Karnataka
oi-Reshma P
ರಾಮನಗರ, ಜೂನ್ 24: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಸದ್ಯ ಸೋಲಿನಿಂದ ಚೇತರಿಸಿಕೊಂಡಿರುವ ಪಕ್ಷಗಳು 2024 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿವೆ.
ಮೂರು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಬಿಜೆಪಿ ಪಕ್ಷವೂ ಜೆಡಿಎಸ್ ಜೊತೆಗೆ ಮೈತ್ರಿಗೆ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದೀಗ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಕೊಟ್ಟ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತೆ ಮಾಡಿದೆ.
ಹೌದು, ಶತ್ರುವಿನ ಶತ್ರು ಮಿತ್ರ ಎಂಬ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡು ಮುಂಬರುವ ಲೋಕಸಭೆ ಚುನಾವಣೆಗೆ ಸರಿಯಾದ ತಂತ್ರ ಹೆಣೆಯಲು ಯೋಚಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಗೆಲ್ಲುವ ತವಕದಲ್ಲಿರುವ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನ ಇಡುವ ಬಗ್ಗೆ ಚಿಂತನೆ ನಡೆಸಿದ್ದು, ಇದೀಗ ಬಿಜೆಪಿ ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋಗಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಜೆಡಿಎಸ್ ಜೊತೆ ಹೊಂದಾಣಿಕೆ ಆಗಬಹುದು ಎಂದು ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಆಗಲೇಬೇಕು. ಅತಿ ಹೆಚ್ಚು ಸಂಸದರನ್ನ ಲೋಕಸಭೆಗೆ ಕಳುಹಿಸಬೇಕು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೇಳಿದರೇ ಸ್ಪರ್ಧಿಸುತ್ತೇನೆ. ಮುಂದೆ ರಾಜ್ಯ ರಾಜಕಾರಣದಲ್ಲಿ ಬಹಳ ಬದಲಾವಣೆ ಆಗುತ್ತದೆ. ಜೆಡಿಎಸ್ ಜೊತೆ ಹೊಂದಾಣಿಕೆ ಆಗಬಹುದು. ಲೋಕಸಭೆ ಟಿಕೆಟ್ ಬಗ್ಗೆ ಪಕ್ಷದ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ಇತ್ತ ಲೋಕಸಮರಕ್ಕೆ ಜೆಡಿಎಸ್ ಜೊತೆಗಿನ ಮೈತ್ರಿಗೆ ಬಿಜೆಪಿ ಮುಂದಾಗಿದ್ದು, ಜೆಡಿಎಸ್ ಗೆ 5 ರಿಂದ 6 ಕ್ಷೇತ್ರಗಳನ್ನು ಬಿಟ್ಟುಕೊಟ್ಟು. ಇನ್ನುಳಿದ ಕ್ಷೇತ್ರದಲ್ಲಿ ಜೆಡಿಎಸ್ ಸಂಪೂರ್ಣ ಬೆಂಬಲವನ್ನು ಬಿಜೆಪಿ ಕೇಳಬೇಕು ಎನ್ನುವ ಪ್ಲಾನ್ ಹಾಕಿಕೊಂಡಿದೆ. 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 20 ರಿಂದ 22 ಸ್ಥಾನಗಳನ್ನು ಗೆದ್ದು, ಜೆಡಿಎಸ್ 8 ಸ್ಥಾನಗಳನ್ನು ಬಿಟ್ಟು ಕೊಡಬಹುದು. ಹೀಗಾಗಿ ಜೆಡಿಎಸ್ ಒಪ್ಪಿದರೆ ಮೈತ್ರಿ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆದಿದೆ ಎನ್ನಲಾಗಿದೆ.
ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ; ಹೆಚ್ ಡಿ ಕುಮಾರಸ್ವಾಮಿ
ಇನ್ನೂ 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ನನ್ನ ಮುಂದೆ ಯಾವುದೇ ಚರ್ಚೆ ಆಗಿಲ್ಲ ರಾಜಕಾರಣದಲ್ಲಿ ಚರ್ಚೆ, ಊಹಾಪೋಹಗಳು ಸಹಜ. ಇದು ಕೆಲವೊಮ್ಮೆ ಗಾಳಿ ಸುದ್ದಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ: ದೇವೇಗೌಡ
ಇತ್ತ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಲೋಕಸಭಾ ಚುನಾವಣೆಗೆ ತಯಾರಿಯನ್ನ ನಡೆಸುತ್ತಿರುವ ದೇವೇಗೌಡರು, ಲೋಕಸಭೆ ಚುನಾವಣೆಗೆ ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಸ್ವಂತ ಬಲದಿಂದ ಹೋರಾಟ ಮಾಡುವ ಶಕ್ತಿ ನಮಗೆ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಖಡಕ್ ಸಂದೇಶ ರವಾನಿಸಿದ್ದರು.
English summary
Lok Sabha Elections 2024: Karnataka bjp and jds Likely coalition in Upcoming loksabha election 2024; BJP Leader CP Yogeshwar Given Hint.
Story first published: Saturday, June 24, 2023, 9:16 [IST]