Bengaluru
oi-Ravindra Gangal
ಬೆಂಗಳೂರು, ಜುಲೈ 29: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ( Bengaluru-Mysuru Expressway ) ಅಲ್ಲಿ ನಡೆದಿರುವ ಅಪಘಾತ ಹಾಗೂ ಸಾವುಗಳ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೆದ್ದಾರಿಯಲ್ಲಿ ಸರ್ಕಾರ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆಯೂ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿರುವ ಅವರು ಜನವರಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಾರಂಭವಾಯಿತು. ಪ್ರಧಾನಿ ಮೋದಿ ಅವರು ಈ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟನೆ ಮಾಡಿದರು. ಅಲ್ಲಿಂದ ಈ ವರೆಗೆ ನೂರಾರು ಅಪಘಾತಗಳು ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಲ್ಲಿ ನಡೆದಿರುವ ಅಪಘಾತಗಳ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಹೆದ್ದಾರಿಯಲ್ಲಿ ಜನವರಿಯಿಂದ ಈ ವರೆಗೆ ಒಟ್ಟು 398 ಅಪಘಾತಗಳು ನಡೆದಿದೆ. ಈ ಅಪಘಾತಗಳಲ್ಲಿ 121 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.
ಬೆಂಗಳೂರು-ಮದ್ದೂರು ಮತ್ತು ಮದ್ದೂರು-ಮೈಸೂರು, ಎರಡು ವಿಭಾಗಗಳ ಅಡಿಯಲ್ಲಿ ಕಳೆದ ಏಳು ತಿಂಗಳಲ್ಲಿ ಸುಮಾರು 398 ಅಪಘಾತಗಳು ಸಂಭವಿಸಿವೆ ಎಂದು ಗಡ್ಕರಿ ತಿಳಿಸಿದ್ದಾರೆ.

ಬೆಂಗಳೂರು-ಮದ್ದೂರು ನಡುವಿನ ಅಪಘಾತದಲ್ಲಿ 59 ಮಂದಿ ಸಾವನ್ನಪ್ಪಿದ್ದರೆ, ಮದ್ದೂರಿನಿಂದ ಮೈಸೂರುವರೆಗಿನ ಎರಡನೇ ವಿಭಾಗದಲ್ಲಿ 62 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಪೊಲೀಸರು ನೀಡಿರುವ ಅಂಕಿಅಂಶಗಳ ಪ್ರಕಾರ, ಜೂನ್ ತಿಂಗಳಲ್ಲಿ 28 ಸಾವುಗಳು ಸಂಭವಿಸಿದ್ದು, ಜನವರಿಯಿಂದ ಈ ವರೆಗೆ ಒಟ್ಟು 132 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜಾರಿಗೆ ತಂದಿರುವ ಸುರಕ್ಷತಾ ಕ್ರಮಗಳ ಕುರಿತು ಮಾತನಾಡಿರುವ ಅವರು, ಕಡಿಮೆ ಅಂತರದಲ್ಲಿ ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಜೊತೆಗೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹೆಚ್ಚುವರಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿನ ಎರಡು ವಿಭಾಗಗಳಿಗೆ ತಲಾ ಎರಡು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಓವರ್ಹೆಡ್ ವೇರಿಯಬಲ್ ಮೆಸೇಜ್ ಚಿಹ್ನೆಗಳ (ವಿಎಂಎಸ್) ಜೊತೆಗೆ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚುವರಿ ಸುರಕ್ಷತಾ ಕ್ರಮವಾಗಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು ಮತ್ತು ಇತರ ಮೋಟಾರುರಹಿತ ವಾಹನಗಳಂತಹ ನಿಧಾನವಾಗಿ ಚಲಿಸುವ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೋಟಾರು ಮಾರ್ಗಕ್ಕಾಗಿ ನಿರ್ದಿಷ್ಟವಾಗಿ ರಚಿಸಲಾದ ರಸ್ತೆ ಸುರಕ್ಷತಾ ಸಮಿತಿಯು ಜುಲೈ 17 ಮತ್ತು 20 ರ ನಡುವೆ ಸ್ಥಳಕ್ಕೆ ಭೇಟಿ ನೀಡಿದೆ. ‘ಕರ್ನಾಟಕ ಪೊಲೀಸ್ ಇಲಾಖೆಯು ಇಂಟರ್‌ಸೆಪ್ಟರ್‌ಗಳೊಂದಿಗೆ ವೇಗದ ಮಿತಿಗಳನ್ನು ಜಾರಿಗೊಳಿಸಲು ಉಪಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಗಡ್ಕರಿ ಹೇಳಿದ್ದಾರೆ.
ಈ ಹೆದ್ದಾರಿಯಲ್ಲಿ ನಾಲ್ಕು ಆಂಬ್ಯುಲೆನ್ಸ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಹೆದ್ದಾರಿಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಟೋಲ್ ಪ್ಲಾಜಾಗಳಲ್ಲಿ ಪ್ರಥಮ ಚಿಕಿತ್ಸಾ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಎಕ್ಸ್‌ಪ್ರೆಸ್ ವೇ ಬಳಸುವ ವಾಹನ ಸವಾರರ ಸುರಕ್ಷತೆಗೆ ಕೈಗೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ರಸ್ತೆ ಸುರಕ್ಷತಾ ಸಮಿತಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಏತನ್ಮಧ್ಯೆ, ಕರ್ನಾಟಕ ಪೊಲೀಸರು ಐದು ಸ್ಪೀಡ್-ರೇಡಾರ್ ಗನ್‌ಗಳನ್ನು ಮತ್ತು 10 ಹೆಚ್ಚುವರಿ ಗಸ್ತು ವಾಹನಗಳನ್ನು ನಿಯೋಜಿಸಿದ್ದಾರೆ.
English summary
Union Minister Nitin Gadkari has shared information in the Lok Sabha about the accidents and deaths that have taken place on the Bengaluru-Mysore Expressway.
Story first published: Saturday, July 29, 2023, 10:51 [IST]