Last Updated:
KEA ವತಿಯಿಂದ ಕರ್ನಾಟಕ ಕಂದಾಯ ಇಲಾಖೆಯ 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. PUC ಪಾಸ್ ಅಭ್ಯರ್ಥಿಗಳು ಆಗಸ್ಟ್ 7, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ (Government Job) ನಿರೀಕ್ಷೆಯಲ್ಲಿರುವ ಯುವಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಹಿಸುದ್ದಿ ನೀಡಿದೆ. ಕರ್ನಾಟಕ ಕಂದಾಯ ಇಲಾಖೆಯಲ್ಲಿ (Revenue Department) ಖಾಲಿ ಇರುವ 572 ಗ್ರಾಮ ಆಡಳಿತಾಧಿಕಾರಿ (Village Administrative Officer – VAO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಿಂದೆ ಗ್ರಾಮ ಲೆಕ್ಕಾಧಿಕಾರಿ ಎಂದು ಕರೆಯಲಾಗುತ್ತಿದ್ದ ಈ ಹುದ್ದೆಗೆ ಈಗ ಗ್ರಾಮ ಆಡಳಿತಾಧಿಕಾರಿ ಎಂದು ಮರುನಾಮಕರಣ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದಾದ್ಯಂತ ಉದ್ಯೋಗಾವಕಾಶವಿದ್ದು, ತಿಂಗಳಿಗೆ ₹34,100 ರಿಂದ ₹67,600 ವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ಸಂಸ್ಥೆಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ (PUC/12ನೇ ತರಗತಿ) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ವಯೋಮಿತಿಯ ಬಗ್ಗೆ ಗಮನಿಸುವುದಾದರೆ, ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 40 ವರ್ಷ ಮೀರಿಬಾರದು. ಆದರೆ, ಮೀಸಲಾತಿಗೆ ಅನುಗುಣವಾಗಿ 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಿದ್ದು, ಸಾಮಾನ್ಯ ಹಾಗೂ 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ₹750, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ₹500 ಮತ್ತು ಮಾಜಿ ಸೈನಿಕರು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ₹250 ಶುಲ್ಕವನ್ನು ನಿಗದಿಪಡಿಸಲಾಗಿದೆ.
ಬೇಗ ಅರ್ಜಿ ಸಲ್ಲಿಸುವುದು ಉತ್ತಮ
ಈ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 11-07-2026 ರಂದು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 07-08-2026 ಕೊನೆಯ ದಿನಾಂಕವಾಗಿದೆ. ಹಾಗೆಯೇ, ಶುಲ್ಕ ಪಾವತಿಸಲು 10-08-2026 ರವರೆಗೆ ಕಾಲಾವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ. ಏಕೆಂದರೆ, ಕೊನೆಯ ಕ್ಷಣದಲ್ಲಿ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಟ್ರಾಫಿಕ್ ಉಂಟಾಗಿ ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ, ಅಭ್ಯರ್ಥಿಗಳು ಈಗಿನಿಂದಲೇ ಸಾಮಾನ್ಯ ಜ್ಞಾನ, ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಷಯಗಳ ಬಗ್ಗೆ ತಮ್ಮ ಅಧ್ಯಯನವನ್ನು ಆರಂಭಿಸಿದರೆ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಖಂಡಿತವಾಗಿಯೂ ಸಹಕಾರಿಯಾಗಲಿದೆ.
Bangalore [Bangalore],Bangalore,Karnataka














