Karnataka
oi-Reshma P
ಬೆಂಗಳೂರು, ಜೂನ್ 22: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಭಾರೀ ಚರ್ಚೆಯಾಗುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಸರಣಿ ಸೋಲಿನ ಬಳಿಕ ಕೊನೆಯ ವೇದಿಕೆಗೆ ದಳಪತಿಗಳು ಮುಂದಾಗಿದ್ದಾರೆ.
ಹೌದು, 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ವೇಳೆ ಕಾಂಗ್ರೆಸ್ ಬೆಂಬಲವನ್ನ ನೀಡಿದ್ರೂ ಸಹ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ದ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಾಯ್ತು. ನಂತರ ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದಾಗಿ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟಿದ್ದು, 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸಹ ಮಾಡಿದ್ದರು.ಆದ್ರೆ ರಾಮನಗರದ ಜನತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೈನ್ ಅವರಿಗೆ ಅತ್ಯಧಿಕ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದರು.
ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ 76,439 ಮತ ಪಡೆದಿದ್ರೆ, ವಿಜೇತ ಅಭ್ಯರ್ಥಿ 87,285 ವೋಟ್ ಪಡೆದು ಗೆಲುವು ಸಾಧಿಸಿದ್ದರು. ಇನ್ನೂ 2019 ರ ಲೋಕಸಭೆ ಹಾಗೂ 2023 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಹಿನ್ನಲೆ ರಾಜಕೀಯದಲ್ಲಿ ಮುಂದುವರೆಯಬೇಕಾ ಅಥವಾ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಬೇಕಾ ಅನ್ನೋ ಗೊಂದಲದಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದಾರೆ ಎನ್ನಲಾಗಿದೆ.
ಈಗಾಗಲೇ ವಿಧಾನಸಭಾ ಚುನಾವಣೆಯ ಬಳಿಕ ಎರಡು ಸಿನಿಮಾಗಳಲ್ಲಿ ನಟಿಸಲು ನಿಖಿಲ್ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರಂತೆ. ಹೊಸ ಕಥೆಗಳನ್ನು ಸಹ ಕೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪುತ್ರ ರಾಜಕೀಯ ಭವಿಷ್ಯವನ್ನ ರೂಪಿಸಲು ಕುಮಾರಸ್ವಾಮಿ ಮುಂದಾಗಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಚರ್ಚೆ ಜೆಡಿಎಸ್ ನಲ್ಲಿ ನಡೆಯುತ್ತಿದೆ.
ಅವಧಿಗೂ ಮುನ್ನ ಲೋಕಸಭಾ ಚುನಾವಣೆಗೆ ಬಿಜೆಪಿ ಸರ್ಕಾರದ ಸಿದ್ಧತೆ?
ಇತ್ತ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿ ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಯಾಗಲಿದೆ ಎನ್ನುವ ಚರ್ಚೆ ದೆಹಲಿ ನಾಯಕರ ಮಟ್ಟದಲ್ಲಿ ನಡೆದಿದೆ ಎನ್ನಲಾಗಿದ್ದು, ದೆಹಲಿಯ ಬಿಜೆಪಿ ನಾಯಕರ ಜೊತೆಗೆ ದಳಪತಿಗಳು ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಎದುರಾಗಲಿರುವ ಲೋಕಸಭಾ ಚುನಾವಣೆ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಕೊನೆಯ ವೇದಿಕೆಯಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಸ್ಪರ್ಧೆ ಮಾಡ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ ಮಂಡ್ಯಯಿಂದ ಮತ್ತೆ ಸ್ಪರ್ಧೆ ಮಾಡಬೇಕಾ? ಬೇಡವಾ? ಎಂಬುದರ ಬಗ್ಗೆ ತಂದೆ ಕುಮಾರಸ್ವಾಮಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲವಂತೆ. ಈ ಹಿಂದೆ ರಾಜ್ಯ ರಾಜಕಾರಣ ಬೇಡವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಟ್ಟು, ರಾಷ್ಟ್ರ ರಾಜಕಾರಣದತ್ತ ಮುಂದಾಗಲಿದ್ದಾರೆ ಎಂದು ಹೇಳಲಾಗಿದೆ.
2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 5 ಅಥವಾ 6 ಸ್ಥಾನಗಳನ್ನ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಹೇಳಲಾಗಿದ್ದು, ಬಿಜೆಪಿಗೆ ಬೆಂಬಲ ನೀಡುವ ಮೂಲಕ ಲೋಕಸಭಾ ಚುನಾವಣೆಯ ಬಳಿಕ ರಾಜ್ಯಸಭಾ ಸದಸ್ಯರಾಗುವ ಮೂಲಕ ಕೇಂದ್ರದ ರಾಜಕಾರಣಕ್ಕೆ ಹೆಚ್ ಡಿ ಕುಮಾರಸ್ವಾಮಿ ಮುಂದಾಗಲಿದ್ದಾರೆ ಎನ್ನಲಾಗಿದೆ. ಈ ಕುರಿತು ದೆಹಲಿ ಮಟ್ಟದಲ್ಲಿ ಮಹತ್ವದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಎನ್ ಡಿ ಎ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರವನ್ನ ಕುಮಾರಸ್ವಾಮಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿಯಾಗಿ ಹಳೇಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್‌ಗೆ ಬೆಂಬಲ ನೀಡುವ ಮೂಲಕ ರಾಜ್ಯಸಭೆಗೆ ತೆರಳಿ, ಚನ್ನಪಟ್ಟಣ ಕ್ಷೇತ್ರವನ್ನು ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಕೊಡುವ ಬಗ್ಗೆ ಕುಮಾರಸ್ವಾಮಿ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಬಿಜೆಪಿ ಜೊತೆಗೆ ಒಳಮೈತ್ರಿಯಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಸುಲಭ ಗೆಲಬಹುದು ಎಂಬ ಲೆಕ್ಕಾಚಾರವನ್ನ ಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಹಿಂದೆ 1996 ಮತ್ತು 2009 ರಲ್ಲಿ ಸಂಸದರಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಇತ್ತ ಹಲವು ರಾಜಕೀಯ ಲೆಕ್ಕಾಚಾರವನ್ನ ಹಾಕಿಕೊಂಡಿರುವ ಕುಮಾರಸ್ವಾಮಿ ಪುತ್ರನಿಗೆ ರಾಜಕೀಯ ನೆಲೆ ಕಟ್ಟಿಕೊಡಲು ಮುಂದಾಗಿದ್ದಾರೆ ಎಂದು ಹೀಗೊಂದು ವದಂತಿ ಹರಿದಾಡ್ತಾ ಇದೆ ಎನ್ನಲಾಗಿದೆ.
English summary
Will HD Kumaraswamy Sacrifice Channapatna Mla ticket to Grow Nikhil Kumaraswamy’s Political Career in upcoming Lok Sabha Election | What is CP Yogeshwar indirect message for Channapatna Constituency