Karnataka
oi-Reshma P
ಬೆಂಗಳೂರು, ಜುಲೈ 29: ಬಹುಮತಗಳಿಂದ ಸರ್ಕಾರ ರಚಿಸಿರು ಸಿದ್ದರಾಮಯ್ಯ ಸರ್ಕಾರಕ್ಕೆ ಸ್ವಪಕ್ಷದ ನಾಯಕರಿಂದಲೇ ಅಸಮಾಧಾನಗಳು ಬುಗಿಲೆದ್ದಿದ್ದು, ಶಾಸಕರನ್ನು ಸಮಾಧಾನಪಡಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ, ಶುಕ್ರವಾರ ಒಂದೇ ದಿನ ಬರೋಬ್ಬರಿ 146 ತಹಶೀಲ್ದಾರ್‌ಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ತಿಂಗಳು ಕಳೆದಿದೆಯಷ್ಟೇ, ಹಲವು ಆಂತರಿಕ ಅಸಮಾಧಾನಗಳು ಬುಗಿಲೆದ್ದಿವೆ. ಈ ಹಿನ್ನೆಲೆ ಶಾಸಕರ ಅಸಮಾಧಾನ ತಣಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಗುರುವಾರ ನಡೆದ ಶಾಸಕಾಂಗ ಸಭೆಯಲ್ಲಿ ಹಲವು ಶಾಸಕರು ಅಸಮಾಧಾನ ಹೊರಹಾಕಿದ್ದು, ಇದೀಗ ಶಾಸಕರು ಬಯಸಿದ ತಹಶೀಲ್ದಾರ್‌ಗಳನ್ನೇ ಪೋಸ್ಟಿಂಗ್ ಮಾಡಲಾಗಿದೆ.

ತಹಶೀಲ್ದಾರ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಒಂದೇ ದಿನ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಅನುಕ್ರಮವಾಗಿ 84, 46 ಮತ್ತು 16 ತಹಶೀಲ್ದಾರ್‌ಗಳ ವರ್ಗಾವಣೆಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ. ಈ ಪೈಕಿ 12 ಮಂದಿ ತಹಶೀಲ್ದಾರ್‌ಗಳನ್ನು ಈಗ ಇರುವ ಸ್ಥಳದಲ್ಲೇ ಮುಂದುವರಿಸಲಾಗಿದೆ. ಅದನ್ನು ವರ್ಗಾವಣೆ ಆದೇಶದಲ್ಲೇ ಪ್ರಕಟಿಸ ಲಾಗಿದೆ. ಸರ್ಕಾರ ಮೂರು ಕಂತುಗಳಲ್ಲಿಒಟ್ಟು 146 ಗ್ರೇಡ್ -1 ಮತ್ತು ಗ್ರೇಡ್ -2 ತಹಶೀಲ್ದಾರ್‌ಗಳ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ಬಳಿಕ ಆದೇಶಗಳು ಹೊರಬಿದ್ದಿವೆ.
ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯ ಚಟುವಟಿಕೆಗಳ ಕುರಿತು ಶಾಸಕರು ತಹಶೀಲ್ದಾರ್‌ಗಳ ವರ್ಗಾವಣೆ, ಪೋಸ್ಟಿಂಗ್ ಸಂಬಂಧದ ಕುರಿತು ತಮ್ಮ ಶಿಫಾರಸು ಹಾಗೂ ಕೋರಿಕೆಯನ್ನ ತಿಳಿಸಿದ್ದರು. ಆದರೆ, ಶಾಸಕರು ಬಯಸಿದಂತೆ ಮನ್ನಣೆ ಸಿಗದಿರುವುದು ಶಾಸಕರಲ್ಲಿ ತೀವ್ರ ಅತೃಪ್ತಿಗೆ ಕಾರಣವಾಗಿತ್ತು. ಈ ಸಂಬಂಧ 30ಕ್ಕೂ ಹೆಚ್ಚು ಶಾಸಕರ ದೂರು ಬಹಿರಂಗವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ.
ಜೂನ್ 15ರವರೆಗಿನ ಸಾರ್ವತ್ರಿಕ ವರ್ಗಾವಣೆ ಅವಧಿ ನಂತರದ ಜುಲೈ 30ರವರೆಗಿನ ಎರಡು ವಾರಗಳ ವಿಸ್ತರಣಾ ಅವಧಿ ಹಾಗೂ ಜುಲೈ 3ರವರೆಗಿನ 2ನೇ ವಿಸ್ತರಣಾ ಅವಧಿಯಲ್ಲೂ ತಹಶೀಲ್ದಾರ್‌ಗಳ ವರ್ಗಾವಣೆ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಈಗ ಒಟ್ಟಿಗೇ 146 ತಹಶೀಲ್ದಾರ್‌ಗಳ ಅಕಾಲಿಕ ವರ್ಗಾವಣೆಯ ಮೂಲಕ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೊಟ್ಟ ಭರವಸೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.
English summary
govt orders to transfer of 146 tahsildar after congress legislative party meeting,