KRS ಜಲಾಶಯದಲ್ಲಿ ಹುದುಗಿದ್ದ ಅವಶೇಷಗಳು ಪತ್ತೆ, ಇಷ್ಟರಮಟ್ಟಿಗೆ ಇದೆ ಈ ಬಾರಿ ಮಳೆ..! | KRS Reservoir is draining, Mandya district’s people worried

Mandya

lekhaka-Lavakumar B M

|

Google Oneindia Kannada News

ಮಂಡ್ಯ, ಜೂನ್‌, 30: ಮುಂಗಾರು ಕೈಕೊಟ್ಟ ಹಿನ್ನೆಲೆ ಈಗಾಗಲೇ ತಳ ಸೇರಿರುವ ಕೆಆರ್‌ಎಸ್ ಜಲಾಶಯ ಈ ಬಾರಿ ಭರ್ತಿಯಾಗುತ್ತಾ? ಎನ್ನುವ ಪ್ರಶ್ನೆ ಮೂಡತೊಡಗಿದೆ. ಆದರೂ ಮುಂದಿನ ದಿನಗಳಲ್ಲಿ ಮುಂಗಾರು ಚೇತರಿಸಿಕೊಂಡು ಮಲೆನಾಡು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಜಲಾಶಯ ಭರ್ತಿಯಾಗುವುದು ಕಷ್ಟವೇನಲ್ಲ.

ಕಳೆದ ಐದು ವರ್ಷಗಳಿಂದ ಮಲೆನಾಡಿನಲ್ಲಿ ಬರೀ ಮಳೆಯಲ್ಲ, ಮಹಾಮಳೆಯೇ ಸುರಿದಿತ್ತು. ಅದರಲ್ಲೂ 2018ರಿಂದ 20ರ ತನಕ ಮಹಾಮಳೆಯೇ ಸುರಿದು ಜನರನ್ನು ತಲ್ಲಣಗೊಳಿಸಿತ್ತು. ಪರಿಣಾಮ ಲಕ್ಷಾಂತರ ಕ್ಯುಸೆಕ್ ನೀರು ಹರಿದು ಬಂದು ಜಲಾಶಯನ್ನು ಸೇರಿತ್ತಲ್ಲದೆ, ಬಹುಬೇಗ ಜಲಾಶಯ ಭರ್ತಿಯಾಗುವುದರೊಂದಿಗೆ ಹೊರಕ್ಕೆ ನೀರು ಹರಿದು ಹೋಗಿತ್ತು. ಹೀಗಾಗಿ ನೀರಿನ ಸಮಸ್ಯೆ ಕಾಣಿಸಿರಲಿಲ್ಲ.

KRS Reservoir is draining, Mandya districts people worried

2021ರಲ್ಲಿ ಮಳೆ ಉತ್ತಮವಾಗಿ ಸುರಿದಿತ್ತಾದರೂ ಸೆಪ್ಟಂಬರ್ ವೇಳೆಗೆ ಜಲಾಶಯ ಭರ್ತಿಯಾಗಿತ್ತು. 2022ರಲ್ಲಿ ತಡವಾಗಿ ಆದರೂ ಜಲಾಶಯ ಭರ್ತಿಯಾಗಿತ್ತಲ್ಲದೆ, ನವೆಂಬರ್ ತನಕವೂ ಮಳೆ ಸುರಿದಿದ್ದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆ ಆಗಿರಲಿಲ್ಲ.

ಕರ್ನಾಟಕ ಕರಾವಳಿಯಲ್ಲಿ 10 ದಿನ ಭಾರೀ ಮಳೆ ಮುನ್ಸೂಚನೆ ಕರ್ನಾಟಕ ಕರಾವಳಿಯಲ್ಲಿ 10 ದಿನ ಭಾರೀ ಮಳೆ ಮುನ್ಸೂಚನೆ

ಪ್ರತಿವರ್ಷವೂ ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಆಗೊಮ್ಮೆ ಈಗೊಮ್ಮೆ ಉತ್ತಮ ಮಳೆ ಆಗುತ್ತದೆ. ಅದರಲ್ಲೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಉತ್ತಮವಾಗಿಯೇ ಸುರಿಯುತ್ತದೆ. ಜೊತೆಗೆ ಜಿಟಿ ಜಿಟಿ ಮಳೆಯೊಂದಿಗೆ ಆರಂಭವಾಗುವ ಮುಂಗಾರು ಜುಲೈ ಮತ್ತು ಆಗಸ್ಟ್ ವೇಳೆಗೆ ಬಿರುಸು ಪಡೆದುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡುಬಂದಿದೆ.

ಕೆಲವೊಮ್ಮೆ ಜೂನ್ ತಿಂಗಳಲ್ಲೇ ಮಹಾಮಳೆ ಸುರಿದು ನದಿ, ತೊರೆಗಳು ತುಂಬಿ ಹರಿದ ನಿದರ್ಶನಗಳಿವೆ. ಆದರೆ ಮಲೆನಾಡಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಜುಲೈ ಆಗಸ್ಟ್ ತಿಂಗಳಲ್ಲಿ ಮಹಾಮಳೆ ಸುರಿದು ಅನಾಹುತಗಳನ್ನು ಸೃಷ್ಟಿಸಿದ್ದನ್ನು ನಾವು ನೋಡಿದ್ದೇವೆ. ಅದು ಏನೇ ಇರಲಿ ಮಳೆಯಿಂದಾಗಿ ಐದು ವರ್ಷವೂ ಯಾವುದೇ ಅಡ್ಡಿ ಆತಂಕವಿಲ್ಲದೆ, ಕೆಆರ್‌ಎಸ್ ಜಲಾಶಯ ಭರ್ತಿಯಾಗಿತ್ತು. ಇದು ಸಂತೋಷದ ವಿಷಯವೇ ಆದರೆ ಈ ವರ್ಷ? ಎನ್ನುವ ಇದೊಂದು ಪ್ರಶ್ನೆ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಕಾವೇರಿ ಕಣಿವೆಯಲ್ಲಿ ಮುಂಗಾರು ದುರ್ಬಲ

ಈಗಿನ ಮುಂಗಾರು ಮಳೆಯನ್ನು ನೋಡಿದರೆ ಭಯ ಮೂಡುತ್ತಿದೆ. ಕೊಡಗಿನಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾವೇರಿ ನದಿ ತುಂಬಿ ಹರಿದು ಕೆಆರ್‌ಎಸ್ ಜಲಾಶಯ ಭರ್ತಿಯಾಗಲು ಸಾಧ್ಯ. ಆದರೆ ಜನವರಿಯಿಂದ ಇಲ್ಲಿವರೆಗೆ ಕಳೆದ ವರ್ಷದ ಕಾಲು ಭಾಗವಷ್ಟೆ ಮಳೆ ಸುರಿದಿದೆ. ಹೀಗಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿಲ್ಲ.

ಇದರಿಂದ ಕೆಆರ್‌ಎಸ್ ಜಲಾಶಯಕ್ಕೆ ನೀರು ಹರಿದುಬರಲೇ ಇಲ್ಲ. ಮುಂದೆ ಜುಲೈ ಆಗಸ್ಟ್ ತಿಂಗಳಲ್ಲಿ ಮಳೆ ಸುರಿದು ಜಲಾಶಯ ಭರ್ತಿಯಾಗುವಷ್ಟರ ಮಟ್ಟಿಗೆ ನೀರು ಹರಿದುಬರಬಹುದು ಎಂಬ ನಿರೀಕ್ಷೆ ಎಲ್ಲರದ್ದಾಗಿದೆ. ಸದ್ಯ 124 ಅಡಿ ಸಾಮರ್ಥ್ಯದ ಕೆ.ಆರ್.ಎಸ್ ಜಲಾಶಯದಲ್ಲಿ 77ಅಡಿಯಷ್ಟು ನೀರಿದೆ. ಹಾಗಾಗಿ ಈ ಬಾರಿ ಜಲಾಶಯ ಭರ್ತಿಯಾಗಬೇಕಾದರೆ ಇನ್ನು 47 ಅಡಿಯಷ್ಟು ನೀರು ಬೇಕಾಗುತ್ತದೆ.

ಜಲಾಶಯ ಭರ್ತಿಯಾಗಬೇಕಾದರೆ ಮುಂಗಾರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯಬೇಕಾಗುತ್ತದೆ. 2013ರಲ್ಲಿ ಕೆಆರ್‌ಎಸ್ ಜಲಾಶಯ 65 ಅಡಿ ತಲುಪಿತ್ತು. ಆಗ ಕುಡಿಯುವುದಕ್ಕೂ ನೀರಿಲ್ಲದೆ ಜನ ಪರದಾಡುವಂತಾಗಿತ್ತು. ಅವತ್ತು ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮುಳುಗಡೆಯಾಗಿದ್ದ ಗ್ರಾಮಗಳು, ವೀರಗಲ್ಲು, ಮಾಸ್ತಿಗಲ್ಲಿನಂತಹ ಶಾಸನಗಳು, ದೇವಾಲಯಗಳು ಕಾಣತೊಡಗಿದ್ದವು.

ಮುಳುಗಡೆಯಾಗಿದ್ದ ಸ್ಥಳಗಳು ಕಂಡ ಕೂಡಲೇ ಇವುಗಳನ್ನು ನೋಡಲು ಜನ ತಂಡೋಪ ತಂಡವಾಗಿ ಆಗಮಿಸಿತ್ತು. ಈ ವೇಳೆ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ವೇಣುಗೋಪಾಲ ದೇಗುಲ, ನಾರಾಯಣಸ್ವಾಮಿ ದೇವಾಲಯ, ಸುಬ್ರಹ್ಮಣ್ಯೇಶ್ವರ ಗೋಪುರ, ಹಲವಾರು ಕಲ್ಲಿನ ಶಾಸನಗಳನ್ನು ನೋಡಿ ಅಚ್ಚರಿ ಪಟ್ಟಿದ್ದರು.

ಈ ಹಿಂದೆಯೂ ಬರಿದಾಗಿದ್ದ ಕೆಆರ್‌ಎಸ್ ಜಲಾಶಯ

2000 ಇಸವಿಯಲ್ಲಿಯೂ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇಳಿದಾಗ ಹಿನ್ನೀರಿನಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಪತ್ತೆಯಾಗಿತ್ತು. ಆಗ ಜಲಾಶಯದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಿ ಸುಂದರವಾಗಿ ದೇವಾಲಯವನ್ನು ಮತ್ತೆ ಖೋಡೆಸ್ ಕಂಪನಿ ನಿರ್ಮಿಸಿದ್ದು ಇತಿಹಾಸವಾಗಿದೆ. 2013ರ ನಂತರ 2014ರ ನಂತರ ಬರಗಾಲ ಕಾಣಿಸಿಕೊಂಡಿತ್ತು.

2016ರಲ್ಲಿ ಕೂಡ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರೈತರು ಹಿನ್ನೀರಿನಲ್ಲಿ ಉಳುಮೆ ಮಾಡಿ ಬೆಳೆ ಬೆಳೆದಿದ್ದರು. ಬೆಸ್ತರು ಗುಡಿಸಲು ಹಾಕಿಕೊಂಡು ಮೀನು ಹಿಡಿದಿದ್ದರು. ಅದಾದ ನಂತರ 2017ರ ಮುಂಗಾರು ಮಳೆ ಕ್ಷೀಣಿಸಿದರೂ ಹಿಂಗಾರು ಚೆನ್ನಾಗಿ ಸುರಿದಿದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿತ್ತಾದರೂ ಭರ್ತಿಯಾಗಿರಲಿಲ್ಲ. 2018ರ ನಂತರ ಕಳೆದ ವರ್ಷದ (2022) ತನಕವೂ ಪ್ರತಿವರ್ಷ ಕೆಆರ್‌ಎಸ್ ಜಲಾಶಯ ಭರ್ತಿಯಾಗುತ್ತಲೇ ಬರುತ್ತಿದೆ. ಈ ವರ್ಷ ಏನಾಗುತ್ತದೆ ಎಂಬುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

English summary

Monsoon Rain: Shortage of Rain in this year, KRS Reservoir is draining, Mandya district’s people worried,

Story first published: Friday, June 30, 2023, 20:09 [IST]

Source link