Karnataka
oi-Shankrappa Parangi
ಬೆಂಗಳೂರು, ಜೂನ್ 23: ಕರ್ನಾಟಕ ರಾಜ್ಯದ ಒಂದು ಭಾಗದಲ್ಲಿ ಮಾತ್ರವೇ ಮುಂಗಾರು ಮಳೆ ಚುರುಕಾಗಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಎಂದಿಗಿಂತಲೂ ಅತ್ಯಧಿಕ ಮಳೆ ಬೀಳಲಿದ್ದು, ‘ಆರೇಂಜ್’ ಮತ್ತು ‘ಯೆಲ್ಲೋ ಅಲರ್ಟ್” ಎಚ್ಚರಿಕೆ ನೀಡಲಾಗಿದೆ. ಒಳನಾಡಿನ ಕೆಲವು ಜಿಲ್ಲೆಗಳಿಗೆ ಸಾಧಾರಣ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕಕ್ಕೆ ತಡವಾಗಿ ಆರಂಭವಾಗಿರುವ ಮುಂಗಾರು ಮಳೆ ರಾಜ್ಯಾದ್ಯಂತ ಚುರುಕುಗೊಳ್ಳಲು ಇನ್ನು ಸಮಯ ಹಿಡಿಯಬಹುದು ಎನ್ನಲಾಗಿದೆ. ಮಳೆ ವಿಳಂಬದಿಂದಾಗಿ ಪರಿಪೂರ್ಣವಾಗಿ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ. ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನ ಜಿಲ್ಲೆಗಳಿಗೆ ಮಳೆಯ ತುರ್ತು ಅಗತ್ಯತೆ ಇದೆ.
ಆದರೆ ಒಳನಾಡಿಗೆ ಕೃಪೆ ತೋರದ ವರುಣ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರ ಶುರುವಿಟ್ಟುಕೊಂಡಿದ್ದಾನೆ. ಮುಂದಿನ ಐದು ದಿನವೂ ಕರಾವಳಿಯಲ್ಲಿ ವರುಣಾರ್ಭಟ ಹೆಚ್ಚಿರಲಿದೆ.
Monsoon Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಮುಂದಿನ 5 ದಿನಗಳ ಕಾಲ ವರುಣಾರ್ಭಟ, ಇಲ್ಲಿದೆ ವಿವರ
ನಾಳೆ ಶನಿವಾರದಿಂದ ಜೂನ್ 28ರವರೆಗೆ ಐದು ದಿನ ಕರಾವಳಿಯ ಉತ್ತರ ಕನ್ನಡ ಜಿಲ್ಲೆಗೆ ಎರಡು ದಿನ, ಉಡುಪಿ ಮತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು ದಿನ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ದಿನಗಳು ಈ ಮೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಚಂಡಮಾರುತದ ನಂತರ ಕರಾವಳಿಗೆ ಮಳೆ ಅಬ್ಬರ
ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ಚಂಡಮಾರುತ ಅಬ್ಬರವಿದ್ದಾಗಲೂ ಸಹ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಇಷ್ಟೊಂದು ಮಳೆ ಆಗಲಿರಲಿಲ್ಲ. ಮುಂಗಾರು ಚುರುಕು ಹಿನ್ನೆಲೆಯಲ್ಲಿ ವ್ಯಾಪಕವಾಗಿ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಮೈಸೂರು, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಬೀಳುವ ಸಂಭವವಿದೆ.
ಒಳನಾಡಿನ ಕೆಲವೆಡೆ ಅಲ್ಲಲ್ಲಿ ಮಳೆ ಸಾಧ್ಯತೆ
ಇದಾದ ನಂತರದ ಮೂರು ದಿನಗಳು ಹಲವು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಜೂನ್ 27 ಮತ್ತು ಜೂನ್ 28ರಂದು ಮಾತ್ರ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಭಾರೀ ಮಳೆ ಸುರಿಯುವುದರಿಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಉತ್ತರ ಒಳನಾಡಿನ ಬಹುತೇಕ ಎಲ್ಲ ಕಡೆ ತುಂತುರು ಮಳೆ, ಕೆಲವೆಡೆ ಜೋರು ಮಳೆ ಆಗಮನ ನಿರೀಕ್ಷೆ ಇದೆ. ಕೊನೆಯ ಎರಡು ದಿನ ಅಂದರೆ ಜೂನ್ 27 ಮತ್ತು ಜೂನ್ 28ರಂದು ಬೀದರ್ ಮತ್ತು ಕಲಬುರಗಿಗೆ ಅಧಿಕ ಮಳೆ ಬರುವ ಸಂಬಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಐಎಂಡಿ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
English summary
karnataka rains: Monsoon no active in interior districts of Karnataka, Coastal area got yellow and orange alert, IMD forecast report said.
Story first published: Friday, June 23, 2023, 22:10 [IST]