India
oi-Shankrappa Parangi
ನವದೆಹಲಿ, ಜೂನ್ 25: ಹಣಕಾಸಿನ ಕೊರತೆ ಎದುರಿಸುತ್ತಿರುವ ಗೋಫಸ್ಟ್ (GoFirst) ಗೆ ಪರಿಹಾರವಾಗಿ ಏರ್ಲೈನ್ನ ಸಾಲದಾತರು ಸುಮಾರು 400 ಕೋಟಿ ರೂಪಾಯಿಗಳ ಮಧ್ಯಂತರ ನಿಧಿ ಅನುಮೋದಿಸಿದ್ದಾರೆ. ಇದರಿಂದಾಗಿ ಗೋಫ್ಟ್ ನಿರಾಳವಾಗಿದೆ.
ತಿಂಗಳ ಹಿಂದಷ್ಟೇ ಗೋಫಸ್ಟ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆ ಕುರಿತು ಅರ್ಜಿ ಸಲ್ಲಿಸಿತ್ತು. ಈ ಮೂಲಕ ಆರ್ಥಿಕ ದಿವಾಳಿ ಹಂತದ ಈ ವಿಮಾನಯಾನ ಸಂಸ್ಥೆಯು ರದ್ದಾದ ತನ್ನ ವಿಮಾನಗಳ ದೇಶೀಯ ಕಾರ್ಯಾಚರಣೆ ಆರಂಭಿಸಲು ಹಣದ ಹುಡುಕಾಟ ಆರಂಭಿಸಿತ್ತು.
ಅದೇ ಬೆನ್ನಲ್ಲೇ ಇದೀಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಡಾಯ್ಚೆ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಒಳಗೊಂಡ ಏರ್ಲೈನ್ಸ್ ಸಾಲಗಾರರ ಸಮಿತಿಯು (ಸಿಒಸಿ) ಹೆಚ್ಚುವರಿ ನಿಧಿಯ ಕೋರಿಕೆಯನ್ನು ಅನುಮೋದಿಸಿದೆ.
ಒಕ್ಕೂಟದ ಭಾಗವಾಗಿ ಬ್ಯಾಂಕ್ನ ಉನ್ನತ ಸಾಲದಾತರು ಗೋಫಸ್ಟ್ ವ್ಯವಹಾರ ಯೋಜನೆ ಮನಗಂಡು ಕಾರ್ಯಾಚರಣೆ ಆರಂಭಕ್ಕೆ ಬೆಂಬಲಿಸಲು ಸುಮಾರು 400 ಕೋಟಿ ರೂಪಾಯಿ ಒದಗಿಸಲು ಅನುಮೋದನೆ ನೀಡಿದ್ದಾರೆ. ಇದು ಗೋಫಸ್ಟ್ ವಿಮಾನಗಳ ಕಾರ್ಯಾಚರಣೆ ಪುನಾರಂಭಕ್ಕೆ ಅನುಕೂಲವಾಗಿದೆ ಎಂದು ಬ್ಯಾಂಕರ್ ಒಬ್ಬರು ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಗೋಫಸ್ಟ್ ಸಂಸ್ಥೆ ಕೇಳಿದ ಮೊತ್ತ
ಸಮಿತಿ ಅನುಮೋದಿಸಿದ ಒಟ್ಟು ಹಣ ಸುಮಾರು 400- 450 ಕೋಟಿ ರೂಪಾಯಿಗಳಷ್ಟಿದೆ. ಈ ವಾರದ ಆರಂಭದಲ್ಲಿ, ಬುಧವಾರ ನಡೆದ ಸಾಲದಾತರ ನೇತೃತ್ವದ ಸಭೆಯಲ್ಲಿ ಗೋ ಫಸ್ಟ್ ಸಂಸ್ಥೆ ಹೆಚ್ಚುವರಿ ಆರ್ಥಿಕ ಸಹಾಯಕ್ಕೆ ಕೋರಿತ್ತು. ವಿಮಾನಯಾನ ಸಂಸ್ಥೆಯು 4 ಶತಕೋಟಿ ಮತ್ತು 6 ಶತಕೋಟಿ ಭಾರತೀಯ ರೂಪಾಯಿಗಳ ($122 ಮಿಲಿಯನ್) ಹೆಚ್ಚುವರಿ ಹಣ ಕೇಳುತ್ತಿದೆ ಎಂದು ತಿಳಿದು ಬಂದಿದೆ. ಸಾಲದಾತರು ಮುಂದಿನ 48 ಗಂಟೆಗಳಲ್ಲಿ ಪ್ರಸ್ತಾಪಗಳನ್ನು ಮೌಲ್ಯಮಾಪನ ಮಾಡುವ ಸಾಧ್ಯತೆ ಇದೆ.
ಸದ್ಯ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಯು ತನ್ನ ವಿಮಾನಗಳನ್ನು ಜುಲೈ ತಿಂಗಳಲ್ಲಿ ಕಾರ್ಯಾಚರಣೆ ಪುನರ್ ಆರಂಭಕ್ಕೆ ಚಿಂತಿಸುತ್ತಿದೆ. 22 ವಿಮಾನಗಳೊಂದಿಗೆ 78 ದೈನಂದಿನ ವಿಮಾನಗಳನ್ನು ನಿರ್ವಹಿಸಲು ಸಂಸ್ಥೆ ಪ್ಲಾನ್ ಮಾಡಿಕೊಂಡಿದೆ. ಈ ಕಾರ್ಯಾಚರಣೆಗೆ ಅನುಮೋದಿತ ಹಣ ಸೇರಿದಂತೆ ಇನ್ನಿತರ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಡಾಯ್ಚ ಬ್ಯಾಂಕ್ಗಳು ಗೋ ಫಸ್ಟ್ ದಿವಾಳಿತನದ ಫೈಲಿಂಗ್ನಲ್ಲಿ ಒಟ್ಟು 65.21 ಶತಕೋಟಿ ರೂ.ಯ ಸಾಲಗಾರರರನ್ನು ಗುರುತಿಸಿ ಉಲ್ಲೇಖಿಸಿದೆ.
ಗೋಫ್ಟ್ ಆರ್ಥಿಕ ದಿವಾಳಿಯತ್ತ ಹೊರಟಿದೆ. ತೀವ್ರ ಸಂಕಷ್ಟ ಎದುರಿಸಿದ್ದು, ಸಂಸ್ಥೆ ವಿಮಾನಯಾನ ಬಹುತೇಕ ರದ್ದು ಎಂದು ಹೇಳಲಾಗಿತ್ತು. ಹಂತ ಹಂತವಾಗಿ ಕೆಲವು ವಿಮಾನಯಾನದ ರದ್ದತಿಯನ್ನು ವಿಸ್ತರಣೆ ಮಾಡಲಾಗಿತ್ತು. ಇದಾದ ಬಳಿಕ ಸಂಸ್ಥೆ ದಿವಾಳಿತನ ಬಗ್ಗೆ ಅರ್ಜಿ ಸಲ್ಲಿಸಿತ್ತು. ಹಣಕ್ಕೆ ಕೋರಿತ್ತು. ಅದಕ್ಕೀಗ ಅನುಮತಿ ಸಿಕ್ಕಿದ್ದು, ಸಂಸ್ಥೆ ಮರುಜೀವ ಬಂದಂತಿದೆ.
English summary
Go First: Lender has approved rs 400 crore in term funding for airlines request.
Story first published: Sunday, June 25, 2023, 16:07 [IST]