India
oi-Malathesha M

ಬಡತನ ಹಾಗೂ ಕಷ್ಟಗಳನ್ನ ಎದುರಿಸಿ ಜಗತ್ತಿಗೇ ಮಾದರಿ ದೇಶವಾಗಿ ಬೆಳೆದಿದ್ದು ಭಾರತ. ಅದರಲ್ಲೂ ಭಾರತೀಯರ ರಕ್ತದಲ್ಲೇ ಈ ಗುಣವು ಬಂದುಬಿಟ್ಟಿದೆ. ಇನ್ನು ನಮ್ಮ ಹೆಮ್ಮೆಯ ‘ಇಸ್ರೋ’ ಸಂಸ್ಥೆ ಬಗ್ಗೆ ಕೇಳಬೇಕಾ? ತನಗೆ ಎದುರಾದ ಸಂಕಷ್ಟವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಆಕಾಶಕ್ಕೆ ಏರಿದೆ ಇಸ್ರೋ. ಹಾಗಾದರೆ ಇಸ್ರೋ ಮುಳ್ಳಿನ ಹಾದಿ ಹೇಗಿತ್ತು? ತನ್ನ ಮೊದಲ ಉಪಗ್ರಹ ಉಡಾವಣೆಗೆ ಎಷ್ಟೆಲ್ಲಾ ಕಷ್ಟಪಟ್ಟಿತ್ತು? ತಿಳಿಯೋಣ ಬನ್ನಿ.
‘ಇಸ್ರೋ’ ಎಂದರೆ ಭಾರತಕ್ಕೆ ಭಾರತೀಯರಿಗೆ ಮಾತ್ರವಲ್ಲ, ಇಡೀ ಮನುಷ್ಯ ಕುಲಕೋಟಿಗೆ ಹಾಗೂ ಜಗತ್ತಿಗೇ ಹೆಮ್ಮೆ. ಭಾರಿ ಕಷ್ಟದ್ದಲ್ಲಿದ್ದ ಇಸ್ರೋ ಈ ಹಂತಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಅದರಲ್ಲೂ ಒಂದು ಕಾಲದಲ್ಲಿ ಸೈಕಲ್‌ನ ಮೇಲೆ ರಾಕೆಟ್ ಹೊತ್ತು ತಂದಿದ್ದ ಇಸ್ರೋ ಮುಂದೆ ಜಗತ್ತಿಗೇ ಬಾಸ್ ಆಗುತ್ತಾ? ಎಂಬ ಪ್ರಶ್ನೆ ಕೂಡ ಯಾರ ತಲೆಯಲ್ಲೂ ಸುಳಿದಿರಲಿಲ್ಲ. ಆದರೆ ಇದೀಗ ಎಲ್ಲವನ್ನೂ ಮೀರಿ ಸಾಧನೆ ಮಾಡಿದೆ ನಮ್ಮ ಇಸ್ರೋ. ಹಾಗಂತಾ ಇದು ಒಂದೆರಡು ದಿನದಲ್ಲಿ ಮಾಡಿರುವ ಸಾಧನೆ ಅಲ್ಲ, ಈ ಸಾಧನೆ ಹಿಂದೆ ಬರೋಬ್ಬರಿ ಅರ್ಧ ಶತಮಾನದ ಒದ್ದಾಟವಿದೆ.

ಇಸ್ರೋ ವಿಜ್ಞಾನಿಗಳು ಒದ್ದಾಡಿದ್ದರು!
ಅದು 1960ರ ಸಮಯ, ಕೇರಳದ ತಿರುವನಂತಪುರ ಸಮೀಪದ ಕುಗ್ರಾಮದಲ್ಲಿ ಭಾರತದ ಅತ್ಯುತ್ಸಾಹಿ ಯುವ ವಿಜ್ಞಾನಿಗಳಿಗೆ ಖುಷಿಯೋ ಖುಷಿ. ಏಕೆಂದರೆ ಇಸ್ರೋ ಮೊದಲ ಹೆಜ್ಜೆ ಇಡುವಾಗ ಮಹತ್ವದ ಯೋಜನೆಗೆ ಅವರೆಲ್ಲಾ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ದೇಶಕ್ಕಾಗಿ ಬಂದಿದ್ದರು. ಕೇರಳದ ತಿರುವನಂತಪುರ ಸಮೀಪದ ಹಳ್ಳಿಯಲ್ಲಿ ದನದ ಕೊಟ್ಟಿಗೆಗಳಲ್ಲಿ ಪ್ರಯೋಗಾಲಯ ಮತ್ತು ರಾಕೆಟ್ ತಯಾರಿಕೆ ಘಟಕಕ್ಕೆ ಒಪ್ಪಿಗೆ ಸಿಕ್ಕಿತು. ಇದು ಆರಂಭ ಮಾತ್ರ, ಅಲ್ಲಿಂದಲೇ ಶುರುವಾಗಿದ್ದು ನೋಡಿ ಭಾರತದ ಬಾಹ್ಯಾಕಾಶ ಸಾಧನೆಯ ಹಾದಿ. ಇದಾದ ಬಳಿಕ ಎದುರಾಗಿದ್ದೇ ನಿಜವಾದ ಸಂಕಷ್ಟ.
ಮೊದಲ ರಾಕೆಟ್ ಉಡಾವಣೆಗೆ ಸಿದ್ಧವಾಗಿತ್ತು!
ಆಗಿನ ಕಾಲಕ್ಕೆ ಭಾರತದಲ್ಲಿ ತಂತ್ರಜ್ಞಾನ ತೀವ್ರವಾಗಿ ಹಿಂದುಳಿದಿತ್ತು. ಹೀಗಾಗಿಯೇ ಸೂಕ್ತ ವಾಹನ ವ್ಯವಸ್ಥೆ ಕೂಡ ಇರಲಿಲ್ಲ. ಇದೇ ಕಾರಣಕ್ಕೆ ರಾಕೆಟ್ ಬಿಡಿಭಾಗ ಮತ್ತು ಪೆಲೋಡ್ ಅನ್ನ ಎತ್ತಿನಗಾಡಿ ಅಥವಾ ಸೈಕಲ್ ಮೇಲೆ ಉಡಾವಣಾ ಜಾಗಕ್ಕೆ ಕೊಂಡೊಯ್ಯಲಾಗುತ್ತಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆ ಭಾರತ ಪ್ರಥಮ ರಾಕೆಟ್ ಉಡಾವಣೆಗಾಗಿ ವೇದಿಕೆ ಸಿದ್ಧಪಡಿಸಿತು. 6 ತಿಂಗಳ ನಿರಂತರ ಪರಿಶ್ರಮದ ನಂತರ, ಕೊನೆಗೂ 1963ರ ನವೆಂಬರ್ 21ಕ್ಕೆ ಭಾರತ ಪ್ರಥಮ ರಾಕೆಟ್ ಉಡಾವಣೆಗೆ ಸಜ್ಜಾಯಿತು. ಆದರೆ ಮೊದಲ ಬಾಹ್ಯಾಕಾಶ ನೌಕೆ ಉಡಾಯಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಸಂಕಷ್ಟಗಳ ಮೇಲೆ ಸಂಕಷ್ಟ!
ಹೌದು, ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಯನ್ನು ಚಿನ್ನದ ಅಕ್ಷರಗಳಲ್ಲಿ ಕೆತ್ತಿದ ದಿನ ಅದು. ಆ ದಿನ ಭಾರತದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಹಲವು ಗಣ್ಯರು ಸ್ಥಳದಲ್ಲಿ ಹಾಜರಿದ್ದರು. ದೇಶದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ.ಹೋಮಿ ಜಹಾಂಗೀರ್ ಬಾಬಾ ಕೇರಳದ ಗವರ್ನರ್ ಮತ್ತು ಜಿಲ್ಲಾಧಿಕಾರಿ ಸೇರಿದಂತೆ ಹಲವರು ಸ್ಥಳದಲ್ಲಿದ್ದರು. ಆದ್ರೆ ಅದೇ ಸಂದರ್ಭದಲ್ಲಿ ಉಡಾವಣೆಗೆ ಸಂಕಷ್ಟ ಎದುರಾಗಿತ್ತು. ಇನ್ನೇನು ರಾಕೆಟ್ ಉಡಾವಣೆ ಮಾಡಬೇಕು ಅನ್ನುವಷ್ಟರಲ್ಲೇ ಬಲವಾದ ಗಾಳಿ ಬೀಸಲಾರಭಿಸಿತ್ತು! ಮುಂದೆ ನಡೆದಿದ್ದೇ ದೊಡ್ಡ ಪವಾಡ ಎನ್ನಬಹುದು.
ಅಂತೂ ಹಾರೇ ಬಿಟ್ಟಿತು ಭಾರತದ ರಾಕೆಟ್!
ಗಾಳಿ ಮಾತ್ರವಲ್ಲ ಲಾಂಚರ್ ಮೇಲೆ ರಾಕೆಟ್ ಏರಿಸಿ ನಿಲ್ಲಿಸುವಾಗಲೇ ಹೈಡ್ರಾಲಿಕ್ ಕ್ರೇನ್‌ನಲ್ಲಿ ಸೋರಿಕೆಯೂ ಶುರುವಾಯಿತು. ಆಗ ವಿಜ್ಞಾನಿಗಳೇ ಓಡಿ ಹೋಗಿ ಸರಿಯಾಗಿ ರಾಕೆಟ್ ನಿಲ್ಲಿಸಿ ಬಂದರು. ಸರಿ ಎಲ್ಲಾ ಸರಿಹೋಯಿತು ಅಂತಾ, ಉಡಾವಣೆ ಮಾಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿ ರಿಮೋಟ್ ಕೈಕೊಟ್ಟಿತ್ತು. ಕೊನೆಗೆ ಅದನ್ನೂ ಸರಿಮಾಡಿ ಇನ್ನೊಮ್ಮೆ ಉಡಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಮುಂದೆ ಆಗಿದ್ದೇನು ಗೊತ್ತಾ? ಮುಂದೆ ಓದಿ.
ಕೊನೆಗೂ ಆಕಾಶ ತಲುಪಿದ ರಾಕೆಟ್
ಹೀಗೆ ಎಲ್ಲಾ ಕಷ್ಟಗಳನ್ನೂ ಎದರಿಸಿದ ಬಳಿಕ ಆ ಕ್ಷಣ ಬಂದೇಬಿಟ್ಟಿತ್ತು. ಅಂತೂ ಸೈರನ್ ಸದ್ದು ಮಾಡಿ, ರಾಕೆಟ್ ಉಡಾವಣೆಗೆ ಮುನ್ನುಡಿ ಬರೆದಿತ್ತು. ಆಗ ವಿಜ್ಞಾನಿಗಳೆಲ್ಲಾ ಉಸಿರು ಬಿಗಿಹಿಡಿದು ನಿಂತರು, ಇಸ್ರೋ ಮೊದಲ ಹೆಜ್ಜೆಯ ಸಾಧನೆಗೆ ಅವರೆಲ್ಲಾ ಸಾಕ್ಷಿಯಾಗಿದ್ದರು. 1963ರ ನವೆಂಬರ್ 21 ರಂದು ಸಂಜೆ 6.25ಕ್ಕೆ ಭಾರತದ ಮೊಟ್ಟಮೊದಲ ರಾಕೆಟ್ ಆಕಾಶ ನೋಡುತ್ತಾ ಹಾರಿ ಹೋಯಿತು. ಬಾನಿನಲ್ಲಿ ಸೋಡಿಯಂ ಅವಿ ಮೋಡಗಳು ಕಂಗೊಳಿಸಿ, ಭಾರತ ಆ ಮೋಡಗಳ ಮೇಲೆ ಹೊಸ ಇತಿಹಾಸ ಬರೆದಿತ್ತು.
ಒಟ್ನಲ್ಲಿ ಶ್ರಮಕ್ಕೆ ಎಂದೆಂದಿಗೂ ಫಲವಿದೆ, ಫಲಿತಾಂಶವಿದೆ ಎಂಬುದಕ್ಕೆ ಇಸ್ರೋ ಸಾಧನೆ ಸಾಕ್ಷಿಯಾಗಿದೆ. ಜಗತ್ತಿನ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಗಳು ಕೂಡ ಭಾರತದ ಜೊತೆಯಲ್ಲಿ ಕೈಜೋಡಿಸುತ್ತಿವೆ. ಇಸ್ರೋ ಬಗ್ಗೆ ಹೆಮ್ಮೆ ಪಡುತ್ತಿವೆ. ಹಿಂದೆ ಭಾರತದ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ & ಮಾಹಿತಿ ಹಂಚಿಕೊಳ್ಳಲು ಅಮೆರಿಕ ಹಿಂದೇಟು ಹಾಕುತ್ತಿತ್ತು. ನಾಸಾ ಸಂಸ್ಥೆ ಭಾರತದ ಇಸ್ರೋ ಜೊತೆ ಅಷ್ಟು ಒಡನಾಟವು ಇರಲಿಲ್ಲ. ಯಾವಾಗ ಭಾರತದ ಇಸ್ರೋ ಮಂಗಳ ಗ್ರಹಕ್ಕೆ ಉಪಗ್ರಹ ಉಡಾಯಿಸಿ, ಮಂಗಳನ ಕಕ್ಷೆಯಲ್ಲಿ ಯಶಸ್ವಿಯಾಗಿ ಅದನ್ನ ಸುತ್ತು ಹಾಕುವಂತೆ ಮಾಡಿತ್ತೋ ಅಂದಿನಿಂದ ಪರಿಸ್ಥಿತಿ ಬದಲಾಗಿತ್ತು. ಈಗ ಚಂದ್ರಯಾನ ಮೂಲಕ ಮತ್ತೆ ಜಗತ್ತಿನ ಗಮನ ಸೆಳೆದಿದೆ ಭಾರತೀಯರ ಹೆಮ್ಮೆಯ ಇಸ್ರೋ.
English summary
Discover how ISRO started their first mission in Space.