Karnataka
oi-Ravindra Gangal
ಬೆಂಗಳೂರು, ಜೂನ್ 27: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿಯಲ್ಲಿ ಕಲ್ಲೋಲಗಳೇ ಸೃಷ್ಟಿಯಾಗುತ್ತಿದೆ. ಬಿಜೆಪಿ ನಾಯಕರ ನಡುವೆಯೇ ಅಸಮಾಧಾನದ ಬೆಂಕಿ ಹೊತ್ತಿ ಉರಿಯುತ್ತಿದೆ. ತಮ್ಮದೇ ಪಕ್ಷವನ್ನು ಟೀಕಿಸಿ ಕೆಲಸ ನಾಯಕರು ಮಾತನಾಡುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರತಿಷ್ಠಿತ ಲಿಂಗಾಯತ ನಾಯಕರ ನಡುವೆ ಕದನ ತಾರಕಕ್ಕೇರಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಾಗ್ದಾಳಿ ನಡೆಸಿದ್ದಾರೆ. ಇದು ಕಾಂಗ್ರೆಸ್ ಟೀಕೆಗೆ ಗುರಿಯಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಿಂದೂ ಹುಲಿ ಎನ್ನುವವರು ಟೊಪ್ಪಿ ಹಾಕಿ ನಮಾಜ್ ಮಾಡಿದ್ದೇಕೆ ನಿರಾಣಿಯವರ ಈ ಮಾತಿಗೆ ಉತ್ತರವಿದೆಯೇ ಬಸನಗೌಡ ಪಾಟೀಲ್ ಯತ್ನಾಳರೇ?’ ಎಂದು ಪ್ರಶ್ನಿಸಿದೆ.
‘ಬಿಜೆಪಿಯಲ್ಲಿ ಈಗ ಯಾರು ಯಾರ ದ್ವೇಷಿಗಳು ಎನ್ನುವುದು ಬಿಜೆಪಿಗರಿಗೇ ತಿಳಿದಂತಿಲ್ಲ. ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಪಕ್ಷದೊಳಗಿನ ತಮ್ಮ ವಿರೋಧಿಗಳನ್ನು ಹುಡುಕುತ್ತಿದ್ದಾರೆ ಬಿಜೆಪಿ ನಾಯಕರು’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಯತ್ನಾಳ್ ಬೆಂಬಲಿಗರ ದಾಂಧಲೆ: ವೇದಿಕೆಯಿಂದ ಎದ್ದು ಹೋದ ಮರುಗೇಶ್ ನಿರಾಣಿ, ಜಿಗಜಿನಗಿ- ಬಿಜೆಪಿಯಲ್ಲಿ ಧಗಧಗಿಸುತ್ತಲೇ ಇದೆ ಬೆಂಕಿ
ಮರುಗೇಶ್ ನಿರಾಣಿ ಹೇಳಿದ್ದೇನು?
ಬಾಗಲಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿದ ಮರುಗೇಶ್ ನಿರಾಣಿ, ನಾವು ಸಹ ಕೃಷ್ಣಾ ನದಿಯ ನೀರು ಕುಡಿದಿದ್ದೇವೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಗಾಳಿಯನ್ನೇ ಸೇವಿಸಿದ್ದೇವೆ. ಯಾರು ಏನು ಹೀಯಾಳಿಸಿ ಮಾತನಾಡಿತ್ತಾರೋ, ಅದಕ್ಕಿಂತ ಹತ್ತರಷ್ಟು ಕೆಟ್ಟ ಶಬ್ದಗಳು ನಮ್ಮ ಬಾಯಲ್ಲೂ ಬರುತ್ತವೆ ಎಂದು ಛಾಟಿ ಬೀಸಿದರು.
ನೀವು ಶಿಸ್ತಿನಿಂದ ವರ್ತಿಸಿದರೆ ನಾವು ಶಿಸ್ತಿನಿಂದ ಇರ್ತೇವೆ. ನೀವು ಏನಾದರೂ ಉಪದ್ಯಾಪಿ ಮಾಡಲು ಬಂದ್ರೆ ನಾವು ಬೇರೆ ಭಾಷೆಯಲ್ಲಿ ಮಾತನಾಡುತ್ತೀವೆ ಎಂದು ಕಿಡಿಕಾರಿದರು.
ನಾವು ಕಾರ್ಯಕರ್ತರಿಂದ ಸೋತಿಲ್ಲ. ನಾಯಕರ ತಪ್ಪಿನಿಂದ ಸೋಲು ಅನುಭವಿಸಿದ್ದೇವೆ. ನಾನು ಕಳೆದ 35 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಬಿಜೆಪಿಯಲ್ಲಿ 35 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಯೇ ನನ್ನ ತಾಯಿ. ನಾನು ಇಲ್ಲಿ ಇದ್ದೇನೆ. ಇರುತ್ತೇನೆ ಎಂದು ಹೇಳಿದರು.
ಪರೋಕ್ಷವಾಗಿ ಯತ್ನಾಳ್ ವಿರುದ್ಧ ಕಿಡಿಕಾರಿದ ನಿರಾಣಿ, ನಾನು ಮತ್ತೊಬ್ಬರ ರೀತಿಯಲ್ಲಿ ನಾಟಕ ಆಡಲ್ಲ. ಬೇರೆ ಪಕ್ಷಗಳಿಗೆ ಹೋಗಿಲ್ಲ. ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡು ನಮಾಜ್ ಮಾಡಿಲ್ಲ ಎಂದು ಮುರುಗೇಶ್ ನಿರಾಣಿ ಕಿಚಾಯಿಸಿದರು.
ದಶಕದ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ದೇವಗೌಡರ ನೇತೃತ್ವದಲ್ಲಿ ಜೆಡಿಎಸ್ ಸೇರಿದ್ದರು. ಆ ಸಮಯದಲ್ಲಿ ಅವರು ಮುಸ್ಲಿಮರ ಧರಿಸುವ ಟೊಪ್ಪಿಯನ್ನು ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಈ ಕುರಿತಾಗಿ ನಿರಾಣಿ ಮಾತನಾಡಿದ್ದಾರೆ.
ವಾಜಪೇಯಿ, ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯನಂತಹ ನಾಯಕರು ಸೋತಿದ್ದಾರೆ. ನೀವು ಸೋತಿದ್ದೀರಿ. ಇಲ್ಲಿ ಯಾರು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಅವರ ಮಗನನ್ನು ಸೋಲಿಸಿದ್ದು ಯಾರು? ವಿಜುಗೌಡರನ್ನು ಮೂರು ಬಾರಿ ಸೋಲಿಸಿದ್ದು ಯಾರು? ವಿಜಯಪುರದ ಸಚಿವರೊಬ್ಬರ ಚೇಲಾ ಆಗಿ ಕೆಲಸ ಮಾಡುತ್ತಿರುವವರು ಯಾರು ಎಂದು ನಿರಾಣಿ ಕೇಳಿದ್ದಾರೆ.
English summary
After the crushing defeat in the Karnataka assembly elections, there is a ruckus in the BJP. A fire of resentment is burning among the BJP leaders
Story first published: Tuesday, June 27, 2023, 16:51 [IST]