Bengaluru Rain: ಭಾರಿ ಮಳೆಗೆ ಹೊರ ವರ್ತುಲ ರಸ್ತೆ ಜಲಾವೃತ: ವಾಹನ ಸವಾರರ ಪರದಾಟ | Bengaluru Rain: Heavy Rainfall Causes Traffic Congestion Along Outer Ring Road

Bengaluru

oi-Naveen Kumar N

|

Google Oneindia Kannada News

ಬೆಂಗಳೂರು, ಜುಲೈ 27: ಆರಂಭದಲ್ಲಿ ಕೈಕೊಟ್ಟ ಮುಂಗಾರು ಸದ್ಯ ಚುರುಕುಗೊಂಡಿದ್ದು ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಬುಧವಾರ ಇಡೀ ದಿನ ಜಿಟಿ ಜಿಟಿ ಮಳೆಯಾಗಿದ್ದು, ಸಂಜೆ ವೇಳೆಗೆ ಉತ್ತಮ ಮಳೆ ಸುರಿಯಿತು.

ಭಾರಿ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದರಿಂದ ಹಲವು ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಅದರಲ್ಲೂ ಹೊರ ವರ್ತುಲ ರಸ್ತೆಯಲ್ಲಿ, ವಿಶೇಷವಾಗಿ ಇಕೋಸ್ಪೇಸ್ ಮತ್ತು ಇಬ್ಲೂರ್ ನಡುವೆ ರಸ್ತೆ ಜಲಾವೃತಗೊಂಡಿದ್ದರಿಂದ ವಿಪರೀತ ಟ್ರಾಫಿಕ್ ಉಂಟಾಗಿತ್ತು.

Bengaluru Rain: Heavy Rainfall Causes Traffic Congestion Along Outer Ring Road

ಬೆಳ್ಳಂದೂರು ಡೌನ್ ರಾಂಪ್ ಮತ್ತು ಇಕೋಸ್ಪೇಸ್ ಬಳಿಯ ರಸ್ತೆಗಳು ಜಲಾವೃತಗೊಂಡಿದ್ದರಿಂದ ಸಂಜೆ ವೇಳೆ ಪೀಕ್- ಅವರ್ ನಲ್ಲಿ ಭಾರಿ ಟ್ರಾಫಿಕ್ ಉಂಟಾಗಿತ್ತು. ಇಬ್ಲೂರು ಕಡೆಗೆ ಹೋಗುವ ವಾಹನಗಳು ಜಲಾವೃತವಾದ ರಸ್ತೆಗಳಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಪ್ರಯಾಣಿಕರು ಪರದಾಡಿರು.

ಪರ್ಯಾಯ ರಸ್ತೆ ಬಳಸಲು ಮನವಿ

ರಸ್ತೆಯಲ್ಲಿ ತುಂಬಿದ್ದ ನೀರನ್ನು ತೆರವು ಮಾಡಲು ಮತ್ತು ಟ್ರಾಫಿಕ್ ನಿಯಂತ್ರಣ ಮಾಡಲು ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು. ಸಂಚಾರ ದಟ್ಟಣೆಯನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಈ ಭಾಗದ ಪೊಲೀಸರು ಮನವಿ ಮಾಡಿದರು.

“ಎಚ್ಚರಿಕೆಯಿಂದ ಚಾಲನೆ ಮಾಡಿ ಮತ್ತು ಪರ್ಯಾಯ ರಸ್ತೆಗಳನ್ನು ಬಳಸಿ” ಎಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಅವರು ಟ್ವೀಟ್ ಮಾಡಿದ್ದಾರೆ. ಆದರೂ, ಆ ರಸ್ತೆಯನ್ನು ಹೊರತುಪಡಿಸಿದರೆ ಯಾವ ಪರ್ಯಾಯ ರಸ್ತೆಗಳನ್ನು ಹೋಗಬಹುದು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಒಆರ್‌ಆರ್ ಸುತ್ತಮುತ್ತ, ಕುಂದಲಹಳ್ಳಿ, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ ಮತ್ತು ವೈಟ್‌ಫೀಲ್ಡ್ ಸಂಚಾರ ಪೊಲೀಸ್ ವ್ಯಾಪ್ತಿಯ ಪ್ರದೇಶಗಳಲ್ಲಿ ಇದೇ ರೀತಿಯ ನಿಧಾನಗತಿಯ ಟ್ರಾಫಿಕ್‌ಅನ್ನು ಅನುಭವಿಸಿದವು.

ಇಂದು ಕೂಡ ನಗರದಲ್ಲಿ ಉತ್ತಮ ಮಳೆ

ಬುಧವಾರ ಬಿಬಿಎಂಪಿ ವ್ಯಾಪ್ತಿಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಇಂದು ಕೂಡ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನ ಮತ್ತು ಸಂಜೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಮಳೆ ಮುನ್ಸೂಚನೆ ಇರುವ ಕಾರಣ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಭಾರಿ ಮಳೆಯಾದ ಸಂದರ್ಭದಲ್ಲಿ ಅಂಡರ್ ಪಾಸ್‌ಗಳಲ್ಲಿ ಸಂಚಾರ ಮಾಡುವುದನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ದಟ್ಟಣೆ ಉಂಟಾಗುವ ರಸ್ತೆಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೇಳಲಾಗಿದೆ.

ಬನಶಂಕರಿ, ನಾಗರಬಾವಿ, ವಿಜಯನಗರ, ಪೀಣ್ಯ, ಮಹದೇವಪುರ, ಯಲಹಂಕ, ಕೆಆರ್ ಮಾರ್ಕೆಟ್ ಸೇರಿದಂತೆ ಹಲವು ಕಡೆಗಳಲ್ಲಿ ಇಂದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

English summary

Heavy rains caused waterlogging and disrupted traffic on Bengaluru’s Outer Ring Road, particularly between Ecospace and Iblur. The situation worsened during peak hours, with the Bellandur down ramp and nearby roads submerged.

Story first published: Thursday, July 27, 2023, 8:35 [IST]

Source link