Karnataka
oi-Reshma P
ಬೆಂಗಳೂರು, ಜುಲೈ 01: ರಾಜ್ಯ ವಿಧಾನಸಭಾ ಚುನಾವಣಾ ಸೋಲಿಗೆ ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆ ರಾಜಕಾರಣವೇ ಕಾರಣ ಎಂದು ಸಿ ಟಿ ರವಿ ಹಾಗೂ ಪ್ರತಾಪ್ ಸಿಂಹ ಹೇಳಿಕೆಗೆ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ವೇದಿಕೆಯಲ್ಲಿನೇರವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಪಕ್ಷದ ಸೋಲಿನ ಕುರಿತು ಬಿಜೆಪಿ ನಾಯಕರು ಸ್ವಪಕ್ಷದ ನಾಯಕರ ವಿರುದ್ದ ಕಿಡಿಕಾರಿದ್ದು, ಪಕ್ಷ ಹಾಗೂ ಸ್ವಪಕ್ಷದ ನಾಯಕರ ನಡೆ ಕುರಿತಂತೆ ಬಹಿರಂಗ ಹೇಳಿಕೆ ನೀಡಿದವರಿಗೆ ಎಚ್ಚರಿಕೆ ನೀಡಲು ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ವಿ.ರಾಜೇಶ್(ಸಂಘಟನೆ), ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ಸಿದ್ದರಾಜು ಅವರ ಸಮ್ಮುಖದಲ್ಲಿಈವರೆಗೆ ಪಕ್ಷದ ನಾಯಕರ ವಿರುದ್ದವಾಗಿ ಹೇಳಿಕೆ ನೀಡಿದವರ ಕುರಿತು ಚರ್ಚೆ ನಡೆದಿದೆ.
ನಾವೆಲ್ಲಾ ರಾಜಕಾರಣದಲ್ಲಿ ಕಷ್ಟಪಟ್ಟು ಬಿಳಿ ಬಟ್ಟೆ ತೊಟ್ಟಿರುತ್ತೇವೆ. ಆದರೆ ನಮ್ಮ ಮೇಲೆ ನೀಲಿ ಶಾಹಿ ಎರಚಿ ಹೋದರೆ ನಮ್ಮ ಕತೆ ಏನಾಗಬೇಕು? ಸಾರ್ವಜನಿಕ ಜೀವನದಲ್ಲಿಇಂತಹ ಕಳಂಕವನ್ನು ತೊಡೆದುಕೊಳ್ಳುವುದಕ್ಕೆ ಎಷ್ಟು ಕಷ್ಟ ಎಂಬುದು ಗೊತ್ತೆ? ಮಾತನಾಡುವುದು ಎಲ್ಲರಿಗೂ ಸುಲಭ. ಆದರೆ ಕೊಳೆಯಾದ ಬಟ್ಟೆಯನ್ನು ಸ್ವಚ್ಛ ಮಾಡುವುದು ಕಷ್ಟ, ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣಾ ಫಲಿತಾಂಶದ ಬಳಿಕ ‘ಹೊಂದಾಣಿಕೆ ರಾಜಕಾರಣ’ದ ಬಗ್ಗೆ ಹೇಳಿಕೆ ನೀಡುವ ಅಗತ್ಯವಿತ್ತೇ? ಇಂತಹ ಮಾತುಗಳಿಂದ ನಾನು ಸೇರಿದಂತೆ ನಮ್ಮೆಲ್ಲರ ವ್ಯಕ್ತಿತ್ವದ ಮೇಲಾಗುವ ನಕಾರಾತ್ಮಕ ಪರಿಣಾಮದ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದೀರಾ? ಎಂದು ಪ್ರಶ್ನೆ ಮಾಡಿದರು ಎಂದು ಹೇಳಲಾಗಿದೆ.
ಇನ್ನೂ ಬೊಮ್ಮಾಯಿ ಅವರ ಮಾತಿಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ನಾನು ಆಡಿರುವ ಮಾತುಗಳಲ್ಲಿ ತಪ್ಪೇನಿತ್ತು? ಪಕ್ಷ ನಿಷ್ಠನಾದ ನಾನು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಲು ಸಾಧ್ಯವೇ? ನಾನು ಕಾರ್ಯಕರ್ತರ ಅಭಿಪ್ರಾಯದ ದನಿಯಾಗಿ ಮಾತನಾಡಿದ್ದೇನೆ ಎಂದು ಒಳ ಒಪ್ಪಂದ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಇತ್ತ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಇನ್ನಷ್ಟು ಕೋಪಗೊಂಡ ಬಸವರಾಜ ಬೊಮ್ಮಾಯಿ ಅವರು, ಕಾರ್ಯಕರ್ತರು ಎಲ್ಲರ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಬಹಿರಂಗ ಹೇಳಿಕೆ ನೀಡುವುದು ಎಷ್ಟು ಸರಿ. ಕನಿಷ್ಠ ಅಂತಹ ಹೇಳಿಕೆಯಿಂದಾಗುವ ಪರಿಣಾಮಗಳನ್ನು ಅಂದಾಜಿಸಬೇಡವೇ ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನೂ ಮುಂದೆ ಯಾರು ಸೋಲು ಗೆಲುವಿನ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಬೇಡ. ಆರೋಪ ಹೊರಡಿಸುವುದು ಸುಲಭ. ಆದರೆ ಅದು ಬೀರುವ ಪರಿಣಾಮವನ್ನು ನಿಭಾಯಹಿಸುವುದು ಕಠಿಣ. ಈ ಹಿಂದಿನ ಸಭೆಯಲ್ಲೂ ನಾನು ಇದೇ ಮಾತು ಹೇಳಿದ್ದೆ. ಈಗಲಾದರೂ ಕೆಲವರನ್ನು ಕರೆಸಿ ಮಾತನಾಡಿರುವುದು ಒಳ್ಳೆಯದು ಎಂದು ಸಭೆಗೆ ತಿಳಿಸಿದರು ಎನ್ನಲಾಗಿದೆ.
ಇತ್ತ ಸಭೆಯಲ್ಲಿ ತಮ್ಮ ಹೇಳಿಕೆಗಳ ಕುರಿತು ಪ್ರತಾಪ್ ಸಿಂಹ ಅವರು ತಮ್ಮ ಮಾತನ್ನ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸಿಗರನ್ನು ನಾನು ಪ್ರಶ್ನಿಸಿದ್ದು ತಪ್ಪೇ? ನನ್ನ ಹೇಳಿಕೆ ತಪ್ಪಾಗಿ ಅರ್ಥೈರ್‍ಸಿಕೊಂಡರೆ ಹೇಗೆ? ಎಂದು ಪ್ರತಾಪ್‌ಸಿಂಹ ಬೊಮ್ಮಾಯಿ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ. ಹೊಂದಾಣಿಕೆ ರಾಜಕಾರಣದ ಹೇಳಿಕೆಗೂ ಮೊದಲು ನೀವು ಬಿಟ್ ಕಾಯಿನ್, ಪಿಎಸ್‌ಐ ಹಗರಣದ ಬಗ್ಗೆ ಮಾತನಾಡಿದ್ದೀರಲ್ಲ. ಇದೀಗ ನೀವೇ ಅಧಿಕಾರದಲ್ಲಿದ್ದ ತನಿಖೆ ನಡೆಸಿ ಎಂದು ಕಾಂಗ್ರೆಸ್‌ನವರನ್ನು ನಾನು ಪ್ರಶ್ನಿಸಿದ್ದೆ. ವಾರದ ಬಳಿಕ ಕಾಂಗ್ರೆಸ್‌ನವರು ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ಈಗ ಅಧಿಕಾರಕ್ಕೆ ಬಂದವರು ತನಿಖೆ ನಡೆಸಲಿಲ್ಲಎಂದರೆ ಹೊಂದಾಣಿಕೆ ರಾಜಕಾರಣವಾಗುವುದಿಲ್ಲವೇ? ಎಂದು ಕಾಂಗ್ರೆಸಿಗರನ್ನು ನಾನು ಪ್ರಶ್ನಿಸಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಆಗ ಮಧ್ಯ ಪ್ರವೇಶಿಸಿದ ನಳಿನ್ ಕುಮಾರ್ ಕಟೀಲ್, ಅದನ್ನೆಲ್ಲಾ ಪಕ್ಷದ ವೇದಿಕೆಯಲ್ಲಿ ಹೇಳಬಹುದಿತ್ತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
English summary
BJP- Congress Adjustment Politics; Former CM Basavaraj Bommai And MP Pratap Simha Talk War.