Bengaluru
oi-Shankrappa Parangi
ಬೆಂಗಳೂರು, ಜೂನ್ 19: ಮಳೆಗಾಲ ಆರಂಭವಾದ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಮುಂಜಾಗೃತ ಕ್ರಮವಾಗಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆಯುಕ್ತರ ಸೂಚನೆ ಮೇರೆಗೆ ಮಹದೇವಪುರ ವಲಯ ವ್ಯಾಪ್ತಿಯ ದೊಡ್ಡಾನೆಕುಂದಿ ಹಾಗೂ ಹೊಯ್ಸಳ ನಗರ ವ್ಯಾಪ್ತಿಯಲ್ಲಿ ಸೋಮವಾರ ರಾಜಕಾಲುವೆ, ನೀರುಗಾಲುವೆ ಒತ್ತುವರಿದಾರರ ವಿರುದ್ಧ ಜೆಸಿಬಿಗಳು ಘರ್ಜಿಸಿವೆ.
ಮಹದೇವಪುರ ವಲಯ ದೊಡ್ಡಾನೆಕುಂದಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂಖ್ಯೆ 24/1, 3, 4 ಮತ್ತು 5ರ ಫರ್ನ್ ಸಿಟಿಯಲ್ಲಿ ಹಾದು ಹೋಗಿರುವ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಸುಮಾರು 200 ಮೀಟರ್ ಉದ್ದದ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿತ್ತು. ಒತ್ತುವರಿ ಜಾಗದ ಮೇಲೆ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಸ್ವಿಮ್ಮಿಂಗ್ ಫೂಲ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP), ಕಟ್ಟಡ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ಫರ್ನ್ ಸಿಟಿ ನಂತರದ ಸ್ಥಳ ಸುಮಾರು 200 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಖಾಲಿ ಸ್ಥಳ, ಗೌಡ್ರು ರಾಜಣ್ಣ ಹೋಟೆಲ್ ಶೆಡ್ ಅನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು. ಇದರೊಂದಿಗೆ ಭಗಿನಿ ಹೋಟೆಲ್ ಅನ್ನು ತೆರವುಗೊಳಿಸಲು ಮುಂದಾದಾಗ ಹೋಟೆಲ್ ನವರೇ ಸ್ವಯಂ ತೆರವುಗೊಳಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಪೈಕಿ ತ್ವರಿತವಾಗಿ ತೆರವು ಮಾಡಲು ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದರು.
ಬಿಬಿಎಂಪಿ ಇಂಜಿನಿಯರ್ಗಳು, ಭೂಮಾಪಕರು, ತಹಶೀಲ್ದಾರ್ ರವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದರಿ ಸ್ಥಳದಲ್ಲಿ ಅಧಿಕಾರಿ/ಸಿಬ್ಬಂದಿಗಳ ಭದ್ರತೆಗಾಗಿ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. 1 ಹಿಟಾಚಿ ಹಾಗೂ 10 ಗ್ಯಾಂಗ್ ಮ್ಯಾನ್ ಗಳ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಮುಖ್ಯ ಅಭಿಯಂತರರಾದ ಲೋಕೇಶ್ ರವರು ಮಾಹಿತಿ ನೀಡಿದರು.
ಕೆಆರ್ ಪುರ ವ್ಯಾಪ್ತಿಯಲ್ಲಿ 04 ಮಳಿಗೆ ತೆರವು
ಕೆಆರ್.ಪುರ ಹೊರಮಾವು ಉಪ ವಿಭಾಗದ ಹೊಯ್ಸಳನಗರ ಮುಖ್ಯರಸ್ತೆಯ ಪಕ್ಕದಲ್ಲಿ ಹಾದುಹೋಗುವ ರಾಜಕಾಲುವೆ ಮೇಲೆ ಸುಮಾರು 200 ಅಡಿ ಉದ್ದ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಆ ಸ್ಥಳದಲ್ಲಿ ಒಟ್ಟು 4 ಮಳಿಗೆಗಳು, ಜೊತೆಗೆ 1 ಕಾರ್ ಸರ್ವೀಸ್ ಸ್ಟೇಷನ್ ಅನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಗಾಗಿ 1 ಜೆಸಿಬಿ, 2 ಟ್ರ್ಯಾಕ್ಟರ್, 10ಕ್ಕೂ ಹೆಚ್ಚು ಗ್ಯಾಂಗ್ ಮ್ಯಾನ್ ಗಳು ಹಾಗೂ ರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವ್ಯಾಪ್ತಿಯಲ್ಲಿ ರಾಜಕಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ಭೂಮಾಪಕರ ಮುಖಾಂತರ ಗಡಿ ಗುರುತಿಸಿದ್ದರು. ತಹಶೀಲ್ದಾರ್ ಮೂಲಕ ಒತ್ತುವರಿ ಮಾಡಿರುವವರಿಗೆ ಆದೇಶಗಳನ್ನು ಜಾರಿಗೊಳಿಸಿ ಹಂತ-ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಅದರಂತೆ ಇಂದು ಫರ್ನ್ ಸಿಟಿ ಆವರಣದಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.
ತಡೆಯಾಜ್ಞೆ ತಂದ ಫರ್ನ್ ಸಿಟಿ ಮಾಲೀಕರು
ಮಧ್ಯಾಹ್ನದ ನಂತರ ಫರ್ನ್ ಸಿಟಿ ಮಾಲೀಕರು ಮಾನ್ಯ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಫರ್ನ್ ಸಿಟಿ ಸೇರಿದಂತೆ ತಡೆಯಾಜ್ಞೆ ತಂದಿರುವಂತಹ ಒತ್ತುವರಿಗಳನ್ನು ನ್ಯಾಯಾಲಯದಲ್ಲಿ ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಗಳ ನಿರ್ಮಾಣ ಮಾಡಲಾಗುವುದು ಎಂದು ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಹೇಳಿದರು.
ಬೊಮ್ಮನಹಳ್ಳಿ ವಲಯದ ಅಂಜನಾಪುರ ವಾರ್ಡ್ ನಲ್ಲಿ ತಿಪ್ಪಸಂದ್ರ ಗ್ರಾಮ, ನಾರಾಯಣನಗರ 2ನೇ ಹಂತದ ಬಿಡಿಎ ಅನುಮೋದಿತ ಬಡಾವಣೆಯ ಸರ್ವೇ ಸಂ. 1ರಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಪ್ರದೇಶದಲ್ಲಿ ಸುಮಾರು 20 X 70 ವ್ಯಾಪ್ತಿಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿದ್ದ 6 ಮಳಿಗಗಳನ್ನು 2 ಜೆ.ಸಿ.ಬಿ ಗಳ ಮೂಲಕ ತೆರವುಗೊಳಿಸಲಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದ್ದಾರೆ.
English summary
BBMP officials has Cleared Who Encroachment Of RajaKaluve In Doddanekundi At Mahadevpur Zone.
Story first published: Monday, June 19, 2023, 19:02 [IST]