Karnataka
oi-Shankrappa Parangi
ಬೆಂಗಳೂರು, ಜೂನ್ 19: ಮುಂದುವರಿದ ತಂತ್ರಜ್ಞಾನದ ಸದುಪಯೋಗದ ಛಾಯೆ ಎಲ್ಲ ಕ್ಷೇತ್ರಗಳಲ್ಲಿಯೂ ಕಾಣಲು ಸಿಗುತ್ತದೆ. ಇದಕ್ಕೆ ವೈದ್ಯಕೀಯ ರಂಗವೇನು ಹೊಸತೇನಲ್ಲ. ಜಗತ್ತಿನಲ್ಲೇ ಅತೀ ಅಪರೂಪದ ಪ್ರಕರಣವೊಂದರಲ್ಲಿ ”ರೋಬೋಟಿಕ್ ಎನ್-ಬ್ಲಾಕ್” ನವೀನ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ (ಕಸಿ) ಮಾಡಿ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆ ಯಶಸ್ಸು ಸಾಧಿಸಿದೆ.
ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡವನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್ ಎನ್-ಬ್ಲಾಕ್” ವಿಧಾನದ ಮೂಲಕ ಕಸಿ ಮಾಡಲಾಗಿದೆ. ಈ ಕಾರಣದಿಂದ ಇದು ಅಪರೂಪದಲ್ಲೇ ಅತೀ ಅಪರೂಪದ ಪ್ರಕರಣ ಎಂದು ವೈದ್ಯರು ಬಣ್ಣಿಸಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ ಶ್ರೀಹರ್ಷ ಹರಿನಾಥ ಅವರ ತಂಡವು ಈ ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.
ಮೃತ ಮಗುವಿನ ಕಿಡ್ನಿ ದಾನ
ನಾಲ್ಕು ಗಂಟೆಗಳ ಯಶಸ್ವಿ ಶಸ್ತ್ರ ಚಿಕಿತ್ಸೆಯ ನಂತರ ಮಾತನಾಡಿರುವ ಡಾ. ಕೇಶವಮೂರ್ತಿ, 30 ವರ್ಷದ ವ್ಯಕ್ತಿಯು ದೀರ್ಘಕಾಲದಿಂದ ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿದ್ದರು. ಹಿಮೋಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಇವರಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಈ ಮಧ್ಯೆ, 13 ತಿಂಗಳ ಮಗುವೊಂದು ಉಸಿರುಗಟ್ಟಿ ಸಾವಪ್ಪಿದ್ದರಿಂದ ಅವರ ಪೋಷಕರ ಒಪ್ಪಿಗೆ ಮೇರೆಗೆ ಆ ಸಣ್ಣ ಮಗುವಿನ ಕಿಡ್ನಿಯನ್ನು ದಾನವಾಗಿ ಪಡೆಯಲಾಯಿತು.
ಈ ಮಗು ಕೇವಲ 7.3 ಕೆಜಿ ಹೊಂದಿತ್ತು. 30 ವರ್ಷದ ಈ ವ್ಯಕ್ತಿಯೂ 50 ಕೆಜಿ ತೂಕವುಳ್ಳವರಾಗಿದ್ದರು. ಇವರಿಗೆ ಮಗುವಿನ ಕಿಡ್ನಿ ಕಸಿ ಮಾಡುವುದು ಸವಾಲಿನ ಕೆಲಸವಾಗಿತ್ತು. ಈ ಸವಾಲನ್ನು ನಮ್ಮ ತಂಡ ಸ್ವೀಕರಿಸಿತು. ಅಗತ್ಯ ಸಿದ್ಧತೆಗಳೊಂದಿಗೆ ರೋಬೋಟಿಕ್ ಎನ್-ಬ್ಲಾಕ್ ಮೂಲಕ ಕಿಡ್ನಿಯನ್ನು ಕಸಿ ಮಾಡಲಾಯಿತು.
4 ಗಂಟೆ ಶಸ್ತ್ರಚಿಕಿತ್ಸೆ, ತೀವ್ರ ನಿಗಾ ಘಟಕದಲ್ಲಿ ಆರೈಕೆ
ರೋಬೋಟಿಕ್ ಎನ್-ಬ್ಲಾಕ್, ಈ ನವೀನ ತಂತ್ರವು ಕಸಿ ಮಾಡಿದ ಮೂತ್ರಪಿಂಡಗಳನ್ನು ಸ್ವೀಕರಿಸುವವರ ದೇಹದ ತೂಕಕ್ಕೆ ಅನುಗುಣವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಶಸ್ತ್ರಚಿಕಿತ್ಸೆಯು ಸುಮಾರು ನಾಲ್ಕು ಗಂಟೆಗಳ ವರೆಗೆ ಸುದೀರ್ಘವಾಗಿ ಸಾಗಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ, ಆರೈಕೆ ಮಾಡಲಾಯಿತು. 12 ದಿನಗಳ ಬಳಿಕ ಅವರನ್ನು ಬಿಡುಗಡೆ ಗೊಳಿಸಲಾಯಿತು ಎಂದು ವಿವರಣೆ ನೀಡಿದರು.
ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಮೂತ್ರಪಿಂಡ ಕಸಿಯಲ್ಲಿ ರೋಬೋಟಿಕ್ ಅಳವಡಿಕೆಯಿಂದ ಯಾವುದೇ ಕಷ್ಟಕರ ಶಸ್ತ್ರಚಿಕಿತ್ಸೆಯಾದರೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ ಸಣ್ಣ ಮಗುವಿನ ಕಿಡ್ನಿಯನ್ನು ದೊಡ್ಡವರಿಗೆ ಅಳವಡಿಸುವುದು ಒಂದು ಸವಾಲೆ ಸರಿ. ಈ ವಿನೂತನ ಪ್ರಯತ್ನವನ್ನು ನಮ್ಮ ವೈದ್ಯರ ತಂಡ ಇರುವ ನೂತನ ಟೆಕ್ನಾಲಜಿ ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಮೂಲಕ ಇದು ವಿಶ್ವದಲ್ಲಿಯೇ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಅವರು ವಿವರಿಸಿದರು.
English summary
Very Rare Case In World: A 30 year old man successfully transplanted kidney from 13 month old dead baby at Fortis Hospital.
Story first published: Monday, June 19, 2023, 19:43 [IST]