Friendship Day 2023: ತಪ್ಪೊಪ್ಪಿಗೆ, ಬೇಸರ, ಪಶ್ಚತ್ತಾಪಗಳಿಗೂ ಇಲ್ಲಿದೆ ಸಾಂತ್ವನ, ಮಾಹಿತಿ | International Friendship Day 2023: Know the importance of friendship

Features

oi-Madhusudhan KR

By ಸತೀಶ್‌ ಜಿ.ಕೆ

|

Google Oneindia Kannada News

ಮನುಷ್ಯ ಮೂಲತಃ ಸಂಘಜೀವಿಯಾದರೂ ಆಧುನೀಕರಣಗೊಂಡಂತೆ ಸಂಪರ್ಕ ಕ್ರಾಂತಿಯಿಂದ ಸಂಕುಚಿತಗೊಂಡ, ತನ್ನ ಜಗತ್ತಿನಂತೆಯೇ ಉದಾತ್ತ ಮೌಲ್ಯಗಳೂ ಮಿತಿಗೊಂಡವು. ಪ್ರೀತಿ, ಸ್ನೇಹ, ನಂಬುಗೆಯ ಜಾಗದಲ್ಲಿ ಸ್ವಾರ್ಥ, ದುರಾಸೆ, ದ್ವೇಷ, ಅಸಹನೆಗಳನ್ನು ಬಿತ್ತಿಬೆಳೆದು ತನ್ನ ಬದುಕನ್ನೂ ಬದುಕುವ ಜಗತ್ತನ್ನೂ ಸಂಕೀರ್ಣಗೊಳಿಸಿಕೊಂಡ. ತನ್ನ ವಿಲಕ್ಷಣ ನಿಲುವು-ನಡವಳಿಕೆಗಳಿಂದ ತನಗೇ ತಾನೊಬ್ಬ ನಿಗೂಢ ಜೀವಿಯಂತೆ ಬದುಕುತ್ತಿರುವ ಮನುಷ್ಯನನ್ನು ಸರಿಹೊತ್ತಿನಲ್ಲಿ ಪೊರೆಯಬೇಕಾದ್ದು ಅದೇ ಮನುಷ್ಯಪ್ರೀತಿ ಮತ್ತು ಗೆಳೆತನವೆಂಬ ನವಿರು ಭಾವಗಳು!

ಪರಸ್ಪರ ಅಪನಂಬಿಕೆಯಲ್ಲಿ ಅಪರಿಚಿತರಂತೆ ಅಸ್ಪೃಷ್ಯರಾಗಿ, ತಾವಷ್ಟೇ ಎಂಬಂತೆ ಬಾಳಹೊರಟಿರುವ ಜೀವಗಳಿಗೆ ತೋರಬೇಕಾದ ಸರಿದಾರಿ ಅದೇ. ಎದೆಗಳ ನಡುವಿನ ಕದವನು ತೆರೆದು ಹೃದಯ ಸಂವಾದಕ್ಕೆ ಮುಂದಾದರೆ ಎದುರಿನ ಸಂಕಟಕ್ಕೂ, ಸಂಕಷ್ಟಕ್ಕೂ ಮದ್ದು ಹುಡುಕಿಕೊಂಡಂತಾಗುತ್ತದೆ.

ಇದು ಒಂದು ಸಂತೈಸುವ ವೇದಿಕೆ

‘ಗೆಳೆತನದ ಸುವಿಶಾಲ ಆಲದಡಿ ಪಸರಿಪ ತಣ್ಣೆಳಲ ತಂಪಿನಲಿ ತಂಗಿರುವೆ ನಾನು”.. ಅಮೂಲ್ಯ ಸಂಬಂಧವೊಂದರ ಮಾಧರ‍್ಯವನ್ನು ಸಾರುವ ಚೆನ್ನವೀರ ಕಣವಿಯವರ ಸಾಲುಗಳಿವು. ಗೆಳೆತನವೆಂಬುದು ಎದೆಯೊಳಗೆ ಬೆಚ್ಚಗೆ ಬೆಳೆಯುವ ಕಾತರ, ಉತ್ಸಾಹ, ಲವಲವಿಕೆ, ನಿರೀಕ್ಷೆಗಳ ಹೂದೋಟ. ಮನಸ್ಸಿನ ಭಾರವಿಳಿಸಿ, ತೇವಗೊಳಿಸುವ ಕಾರುಣ್ಯಕೊಳ. ಅದು ಕನಲಿಕೆ, ನಿಟ್ಟುಸಿರುಗಳು ಹೊರಹೊಮ್ಮುವ ಭೂಮಿಕೆ. ಮಾತ್ರವಲ್ಲ ಒಳಧ್ವನಿಯನ್ನು ಬೆಂಬಲಿಸುವ, ಸಂತೈಸುವ ವೇದಿಕೆಯಾಗಿದೆ.

ಗೆಳೆತನದ ಮಹತ್ವ

ಸಮಾನ ಮನಸ್ಕರನ್ನು ತೆಕ್ಕೆಗೆ ಸೆಳೆಯುವ ಅಯಸ್ಕಾಂತೀಯ ತೀವ್ರತೆ ಅದಕ್ಕೆ.’ಸಮಾನಶೀಲ ವ್ಯಸನೇಷು ಸಖ್ಯಮ್’.. ಸಮಾನ ದುಖಿಃಗಳು ಹತ್ತಿರವಾಗುವುದು ಸಾಮಾನ್ಯ. ಗೆಳೆಯನದೊಂದು ಆಪ್ತನುಡಿಗೆ, ನೇವರಿಕೆಗೆ ಕಮರಿದ ಮನಸು ಚಿಗುರಿಕೊಳ್ಳುತ್ತದೆ ಹಾರುವ ಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿಕೊಂಡಂತೆ. ಅದು, ನೊಂದ ಮನಸ್ಸಿಗೆ ಜೀವನಪ್ರೀತಿಯನ್ನು ಹನಿಸುವ ಮುಂಗಾರು, ಅನಂತ ದಿಗಂತಯಾನದಲ್ಲಿ ದಣಿವರಿಯದೇ ಹಾರಿ ಗೂಡು ಸೇರಲು ಹಕ್ಕಿಯ ರೆಕ್ಕೆಗೆ ದಕ್ಕುವ ಬಲದ ಮೂಲ, ಬೇಸರಿಸದೆ ಮತ್ತೆಮತ್ತೆ ದಡತಟ್ಟುವ ಕಡಲಿನಲೆಯೇ ಸ್ನೇಹವಾಗಿದೆ.

ಗೆಳೆತನವೆಂಬುದು ಸರ್ವವ್ಯಾಪಿ, ಸರ್ವಾಂತರ್ಯಾಮಿ. ಅದು ನಿರ್ಗುಣ, ನಿರಾಕಾರ, ಎಳೆಯರಿಂದ ಹಿರಿಯರವರೆಗೆ ಎಲ್ಲವರ್ಗದ ಜನರಿಗೂ ಕಷ್ಟಕಾಲದಲ್ಲಿ ಕಣ್ಣೊರೆಸಲು ಒಂದು ಕರವಸ್ತಬೇಕು, ಒರಗಲು ಹೆಗಲು, ಮನಸಿನ ಗೋಳು ಕೇಳುವ ಕಿವಿ, ಮಿಡಿಯುವ ಮನಸುಗಳು ಇರಬೇಕು ಎಂಬಂತಹ ಬೇಡಿಕೆಗಳು ಕೈಗೂಡುವುದು ಗೆಳೆತನದ ಪರಿಧಿಯಲ್ಲಿಯೇ. ಆತ್ಮೀಯರೊಂದಿಗಿನ ಹರಟೆ, ತಮಾಷೆ ಒಡನಾಟಗಳಿಗೆ ಎಲ್ಲರ ದಿನಚರಿಯಲ್ಲೂ ಜಾಗವಿದೆ. ಆಪ್ತಸಂಬಂಧದಲ್ಲಿ ವಿನಿಮಯಗೊಳ್ಳುವ ಪ್ರೀತಿ, ಭಾವುಕತೆ, ನೋವು-ನಲಿವು, ಕನಸು, ನಿರ್ಧಾರಗಳಿಗೆಲ್ಲಾ ಅಲ್ಲೊಂದು ದಿಕ್ಸೂಚಿ ತೋರುತ್ತದೆ. ತಪ್ಪೊಪ್ಪಿಗೆ, ಬೇಸರ, ಪಶ್ಚತ್ತಾಪಗಳಿಗೂ ಸಾಂತ್ವಾನವಿದೆ. ಹಾಗೆಯೇ ಅಲ್ಲೊಂದು ನಿಲ್ದಾಣವಿದೆ.

ಗೆಳೆತನವೇ ಹಾಗೆ, ಅದೆಂದಿಗೂ ಬತ್ತದ ಒರತೆ. ಬಾಳ್ವೆಯ ಜಡತ್ವಕ್ಕೆ ಒದಗುವ ಸಾವಯವ ಸಾರ.. ‘ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲಿ..’ಅಂತ ಗುನುಗುತ್ತ ಆಪ್ತತೆಯ ಆವರಣದೊಳಗೆ ಭಾವುಕರಾಗದವರು ಅಪರೂಪವೇ.. ‘ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ..’ ಸಾಲುಗಳು ಕಾಲೇಜು ಹುಡುಗ-ಹುಡುಗಿಯರ ಆಟೋಗ್ರಾಫ್‌ನ ಪುಟವೊಂದನ್ನು ಅಲಂಕರಿಸಿರಲೇಬೇಕು ಅನ್ನೋದು ಅಘೋಷಿತ ನಿಯಮ. ಕಾಡುವ ಆ ಸಾಲುಗಳಲ್ಲಿ ಸತ್ಯವಿದೆ, ಆರ್ದ್ರತೆಯಿದೆ.

ಯಾವುದೇ ಜಾತಿ, ಬೇಧ ಭಾವವಿಲ್ಲ

ಏಕೆಂದರೆ, ಗೆಳೆತನ ಜಗತ್ತಿನ ಎಲ್ಲಾ ಜಾತಿ, ಧರ್ಮ, ಆಸ್ತಿ, ಅಂತಸ್ತು, ವಯಸ್ಸು, ರೂಪ, ಬಣ್ಣ, ಲಿಂಗ, ಭಾಷೆ, ದೇಶ ಕಾಲವನ್ನೂ ಮೀರಿದ ಭಾವ. ಅದು ಜೀವಬೆಸೆಯುವ ಬಂಧ. ಕೆಲವೆಡೆ ಒಡಹುಟ್ಟಿದವರ ಸಂಬಂಧಕ್ಕಿಂತ ಒಡಮೂಡಿದವರ ಬಾಂಧವ್ಯವೇ ಲೇಸು ಅನ್ನಿಸೋದಿದೆ. ಡಿವಿಜಿಯವರು ‘ಮಾನುಷಸಖನ ಕೋರುವುದು ಬಡಜೀವ.’ ಎಂದಂತೆ ಯಾರು ಕೈಬಿಟ್ಟರೂ ಗೆಳೆಯನೊಬ್ಬನಿದ್ದಾನೆ ಎಂಬ ನಂಬುಗೆಯೇ ಯುವ ಮನಸುಗಳ ಶಕ್ತಿ.

International Friendship Day 2023: Know the importance of friendship

ಕೃಷ್ಣ-ಕುಚೇಲರು, ಕರ್ಣ-ಧುರ್ಯೋಧನರ ಗೆಳೆತನದ್ದು ಅಂಥದ್ದೇ ನಿದರ್ಶನ. ಗೆಳೆಯನೆಂದರೆ, ಸದಾ ಪ್ರೀತಿ, ಸಹಕಾರ, ಓದಾರ್ಯ, ಆತ್ಮಗೌರವ, ಸಾಮರಸ್ಯಗಳನ್ನು ಸಾರುವ ತ್ಯಾಗಮಯಿ ಹೃದಯ. ತನ್ನನ್ನು ತಿದ್ದಿಕೊಳ್ಳತ್ತಾ, ತನ್ನವರನ್ನು ತಿದ್ದುತ್ತಾ ಸಾಗುವ ಹಕ್ಕು ದಕ್ಕುವುದು ಅಪ್ಪಟ ಗೆಳೆತನಕ್ಕಷ್ಟೇ. ಹೂ ಕೊಡುವ ಕೈ ಪರಿಮಳ ಸೂಸುವಂತೆ ಸ್ನೇಹದ ಮನಸು. ಆ ಬಾಂಧವ್ಯದ ಪರಿಯೇ ವಿಶಿಷ್ಟ.

ಸೋಲದೇ, ಸೋಲಿಸದೇನೇ ಒಬ್ಬರನ್ನೊಬ್ಬರು ಗೆಲ್ಲುವ ಪ್ರೀತಿಯದು, ಪರಸ್ಪರ ಬೆಳೆಯುವ ರೀತಿಯದು. ಬದುಕಿನ ಪ್ರಯಾಣದಲ್ಲಿ ತಾನು ಬೆಳೆಯುತ್ತ ಜೊತೆಗಾರನನ್ನೂ ಒಳಗೊಳ್ಳುತ್ತಾ ಬೆಳೆಸುತ್ತಾ ಸಾಗುವ ಸೊಬಗೇ ಚಂದ. ಅಳತೆಗೆ ನಿಲುಕದ, ಕಾಸಿಂದ ಕೊಳ್ಳಲಾಗದ ಮಧುಮಧುರ ಅನುಭೂತಿಯದು.

ಯುದ್ಧದಿಂದ ಗೆಲ್ಲಲಾಗದ್ದನ್ನು ಸ್ನೇಹಹಸ್ತ ಚಾಚಿ ಗೆದ್ದವರಿದ್ದಾರೆ. ದೇಶ-ಗಡಿ ವ್ಯಾಜ್ಯಗಳನ್ನೂ ನಂಬಿಕಸ್ತ ಗೆಳೆತನವೊಂದು ರಾಜತಾಂತ್ರಕವಾಗಿ ಗೆಲ್ಲಬಲ್ಲದು ಎಂಬುದಕ್ಕೆ ಅಸಂಖ್ಯ ನಿದರ್ಶಗಳು ಚರಿತ್ರೆಯಲ್ಲಿ ಕಾಣಸಿಗುತ್ತವೆ. ಇಥಿಯೋಪಿಯಾದ ಶಾಂತಿಧೂತ ‘ಅಬಿ ಅಹಮದ್’ರಂತವರು ಇತ್ತೀಚಿನ ಭರವಸೆಯಾಗಿ ಉಳಿದಿದ್ದಾರೆ. ಜಾತಿ-ಧರ್ಮ, ಅಸಹನೆ, ಆರ್ಥಿಕತೆ, ಅಹಂಕಾರ, ಭಯೋತ್ಪಾದನೆ, ಬೇಲಿ-ಗಡಿಗಳ ಗಲಾಟೆಯಲ್ಲಿ ಜಗತ್ತು ತಲ್ಲಣಗೊಳ್ಳುತ್ತಿರುವ ಸರಿಹೊತ್ತಿನಲ್ಲಿ ವೈಯಕ್ತಿಕ ನೆಲೆಯಲ್ಲೂ, ದೇಶದೇಶಗಳ ನಡುವೆಯೂ ಸ್ನೇಹವೆಂಬುದು ಪರಸ್ಪರ ಬೆಸೆಯಲಿ, ಚಿಕಿತ್ಸಕವಾಗಿ ಒಲಿಯಲಿ.

ಅದೇ ಆಶಯದಲ್ಲಿ ವಿಶ್ವಸಂಸ್ಥೆಯು ಜುಲೈ 30ರಂದು ವರ್ಷವೂ ‘ವಿಶ್ವ ಗೆಳೆತನ ದಿನ’ವನ್ನಾಗಿ ಆಚರಿಸುತ್ತದೆ. ಗೆಳೆತನದ ಘಮಲು ಸರ್ವರನ್ನೂ ಮುತ್ತಲಿ. ಕಾಲದೇಶ ಮೀರಿನಿಲ್ಲುವ ವಿಶ್ವಪ್ರಜ್ಞೆ ಎಲ್ಲರೆದೆಗಳಲ್ಲಿ ಸದಾ ಹಸಿರಾಗಿರಲಿ, ಹಸಿಹಸಿಯಾಗಿಯೇ ಇರಲಿ ಎಂಬುದು ನಮ್ಮ ಹಾರೈಕೆಯಾಗಿದೆ.

English summary

Friendship Day 2023: Know the importance of friendship, here see details,

Story first published: Sunday, July 30, 2023, 18:31 [IST]

Source link