನ ಆಯಾಮಗಳಲ್ಲಿ ಕಾಮ ಎಂಬ ಆಸೆ ಏನೆಲ್ಲಾ ಮಾಡಿಸುತ್ತೆ, ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತೆ, ಎಷ್ಟೆಲ್ಲಾ ನೋವನ್ನು ಕೊಡುತ್ತೆ ಎಂಬುದನ್ನು ತಿಳಿಸಿದ್ದಾರೆ.
ಈ ಪೈಕಿ ಆರ್ ಬಾಲ್ಕಿ ನಿರ್ದೇಶದ ಫಸ್ಟ್ ಎಪಿಸೋಡ್ ಪ್ರೇಮಕ್ಕೆ ಲಸ್ಟ್ ಮುಖ್ಯ ಎಂಬುದನ್ನು ಪ್ರತಿಪಾದಿಸಿದರೆ, ಕೊಂಕಣ ಸೇನ್ ನಿರ್ದೇಶನದ ಎರಡನೇ ಎಪಿಸೋಡ್ ಲಸ್ಟ್‌ನಿಂದ ನೆಮ್ಮದಿ ಸಾಧ್ಯ ಎಂಬುದನ್ನು ತಿಳಿಸಿದೆ, ಮೂರನೇ ಎಪಿಸೋಡ್‌ನಲ್ಲಿ ಸುಯೋಗ್ ಘೋಷ್ ಲಸ್ಟ್‌ಗೆ ಅಸೂಯೆಯ ಟಚ್ ನೀಡಿದ್ದರೆ, ಕೊನೆಯ ಎಪಿಸೋಡ್‌ನಲ್ಲಿ ಅಮಿತ್ ಶರ್ಮಾ ಭಾವನಾತ್ಮಕವಾದ, ದುರಂತದ ಕಥೆಯನ್ನು ಹೇಳಿದ್ದಾರೆ.
ಈ ನಾಲ್ಕು ಕಥೆಗಳ ಪೈಕಿ ಕೊಂಕಣ ಸೇನ್ ಹಾಗೂ ಅಮಿತ್ ಶರ್ಮಾ ನಿರ್ದೇಶನದ ಭಾಗಗಳು ಅದ್ಭುತವಾಗಿ ಮೂಡಿ ಬಂದಿದ್ದು, ಇನ್ನುಳಿದ ಎರಡು ಭಾಗಗಳು ಬೇಸರ ಮೂಡಿಸಿವೆ ಹಾಗೂ ಮುಜುಗರವನ್ನೂ ಸಹ ತರಿಸಿವೆ.
ಮೊದಲ ಭಾಗ: ಆರ್ ಬಾಲ್ಕಿ ನಿರ್ದೇಶನದ ಈ ಭಾಗದಲ್ಲಿ ನಾಯಕ ಅರ್ಜುನ್ ( ಅಂಗದ್ ಬೇಡಿ ) ಹಾಗೂ ನಾಯಕಿ ವೇದಾ ( ಮೃಣಾಲ್ ಠಾಕೂರ್ ) ಈ ಇಬ್ಬರಿಗೂ ಬಾಲ್ಯ ಸ್ನೇಹಿತರಾಗಿದ್ದ ಪೋಷಕರು ಮದುವೆ ನಿಶ್ಚಯ ಮಾಡಲು ಮುಂದಾಗ್ತಾರೆ.
ಈ ಸಂದರ್ಭದಲ್ಲಿ ಸದಾ ದೇವರ ಧ್ಯಾನ ಮಾಡುವ ಮಡಿವಂತೆಯಾಗಿ ಕಾಣಿಸಿಕೊಂಡಿರುವ ವೇದಾಳ ಅಜ್ಜಿ ( ನೀನಾ ಗುಪ್ತಾ ) ಮದುವೆಯಾಗುವ ಜೋಡಿಗಳು ಜೀವನ ಪೂರ್ತಿ ಪ್ರೇಮದಿಂದ ಬದುಕಬೇಕೆಂದರೆ ಇಬ್ಬರ ನಡುವಿನ ಶೃಂಗಾರ ಚೆನ್ನಾಗಿರಬೇಕು ಎಂದು ಎರಡೂ ಕುಟುಂಬದವರ ಮುಂದೆಯೇ ಹೇಳಿಬಿಡ್ತಾರೆ.
ಒಂದು ಕಾರ್ ತೆಗೆದುಕೊಳ್ಳುವಾಗ ಟೆಸ್ಟ್ ಡ್ರೈವ್ ಮಾಡಿ ನೋಡುವಾಗ, ಮದುವೆಗೇಕೆ ಟೆಸ್ಟ್ ಡ್ರೈವ್ ಬೇಡ ಎಂಬ ಡೈಲಾಗ್ ಹೇಳುವ ಅಜ್ಜಿ ಎಲ್ಲರೂ ಮುಜುಗರಕ್ಕೊಳಗಾದರೂ ತನ್ನ ಹಠ ಬಿಡುವುದಿಲ್ಲ. ಹೀಗೆ ನಿಶ್ಚಯವಾಗುವ ಮದುವೆ ಬಗ್ಗೆ ಅಜ್ಜಿ ಮಾಡಿದ ಕಾಮೆಂಟ್‌ನಿಂದ ಏನೆಲ್ಲಾ ನಡೆಯುತ್ತೆ ಎಂಬುದೇ ಮೊದಲ ಭಾಗ.
ಇಂದೋ ನಾಳೆಯೋ ಎಂದು ಕೊನೆಯ ದಿನಗಳನ್ನು ತಳ್ಳುತ್ತಿರುವ ಹಿರಿ ಜೀವದ ಬಾಯಲ್ಲಿ ಇಷ್ಟೊಂದು ಬೋಲ್ಡ್ ಪಾಠ ಮಾಡಿಸಿರುವುದು ಈ ಭಾಗದ ಬಿಗ್ಗೆಸ್ಟ್ ಮೈನಸ್ ಪಾಯಿಂಟ್ ಹಾಗೂ ವೀಕ್ಷಕರಲ್ಲಿ ಬೇಸ್‌ಲೆಸ್ ಎಂಬ ಅಭಿಪ್ರಾಯವನ್ನೂ ಮೂಡಿಸಿದೆ. ಪಡ್ಡೆ ಹುಡುಗರಿಗೆ ಮೃಣಾಲ್ ಠಾಕೂರ್ ಹಸಿ ಬಿಸಿ ದೃಶ್ಯಗಳು ಇಷ್ಟವಾಗುತ್ತವೆಯೇ ಹೊರತು ಕಥೆ ವಿಚಾರವಾಗಿ ಈ ಭಾಗ ನೀರಸ, ಸಮಯಹಾಳು ಎಂದೇ ಹೇಳಬಹುದು.
ಎರಡನೇ ಭಾಗ: ಕೊಂಕಣ ಸೇನ್ ನಿರ್ದೇಶನದ ಈ ಭಾಗ ವೀಕ್ಷಕರ ಫೇವರಿಟ್ ಆಗಲಿದೆ. ಈ ಭಾಗದಲ್ಲಿ ಮನೆಯೊಡತಿ ಇಶಿತಾ ( ತಿಲೋತ್ತಮ ಶೋಮ್ ) ಹಾಗೂ ಮನೆ ಕೆಲಸದಾಕೆ ಶೀಮಾ ( ಅಮೃತಾ ಸುಭಾಷ್ ) ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಈ ಭಾಗದಲ್ಲಿ ಲಸ್ಟ್ ಎಂದರೆ ನೆಮ್ಮದಿ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ತಾನು ಕೆಲಸ ಮಾಡುವ ಮನೆಯಲ್ಲಿಯೇ ತನ್ನ ಪತಿ ಜತೆ ಏಕಾಂತವಾಗಿರುವ ಕೆಲಸದಾಕೆಯನ್ನು ಕಂಡು ಮನೆಯೊಡತಿ ಸಂತಸಪಡುವ ವಿಭಿನ್ನ, ವಿಚಿತ್ರವೆನಿಸುವ ಕಥೆಯನ್ನು ಈ ಭಾಗ ಹೊಂದಿದ್ದು, ಕಥೆಯ ಅಂತ್ಯ ಮಾತ್ರ ಜನರ ಮನಸ್ಸನ್ನು ಗೆಲ್ಲಲಿದೆ.
ಮೂರನೇ ಭಾಗ: ಲಸ್ಟ್ ಸ್ಟೋರೀಸ್ 2 ಚಿತ್ರದ ಕಳಪೆ ಎಪಿಸೋಡ್ ಎಂದರೆ ಇದೇ ಎನ್ನಬಹುದು. ನಿರ್ದೇಶಕ ಸುಯೋಗ್ ಘೋಷ್ ಲಸ್ಟ್ ಅಸೂಯೆಗೆ ಎಡೆ ಮಾಡಿಕೊಡಲಿದೆ ಎಂಬುದನ್ನು ತಿಳಿಸುವ ಯತ್ನವನ್ನು ಮಾಡಿದ್ದಾರಾದರೂ ವೀಕ್ಷಕರಿಗೆ ಇಷ್ಟವಾಗುವ ಸ್ಕ್ರೀನ್‌ಪ್ಲೇ ಬರೆಯುವಲ್ಲಿ ವಿಫಲರಾಗಿದ್ದಾರೆ ಎಂದೇ ಹೇಳಬಹುದು. ಇದರಲ್ಲಿ ಶಾಂತಿ ( ತಮನ್ನಾ ) ಹಾಗೂ ವಿಜಯ್ ಚೌಹಾಣ್ ( ವಿಜಯ್ ವರ್ಮಾ ) ನಾಯಕಿ ಹಾಗೂ ನಾಯಕನಾಗಿ ಕಾಣಿಸಿಕೊಂಡಿದ್ದು, ಹಿಂದೆ ಪ್ರೇಮಿಗಳಾಗಿದ್ದ ಇಬ್ಬರೂ ಸಹ ಹತ್ತು ವರ್ಷಗಳ ಬಳಿಕ ಮತ್ತೆ ಕಾರಣಾಂತರದಿಂದ ಭೇಟಿಯಾಗುತ್ತಾರೆ. ಇನ್ನು ಈ ಭೇಟಿಯ ವೇಳೆ ತಾವಿಬ್ಬರು ದಿಢೀರ್ ಬೇರೆಯಾಗಲು ಕಾರಣವೇನು ಹಾಗೂ ತಾನು ಇದ್ದಕ್ಕಿದ್ದಂತೆ ಕಾಣೆಯಾಗಲು ಕಾರಣವೇನು ಎಂಬುದನ್ನು ನಾಯಕಿ ಬಿಚ್ಚಿಡುತ್ತಾಳೆ. ಆದರೆ ನಾಯಕಿಗೂ ತಿಳಿಯದ ರಹಸ್ಯವೊಂದು ಕೊನೆಯಲ್ಲಿ ತೆರೆದುಕೊಳ್ಳಲಿದ್ದು, ಸಸ್ಪೆನ್ಸ್ ಟಚ್ ಅನ್ನು ನಿರ್ದೇಶಕರು ಕೊಟ್ಟಿದ್ದರೂ ಸಹ ಈ ಭಾಗ ಅಷ್ಟೇನೂ ಇಷ್ಟವಾಗುವುದಿಲ್ಲ.
ನಾಲ್ಕನೇ ಭಾಗ: ಎರಡನೇ ಭಾಗದಲ್ಲಿ ಫೀಲ್ ಗುಡ್ ಎನಿಸುವ ಅನುಭವ ಪಡೆಯುವ ಪ್ರೇಕ್ಷಕನಿಗೆ ಮೂರನೇ ಭಾಗ ನಿರಾಸೆ ಮೂಡಿಸಿದ ಬಳಿಕ ಅಮಿತ್ ಶರ್ಮಾ ನಿರ್ದೇಶನದ ಕೊನೆಯ ಭಾಗ ತೃಪ್ತಿ ಕೊಡಲಿದೆ ಹಾಗೂ ಕಾಡಲಿದೆ. ಕುಮುದ್ ಮಿಶ್ರಾ ಜಮೀನ್ದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಜೋಲ್ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಕಾಮಮೃಗದಂತೆ ವರ್ತಿಸುವ ಜಮೀನ್ದಾರ ವೇಶ್ಯೆಯಾದ ನಾಯಕಿಯನ್ನೇ ಮದುವೆಯಾಗಿರುತ್ತಾನೆ ಹಾಗೂ ಪ್ರತಿದಿನ ಹಿಂಸೆ ನೀಡುವುದು ಆತನ ದಿನಚರಿ. ಇನ್ನು ನಾಯಕಿಗೆ ಇದ್ದ ಒಬ್ಬ ಮಗನನ್ನು ಇಂಗ್ಲೆಂಡ್‌ಗೆ ಕಳುಹಿಸಿ ವಿದ್ಯಾವಂತನನ್ನಾಗಿ ಮಾಡಬೇಕು, ಅಪ್ಪನ ಹಾಗೆ ಆತ ಆಗಬಾರದೆಂಬ ಕನಸು. ಆದರೆ ಇಲ್ಲಿ ಲಸ್ಟ್ ದುರಂತಕ್ಕೆ ದೂಡಲಿದ್ದು, ಬೇಸರದ ಹಾಗೂ ಕಾಡುವ ಅಂತ್ಯವನ್ನು ಕಥೆ ಕಾಣಲಿದೆ.
ಒಟ್ಟಿನಲ್ಲಿ ಹೆಚ್ಚೇನೂ ನಿರೀಕ್ಷಿಸದೆ ಟೈಮ್‌ಪಾಸ್‌ಗಾಗಿ ಚಿತ್ರವೊಂದನ್ನು ನೋಡಬೇಕು ಎಂಬ ಯೋಜನೆ ಇರುವವರು, ಒಬ್ಬರೇ ಅಥವಾ ಸ್ನೇಹಿತರ ಜತೆ ಕುಳಿತು ಈ ಚಿತ್ರವನ್ನು ನೋಡಬಹುದಾಗಿದೆ. ಮನೆಯವರ ಜತೆ, ಮಕ್ಕಳ ಜತೆ ಈ ಚಿತ್ರವನ್ನು ನೋಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ.
English summary
Lust Stories 2 Review: Konkana Sen and Amith Sharma saved the anthology film
Friday, June 30, 2023, 6:06