Bengaluru
oi-Naveen Kumar N
ಒಂದು ಕಡೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದ್ದರೆ ಇನ್ನೊಂದು ಕಡೆ ವಿದ್ಯುತ್ ಬೆಲೆ ಹೆಚ್ಚಳವಾಗಿದೆ. 500 ಬರುತ್ತಿದ್ದ ವಿದ್ಯುತ್ ಬಿಲ್ 1000 ರೂಪಾಯಿ ಬಂದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್ ದರ ಏರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೂನ್ 22 ರಂದು ಒಂದು ದಿನ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಏಪ್ರಿಲ್‌ನಿಂದ ದರ ಏರಿಕೆ ಜಾರಿಗೆ ಬಂದಿದ್ದು, ಎರಡು ತಿಂಗಳ ಬಿಲ್ ಈ ತಿಂಗಳು ನೀಡಿರುವುದರಿಂದ ವಿದ್ಯುತ್ ಶುಲ್ಕ ಹೆಚ್ಚಳವಾಗಿದೆ. ಮುಂದಿನ ತಿಂಗಳು ಒಂದೇ ಬಿಲ್ ಬರಲಿದ್ದು, ಯಾವುದೇ ಗೊಂದಲ ಇರುವುದಿಲ್ಲ ಎಂದು ಹೇಳಿದರು.
ಇನ್ನು ಜೂನ್ 22ರಂದು ಬಂದ್ ಮಾಡಲು ಹೊರಟಿರುವ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೊತೆ ಮಾತನಾಡಿ ಮನವೊಲಿಸುವುದಾಗಿ ತಿಳಿಸಿದರು. ಏಷ್ಯಾದ ಎರಡನೇ ದೊಡ್ಡ ಕೈಗಾರಿಕಾ ಪ್ರದೇಶ ಎನಿಸಿಕೊಂಡಿರು ಪೀಣ್ಯ ಪ್ರದೇಶದ ಕೈಗಾರಿಕೆಗಳು ಕೂಡ ವಿದ್ಯುತ್ ದರ ಇಳಿಕೆ ಮಾಡದಿದ್ದರೆ ಮುಷ್ಕರ ಹೂಡುವ ಬೆದರಿಕೆ ಹಾಕಿವೆ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಆರಂಭ
ವಿದ್ಯುತ್ ದರ ಹೆಚ್ಚಳದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸರ್ಕಾರ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಬಳಕೆಯ ಲಾಭ ಪಡೆಯಲು ಅರ್ಜಿ ಸ್ವೀಕಾರ ಮಾಡುತ್ತಿದೆ. ಭಾನುವಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯ ವೇಳೆಗೆ 55000 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಎಸ್ಕಾಂ ಮಾಹಿತಿ ನೀಡಿದೆ.
ಮೊದಲ ದಿನವೇ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಎದುರಾಯಿತು, 11 ಗಂಟೆಯಿಂದ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರೂ, ಮಧ್ಯಾಹ್ನದ ನಂತರವೂ ಸಮಸ್ಯೆ ಸರಿಹೋಗಿರಲಿಲ್ಲ, ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಸಿಕ್ಕ ಕೆಲವೇ ಗಂಟೆಗಳಲ್ಲಿ ರಾಜ್ಯಾದ್ಯಂತ 55 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ.
ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ
ಇನ್ನು ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡುವ ಯೋಜನೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಅಕ್ಕಿ ಕೊಡಸಲಿ, ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಯಾಕೆ ಅಡ್ಡಿಪಡಿಸುತ್ತಿದೆ ಎಂದು ಪ್ರಶ್ನೆ ಮಾಡಿದರು.
ಈಗಾಗಲೇ ಅಕ್ಕಿ ಖರೀದಿ ಮಾಡಲು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಜೊತೆ ಮಾತುಕತೆ ನಡೆಯುತ್ತಿದೆ. ಛತ್ತಿಸ್‌ಗಢದವರು 1.5 ಲಕ್ಷ ಮೆಟ್ರಿಕ್ ಅಕ್ಕಿ ಪೂರೈಕೆ ಮಾಡಲು ಒಪ್ಪಿದ್ದಾರೆ, ಆದರೆ ಅಲ್ಲಿನ ದರ, ಸಾಗಾಣಿಕೆ ವೆಚ್ಚ ಹೆಚ್ಚಾಗಿದೆ. ರಾಯಚೂರಿನ ಸೋನ ಮಸೂರಿ ಅಕ್ಕಿ ದರವೂ ಹೆಚ್ಚಿದೆ ಎಂದು ಹೇಳಿದರು.
English summary
CM Siddaramaiah clarifies why people recieved almost double Electricity bill from thier last month, he says from Next month No confusion in Electricity Bill.