Karnataka
oi-Reshma P

ಬೆಂಗಳೂರು, ಜೂನ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅನಾರೋಗ್ಯದ ಹಿನ್ನಲೆ ಕಳೆದ ರಾತ್ರಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ರಾತ್ರಿ 11:30ರ ವೇಳೆಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದರಿಂದಾಗಿ ಬುಧವಾರ ಬೆಳಗ್ಗೆ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸದ ಸಮಯದಲ್ಲಿ ಬದಲಾವಣೆಯಾಗಿದೆ. ಬೆಳಗ್ಗೆ 9:50ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿದ್ದ ಅವರು ಸ್ವಲ್ಪ ತಡವಾಗಿ ದೆಹಲಿಗೆ ತೆರಳಲಿದ್ದಾರೆ.

ಬೆಳಗ್ಗೆ 9:50ಕ್ಕೆ ಬದಲಿಗೆ ಬೆಳಗ್ಗೆ 11:30ಕ್ಕೆ ಹೆಚ್‍ಎಎಲ್‍ನ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಣಿಪಾಲ್ ಆಸ್ಪತ್ರೆ ಗೆ ಭೇಟಿ ನೀಡಿ ಪತ್ನಿ ಆರೋಗ್ಯ ವಿಚಾರಿಸಿ ದೆಹಲಿಗೆ ತೆರಳಿದ್ದಾರೆ. ಮಗ ಯತೀಂದ್ರ ಜೊತೆ ಪತ್ನಿ ಆರೋಗ್ಯ ಬಗ್ಗೆ ಚರ್ಚೆ ನಡೆಸಿ ದೆಹಲಿಗೆ ಸಿದ್ದರಾಮಯ್ಯ ತೆರಳಿದ್ದಾರೆ.
ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರದ ಸಚಿವರ ಸಭೆ ಕರೆದಿದ್ದಾರೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಐದು ಗ್ಯಾರಂಟಿ ವಿಚಾರಗಳಲ್ಲಿ ಹಲವು ಗೊಂದಲಗಳಿದ್ದು, ಅವುಗಳನ್ನ ಆದಷ್ಟು ಬೇಗ ಸರಿಪಡಿಸಲು ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಜೊತೆಗೆ ಸಚಿವರ ಸಭೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆಹಾರ ಖಾತೆ ಸಚಿವರು ಸೇರಿದಂತೆ ಹಲವು ಕೇಂದ್ರ ನಾಯಕರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
English summary
cm siddaramaiah wife parvathi siddaramaiah hospitalized in bengaluru