Bengaluru
oi-Ravindra Gangal

ಬೆಂಗಳೂರು, ಜುಲೈ 07: ಹಸಿರು ಮೆಣಸಿನಕಾಯಿ ಇತ್ತೀಚಿನ ದಿನಗಳಲ್ಲಿ ನಾಲಿಗೆಯಷ್ಟೇ ಅಲ್ಲ, ಜೇಬಿಗೂ ಕಾರವಾಗಿದೆ. ದೇಶದಲ್ಲಿ ಟೊಮೆಟೊ ನಂತರ, ಹಸಿರು ಮೆನಸಿನಕಾಯಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ ಏರಿಕೆ ಕಂಡಿದೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಗುರುವಾರ ಒಂದು ಕಿಲೋ ಮೆಣಸಿನಕಾಯಿಗೆ 130 ರೂ. ಆಗಿದೆ.

ಕಳೆದ ತಿಂಗಳು, ಬೆಲೆಯು ಕಿಲೋಗೆ 60 ರೂ.ಗಳ ಆಸುಪಾಸಿನಲ್ಲಿತ್ತು. ಈಗ ಶೇ 116ರಷ್ಟು ಬೆಲೆ ಏರಿಕೆಯಾಗಿದೆ. ಹವಾಮಾನದ ಏರುಪೇರಿನಿಂದ ಉಂಟಾದ ಬೇಡಿಕೆ ಮತ್ತು ಪೂರೈಕೆಯ ಅಂತರವು ಈ ಏರಿಕೆಗೆ ಕಾರಣವಾಗಿದೆ ಎಂದು ಮೆಣಸಿನಕಾಯಿ ಬೆಳೆಗಾರರು ಮತ್ತು ವ್ಯಾಪಾರಿಗಳು ಹೇಳಿದ್ದಾರೆ. ಆದರೆ ರಾಜ್ಯದ ಮೆಣಸಿನಕಾಯಿ ಬೆಳೆಯುವ ಜಿಲ್ಲೆಗಳಲ್ಲಿ ಎಲೆಸುರುಳಿ ರೋಗ ಕಾಣಿಸಿಕೊಂಡು ಪರಿಸ್ಥಿತಿ ಹದಗೆಟ್ಟಿದೆ ಎಂದು ವರದಿಯಾಗಿದೆ.
ಈ ಊರಲ್ಲಿ ಸೇಬಿಗಿಂತ ಟೊಮೆಟೊ ದುಬಾರಿ: ಪ್ರತಿ ಕೆ.ಜಿ. 200-250 ರೂಪಾಯಿಗೆ ಮಾರಾಟ
ಬೆಂಗಳೂರಿಗೆ ನೆರೆಯ ಜಿಲ್ಲೆಗಳಾದ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರದಿಂದ ಹಸಿರು ಮೆಣಸಿನಕಾಯಿ ಬರುತ್ತಿದೆ. ಆದರೂ, ಬೇಡಿಕೆ ಪೂರೈಕೆಗೆ ತಾಳೆಯಾಗುತ್ತಿಲ್ಲವೆಂದು ವ್ಯಾಪಾರಿಗಳು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ರೈತ ಮಲ್ಲಿಕಾರ್ಜುನ ಪ್ರಕಾರ, ‘ಕೆಲ ವರ್ಷಗಳ ಹಿಂದೆ ಮೆಣಸಿನಕಾಯಿ ಬೆಳೆಗೆ ಎಲೆ ಸುರುಳಿ ರೋಗ ಬಂದು ಇಳುವರಿ ಕಡಿಮೆಯಾಗಿತ್ತು. ಈ ರೋಗವು ಮುಖ್ಯವಾಗಿ ಚಿಲ್ಲಿ ಲೀಫ್ ಕರ್ಲ್ ವೈರಸ್ (ಚಿಎಲ್‌ಸಿವಿ) ನಿಂದ ಉಂಟಾಗುತ್ತದೆ. ಇದು ಸಸ್ಯಗಳಲ್ಲಿ ತೇಪೆಗಳನ್ನು ಹೆಚ್ಚಿಸುತ್ತದೆ. ಬೆಳವಣಿಗೆಯನ್ನು ಕುಂಠಿತ ಮಾಡುತ್ತದೆ’ ಎಂದು ಹೇಳಿದ್ದಾರೆ.

‘ಈ ರೋಗ ಹರಡುವುದನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಬಳಸಿದ್ದೇವೆ. ಆದರೆ ಅವು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಚಿಎಲ್‌ಸಿವಿಗೆ ಸರಿಯಾದ ಔಷಧ ಮತ್ತು ವೈಜ್ಞಾನಿಕ ಪರಿಹಾರದ ಕೊರತೆಯಿದೆ. ಆದ್ದರಿಂದ, ಮೆಣಸಿನಕಾಯಿ ಬೆಳೆಯುವುದು ಲಾಭದಾಯಕವಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಮೆಣಸಿನಕಾಯಿ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.
ಈಗ ನನ್ನ ಹೆಚ್ಚಿನ ಗೆಳೆಯರು ಹಾವೇರಿ, ಹುಬ್ಬಳ್ಳಿ, ಧಾರವಾಡ ಮತ್ತು ಗದಗದಲ್ಲಿದ್ದಾರೆ. ಅವರು ಮೆಣಸಿನಕಾಯಿ ಬೆಳೆಯುವುದನ್ನು ನಿಲ್ಲಿಸಿದ್ದಾರೆ ಎಂದು 25 ಎಕರೆ ಜಮೀನು ಹೊಂದಿರುವ ಮಲ್ಲಿಕಾರ್ಜುನ್ ಹೇಳಿದ್ದಾರೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಉತ್ಪಾದನೆಯ ಒಟ್ಟು ಪ್ರದೇಶವು ತೀವ್ರವಾಗಿ ಕುಸಿದಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಹಸಿರು ಮೆಣಸಿನಕಾಯಿ ಸರಬರಾಜು ಮಾಡುವ ಒಟ್ಟು ಪ್ರದೇಶವು ಶೇ 30 ರಿಂದ 40 ರಷ್ಟು ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಬೇಸಿಗೆಯ ಬಿಸಿಯು ತೀವ್ರವಾಗಿತ್ತು. ಮೆಣಸಿನಕಾಯಿ ಸಸ್ಯಗಳಿಗೆ ಚೆನ್ನಾಗಿ ನೀರು ಹಾಕಬೇಕು. ನೀರಿನ ಬಲವೂ ಕಡಿಮೆಯಾಯಿತು. ಈಗ ಮುಂಗಾರು ಪ್ರಾರಂಭವಾಗಿದೆ, ಅನೇಕ ರೈತರು ಬೆಳೆಯನ್ನು ಬಿತ್ತಿದ್ದಾರೆ ಮತ್ತು ಎರಡು ತಿಂಗಳ ನಂತರ ನಾವು ಬೆಲೆಯಲ್ಲಿ ಕುಸಿತವನ್ನು ಕಾಣಬಹುದು ಎಂದು ರೈತರು ತಿಳಿಸಿದ್ದಾರೆ.
English summary
After tomatoes in the country, green chillies have seen a steep rise in prices. 130 per kilo of chili in Bengaluru retail market on Thursday,
Story first published: Friday, July 7, 2023, 11:24 [IST]