Davanagere
lekhaka-Yogaraja G H
ದಾವಣಗೆರೆ, ಜೂನ್ 26: ಈಡಿಗ ಸಮುದಾಯದ ಹಿರಿಯ ರಾಜಕಾರಣಿ ಬಿ. ಕೆ. ಹರಿಪ್ರಸಾದ್ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ, ಕರ್ನಾಟಕ, ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿ, ರಾಷ್ಟ್ರೀಯ ಈಡಿಗ ದೀವರ ಮಹಾಮಂಡಳಿ, ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿವೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಈಡಿಗ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಡಾ. ಮಂಚೇಗೌಡ ಅವರು, ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ ಸಮುದಾಯಕ್ಕೆ ಅಗತ್ಯವಾಗಿ ಬೇಕಾಗಿರುವ 11 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಸಂಘಟನೆ ದೃಷ್ಟಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕುಲಬಾಂಧವರ ಚಿಂತನ ಶಿಬಿರ, ಸಾಮಾಜಿಕ, ರಾಜಕೀಯದ ಅರಿವು ಮೂಡಿಸಬೇಕು. ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ಬ್ರಹ್ಮ ನಾರಾಯಣ ಗುರು ಈಡಿಗ ನಿಗಮಕ್ಕೆ ವರ್ಷಕ್ಕೆ 250 ಕೋಟಿ ರೂಪಾಯಿ ನೀಡಬೇಕು. ಅಲ್ಲದೇ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಹಿಂದಿನ ಸರ್ಕಾರ ಆದೇಶ ಮಾಡಿದ್ದ ಕುಲಶಾಸ್ತ್ರ ಅಧ್ಯಯನವನ್ನು ಕೂಡಲೇ ಪ್ರಾರಂಭ ಮಾಡಬೇಕು. ಈಡಿಗ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕುಲಕಸುಬು ಸೇಂದಿ ಹಾಗೂ ನೀರಾ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬ್ರಹ್ಮ ಶ್ರೀ ನಾರಾಯಣ ಗುರು ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಸ್ಥಾಪಿಸಬೇಕು. ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ನಮ್ಮ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಪ್ರಾರಂಭಿಸಬೇಕು. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಗುರುತಿಸಿಕೊಂಡಿರುವ ಶ್ರೀಹೆಂಡದ ಮಾರಯ್ಯನವರ ಜಯಂತಿಯನ್ನು ಆಚರಣೆ ಮಾಡಬೇಕು ಎಂದರು.
ಈಡಿಗ ಸಮುದಾಯದ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ಗೊಂದಲಗಳನ್ನು ದೂರ ಮಾಡಿ ದೇವಸ್ಥಾನವನ್ನು ಧರ್ಮದರ್ಶಿ ಡಾ.ರಾಮಪ್ಪ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಡಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಬೋಧಿಸಲು ಪಠ್ಯದಲ್ಲಿ ಅಳವಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ವಿಳಂಬ ನೀತಿ ಅನುಸರಿಸಿದರೆ ರಾಜಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ವೈ. ಆನಂದ, ಆರ್.ಪ್ರತಾಪ್, ಟಿ.ಆರ್. ಜ್ಞಾನದೇವ, ಪಿ.ಪಿ.ಪ್ರಕಾಶ್, ಕೆ.ಉದಯ್ ಕುಮಾರ್, ನವೀನ್ ಕುಮಾರ್ ಇತರರು ಉಪಸ್ಥಿತರಿದ್ದರು.
English summary
B. K. Hariprasad should be given appropriate status, Ediga community made 11 demands to the CM Siddaramaiah, Know more,
Story first published: Monday, June 26, 2023, 19:05 [IST]