Agriculture
oi-Umapathi Ramoji
ರಾಯಚೂರು, ಜೂನ್ 26: ಮುಂಗಾರು ಹಂಗಾಮು ಪ್ರಾರಂಭವಾಗಿ 20 ದಿನ ಕಳೆದರೂ ಮಳೆರಾಯನ ಮುನಿಸಿನಿಂದ ಬಿತ್ತನೆಗೆ ಭಾರಿ ಹಿನ್ನೆಡೆಯಾಗಿದ್ದು ರೈತರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಜಿಲ್ಲೆಯಲ್ಲಿ ಭೂಮಿ ಹಸನು ಮಾಡಿಕೊಂಡು ಬಿತ್ತನೆಗೆ ಅಣಿಗೊಳಿಸಲಾಗಿದೆ. ಆದರೆ ವರುಣನ ಕೃಪೆಯಿಂದಾಗಿ ರೈತರಿಗೆ ದಿಕ್ಕೇ ತೋಚದಂತಾಗಿದೆ.
ವಾಣಿಜ್ಯ ಬೆಳೆಯಾದ ಹತ್ತಿ ಬಿತ್ತನೆಗೆ ಕೇವಲ 8 ದಿನಗಳು ಮಾತ್ರ ಸಮಯವಿದ್ದು, ಶೀಘ್ರ ಮಳೆ ಬಾರದಿದ್ದರೆ ರೈತರು ಕಡಿಮೆ ನೀರಿನ ಅಂಶವಿರುವ ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ. ಕಳೆದ ವರ್ಷ ಇಷ್ಟೋತ್ತಿಗೆ ಶೇ.12ರಷ್ಟು ಬಿತ್ತನೆ ಕಾರ್ಯ ಮುಗಿದಿತ್ತು. ಆದರೆ ಈ ವರ್ಷ ಅದೂ ಆಗಿಲ್ಲ ಎಂಬ ಕೊರಗು ರೈತರಲ್ಲಿದೆ.
ಕಳೆದ ವರ್ಷ ಉತ್ತಮ ಮಳೆ ಬಂದು ಫಸಲು ಕೈಗೆ ಬರುತ್ತಿದ್ದಂತೆಯೇ ಅನಾವೃಷ್ಟಿ ಉಂಟಾಗಿದೆ. ಬೆಳೆ ಕೈಗೆ ಸಿಗಲಿಲ್ಲ. ಈ ವರ್ಷ ಕೃಷಿ ಇಲಾಖೆ ಸೂಚನೆ ಮೇರೆಗೆ ಬೆಳೆಗಳ ಬಿತ್ತನೆಗೆ ದೃಷ್ಟಿ ನೆಟ್ಟಿರುವುದು ಗೋಚರಿಸಿದೆ. ಇನ್ನೊಂದೆಡೆ ಮುಂಗಾರು ಮಳೆ ಬರಲಿದೆ ಎಂಬ ಆಶಾಭಾವನೆಯು ಇದೆ. ಹೈದರಬಾದನ ಒಣ ಪ್ರದೇಶ ಸಂಶೋಧನಾ ಕೇಂದ್ರವು ಈಗಾಗಲೇ ಪರ್ಯಾಯ ಬೆಳೆಗಳ ಬಿತ್ತನೆಗೆ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
ಜೂನ್ ಅಂತ್ಯದೊಳಗೆ ಮಳೆ ಬಂದರೆ ತೊಗರಿ, ಹತ್ತಿ , ಸೂರ್ಯಕಾಂತಿ, ಸಜ್ಜೆ , ಸೇಂಗಾ ಬಿತ್ತನೆ ಮಾಡುವ ಸಾಧ್ಯತೆ ಇದೆ. ಆಗಸ್ಟ್ , ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಾದರೆ ಹಿಂಗಾರು ಬಿತ್ತನೆಗೆ ಕಡ್ಲೆ , ಜೋಳ, ಕುಸುಬೆ , ಎಳ್ಳು ಮುಂತಾದ ಬೆಳೆ ಬಿತ್ತಬೇಕು. ಯಾವ ರೀತಿ ಬೆಳೆ ಬೆಳೆಯಬೇಕು ಎಂಬ ಮಾಹಿತಿಯನ್ನು ಸಂಶೋಧನಾ ಕೇಂದ್ರದ ಅಧಿಕಾರಿಗಳು ನೀಡಿದ್ದಾರೆ. ಅದರನುಸಾರ ಅಲ್ಪಾವಧಿ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಈವರೆಗೆ 66 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 31 ಮಿ.ಮೀ. ಮಾತ್ರ ಮಳೆಯಾಗಿದೆ. ವಾಡಿಕೆಗಿಂತ ಶೇ.53 ರಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಇಷ್ಟೊತ್ತಿಗೆ 66 ಸಾವಿರ ಹೆಕ್ಟೇರ್ ಬಿತ್ತನೆಯಾಗಿತ್ತು. ಈ ವರ್ಷ 5 ಸಾವಿರ ಹೆಕ್ಟೇರ್ ಕೂಡ ಬಿತ್ತನೆ ಯಾಗಿಲ್ಲ. ಪ್ರಸ್ತುತ ಹತ್ತಿ ಬಿಟ್ಟರೆ ಮಳೆ ಕೊರತೆಯಿಂದ ಯಾವ ಬೆಳೆಯೂ ಬಿತ್ತನೆ ಯಾಗಿಲ್ಲ.
ಕಳೆದ ಬಾರಿ ಈ ಸಮಯಕ್ಕೆ 50 ಸಾವಿರ ಹೆಕ್ಟೇರ್ ಹತ್ತಿ ಬಿತ್ತಲಾಗಿತ್ತು. ಮುಂಗಾರು ವಿಳಂಬದ ಹಿನ್ನೆಲೆ ಬಿತ್ತನೆಗೆ ಹಿನ್ನೆಡೆಯಾಗಿದೆ. ಮುಂಗಾರು ಬಿತ್ತನೆಗೆ ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರದಲ್ಲಿ 2360.94 ಕ್ವಿಂಟಾಲ್ ವಿವಿಧ ತಳಿಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ಅದರಲ್ಲಿ 815.04 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟವಾಗಿದೆ. ಮಳೆ ಇಲ್ಲದೆ ಇರುವುದರಿಂದ ಬಿತ್ತನೆ ಬೀಜ ಕೇಳುವವರೇ ಇಲ್ಲದಂತಾಗಿದೆ.
ಈಗಾಗಲೇ ರೋಹಿಣಿ, ಅಶ್ವಿನಿ, ಭರಣಿ, ಕೃತಿಕ ಮಳೆಗಳು ಕೈ ಕೊಟ್ಟಿವೆ. ರೋಹಿಣಿ ಮಳೆಯಾದರೆ ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ಆದರೆ ರೋಹಿಣಿ ಮಳೆಯೇ ಆಗಿಲ್ಲ. ಜೂನ್ 8 ರಿಂದ ಮೃಗಶಿರ ಮಳೆ ಕಲೆತು 22ಕ್ಕೆ ಮುಗಿದಿದೆ. ಜಿಲ್ಲೆಯಲ್ಲಿ ಹನಿ ಹನಿ ಮಳೆಯಾಗಿದ್ದು ಬಿಟ್ಟರೆ ಉತ್ತಮ ಬಿತ್ತನೆ ಮಳೆಯಾಗಿಲ್ಲ.
ಪ್ರಸ್ತುತ ಮೃಗಶಿರ ಮಳೆಯೂ ಕೈ ಕೊಟ್ಟಿದ್ದು ಈಗ ರೈತರು ಆರಿದ್ರ , ಪುನರ್ವಸು, ಪುಷ್ಯ , ಆಶ್ಲೇಷ , ಮಗೆ ಮಳೆ ಯತ್ತ ಚಿತ್ತ ಹರಿಸಿದ್ದಾರೆ. ಈ ಮಳೆಗಳು ಬಂದರೆ ಅಲ್ಪಾವಧಿ ಬೆಳೆಗಳನ್ನಾದರೂ ಬೆಳೆ ಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜೂನ್ 10ರಂದು ಮಳೆ ಪ್ರಾರಂಭವಾಗಿದ್ದು ಸುಮಾರು 68 ಮಿ.ಮೀ ಮಳೆಯಾಗಿದ್ದು ಬಿಟ್ಟರೆ ಉತ್ತಮ ಮಳೆ ಸುರಿದಿಲ್ಲ. ಮಳೆಯ ಅಭಾವದ ನಡುವೆಯೂ 5.41 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆ.
ಮುಂಗಾರು ಹಂಗಾಮು ಪ್ರಾರಂಭವಾಗಿ 23 ದಿನ ಕಳೆದಿವೆ. ಮಳೆಯಾಗದೆ ಇರುವ್ಯದರಿಂದ ಕೃಷಿ ಇಲಾಖೆಯಿಂದ ರೈತರಿಗೆ ಪರ್ಯಾಯ ಬೆಳೆ ಬಿತ್ತಲು ಸೂಚನೆ ನೀಡಲಾಗುತ್ತಿದೆ. ಇನ್ನು ಒಂದು ವಾರ ಸಮಯವಿದೆ. ಅಷ್ಟೊರೊಳಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಸಮಯ ನೋಡಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ರಾಯಚೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ ಮಾಹಿತಿ ನೀಡಿದ್ದಾರೆ.
English summary
The Raichur District farmers towards alternative crops due to rain delayed Know more,
Story first published: Monday, June 26, 2023, 20:50 [IST]