Karnataka
oi-Reshma P
ಬೆಂಗಳೂರು, ಜೂನ್ 22: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ಲವೇ ಎಂಬ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸಿದ್ದು, ಈ ಬಗ್ಗೆ ನಮಗೆ ಜ್ಞಾನ ಇರಲಿಲ್ಲ. ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ, ಅಷ್ಟು ಸಾಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿರೋಧ ಪಕ್ಷಗಳು ಬಹಳ ಟೀಕೆ ಮಾಡುತ್ತಿವೆ, ಮಾಡಲಿ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ನಾವು ಪುಗಸಟ್ಟೆ ಅಕ್ಕಿ ಕೇಳುತ್ತಿಲ್ಲ. ಅಕ್ಕಿ ಪೂರೈಕೆಗೆ ನಮ್ಮ ಸರ್ಕಾರ ಬೇರೆ ರಾಜ್ಯಗಳ ಜತೆ ಸಂಪರ್ಕದಲ್ಲಿದೆ.
ಶೋಭಕ್ಕ ಅವರು, ಈ ಯೋಜನೆ ಘೋಷಣೆ ಮಾಡುವ ಮುನ್ನ ಕಾಂಗ್ರೆಸ್ ಮುಖಂಡರಿಗೆ ಮಿದುಳು ಇರಲಿಲ್ಲವೇ ಎಂದು ಕೇಳಿದ್ದಾರೆ. ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಾಗ ಅವರ ತಲೆಯಲ್ಲಿ ಮಿದುಳು ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷ ಅವರ ಪಕ್ಷಕ್ಕಿಂತ ವಿಭಿನ್ನವಾಗಿದೆ. ಅವರು ನಾಲ್ಕು ವರ್ಷ ಆಡಳಿತ ಮಾಡಿದರೂ ಅವರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲಿಲ್ಲ. 1 ಲಕ್ಷವರೆಗಿನ ರೈತರ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು ಆದರೆ ಮಾಡಲಿಲ್ಲ. ನಾವು ಘೋ,ಣೆ ಮಾಡಿರುವ ಯೋಜನೆ ಜಾರಿಗೆ ಮುಂದಾಗಿದ್ದೇವೆ. ನಮಗೆ ಬಡವರ ಬಗ್ಗೆ ಅಷ್ಟಾದರೂ ಕಾಳಜಿ ಇದೆ. ಅವರು ತಾಳ್ಮೆಯಿಂದ ಇದ್ದರೆ ಉತ್ತಮ.
ಕೇಂದ್ರ ಸರ್ಕಾರ ಸಹಕಾರ ನೀಡದಿದ್ದರೆ ಮುಂದಿನ ಆಯ್ಕೆ ಏನು ಎಂದು ಕೇಳಿದಾಗ, ‘ಮುಖ್ಯಮಂತ್ರಿಗಳು ಹಾಗೂ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಸ್ವಲ್ಪ ತಡವಾದರೂ ನಾವು ಈ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ. ಆರಂಭದಲ್ಲಿ ಎಫ್ ಸಿಐ ಅಕ್ಕಿ ನೀಡುವುದಾಗಿ ತಿಳಿಸಿತ್ತು. ಆದರೆ ನಂತರ ತಮ್ಮ ನೀತಿ ಬದಲಿಸಿರುವುದಾಗಿ ತಿಳಿಸಿದೆ. ಅವರಿಗೆ ರಾಜಕಾರಣವೇ ಮುಖ್ಯವಾಗಿದೆ’ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಪ್ರತಿಕ್ರಿಯೆ ನೀಡುತ್ತಾರೆ. ಸಿಎಂ ಹಾಗೂ ಸಚಿವರು ಯಾರನ್ನು ಸಂಪರ್ಕ ಮಾಡಿದ್ದಾರೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ. ನಾನು ಹೋಗುವ ಸಮಯ ಬಂದಾಗ ಹೋಗುತ್ತೇನೆ ಎಂದು ತಿಳಿಸಿದರು.
ಮೊದಲ ಬಾರಿಗೆ ಪ್ರಧಾನಮಂತ್ರಿಗಳು ವಿದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಗ್ಗೆ ಮಾತನಾಡಿ, ಬಹಳ ಸಂತೋಷ, ಈಗಲಾದರೂ ಪ್ರಧಾನಮಂತ್ರಿಗಳು ನಮ್ಮ ದೇಶದ ಮಾಧ್ಯಮಗಳ ಬಳಿ ಅಲ್ಲದಿದ್ದರೂ ವಿದೇಶಿ ಮಾಧ್ಯಮಗಳ ಬಳಿ ಮಾತನಾಡಿದ್ದಾರೆ. ನೀವು ಖುಷಿಪಡಿ ಎಂದರು.
English summary
DCM DK Shivakumar slams bjp government over anna bhagya rice issue.