International
oi-Malathesha M
ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರ ಈಜಿಪ್ಟ್ ಪ್ರವಾಸ ಸಕ್ಸಸ್ ಆಗಿದೆ. ಹಾಗೇ ಈ ಪ್ರವಾಸ ಮತ್ತೊಂದು ಮಹತ್ವದ ಘಟನೆಗೂ ವೇದಿಕೆ ಒದಗಿಸಿತ್ತು. ಅಮೆರಿಕದಲ್ಲಿ ಭರ್ಜರಿ ಸ್ವಾಗತ ಪಡೆದ ಭಾರತದ ಪ್ರಧಾನಿಗೆ, ಈಜಿಪ್ಟ್ ಕೂಡ ಜೈ ಎಂದಿದೆ. ಇಷ್ಟೇ ಅಲ್ಲ, ತನ್ನ ದೇಶದ ಅಂದರೆ ಈಜಿಪ್ಟ್ನ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ನೈಲ್’ ನೀಡಿ ಪ್ರಧಾನಿ ಮೋದಿ ಅವರನ್ನ ಗೌರವಿಸಿದೆ.
ಭಾರತ ಮತ್ತು ಈಜಿಪ್ಟ್ ಸಂಬಂಧ ಮೊದಲಿನಿಂದ ಉತ್ತಮವಾಗಿದೆ. ಈ ಕಾರಣಕ್ಕೆ ಬಂಡವಾಳ ಹೂಡಿಕೆ, ನವೀಕರಿಸಬಹುದಾದ ಇಂಧನ, ಐಟಿ, ಡಿಜಿಟಲ್ ಪಾವತಿಯು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕಿವೆ. ಹಲವು ಮಹತ್ವದ ಸಭೆಗಳನ್ನು ಪ್ರಧಾನಿ ಈ ವೇಳೆ ನಡೆಸಿದ್ದಾರೆ. ಇನ್ನು 2 ದಿನಗಳ ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕುರಿತು ಇತ್ತಿಹಾದಿಯಾ ಅರಮನೆಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಜೊತೆ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಅವರಿಗೆ ಈ ವೇಳೆ ಅತ್ಯುನ್ನತ ಗೌರವ ಪ್ರಶಸ್ತಿ ನೀಡಿದೆ ಈಜಿಪ್ಟ್. ಇದು ಮತ್ತೊಂದು ಹೊಸ ಇತಿಹಾಸಕ್ಕೂ ಸಾಕ್ಷಿಯಾಗಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
100 ವರ್ಷಗಳ ಇತಿಹಾಸವಿದೆ ಪ್ರಶಸ್ತಿಗೆ!
ಅಂದಹಾಗೆ ಈಜಿಪ್ಟ್ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿರುವ ತನ್ನ ದೇಶದ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ನೈಲ್’ಗೆ ಸುಮಾರು 100 ವರ್ಷಗಳ ಇತಿಹಾಸ ಇದೆ. ಈ ಗೌರವ ಪುರಸ್ಕಾರವನ್ನು ಈಜಿಪ್ಟ್ ದೇಶವು 1925ರಲ್ಲಿ ಸ್ಥಾಪಿಸಿತ್ತು. ಈಗ ಭಾರತದ ಪಿಎಂ ಮೋದಿ ಅವರಿಗೂ ‘ಆರ್ಡರ್ ಆಫ್ ದಿ ನೈಲ್’ ಪ್ರದಾನ ಮಾಡಲಾಗಿದೆ. 1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಹೀಗೆ 26 ವರ್ಷಗಳ ನಂತರ ಈಜಿಪ್ಟ್ಗೆ ಭೇಟಿ ನೀಡಿರುವ ಭಾರತದ ಪ್ರಧಾನಿಗೆ ತನ್ನ ದೇಶದಲ್ಲಿನ ಅತ್ಯುನ್ನತ ಗೌರವ ನೀಡಿ ಗೌರವಿಸಿದೆ ಈಜಿಪ್ಟ್. ಹಾಗಾದರೆ ಪ್ರಧಾನಿ ಮೋದಿ ಅವರಿಗೆ ಸಿಕ್ಕ ಅತ್ಯುನ್ನತ ಗೌರವಗಳ ಸಂಖ್ಯೆ ಎಷ್ಟು? ಮುಂದೆ ಓದಿ.
ಪ್ರಧಾನಿ ಮೋದಿಗೆ 13ನೇ ಅತ್ಯುನ್ನತ ಗೌರವ
ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಪಿಎಂ ಮೋದಿ ಅಲ್ಲಿಂದ ನೇರವಾಗಿ ಈಜಿಪ್ಟ್ ತಲುಪಿದ್ದರು. ಹೀಗೆ ತಮ್ಮ ದೇಶಕ್ಕೆ ಬಂದ ಪ್ರಧಾನಿ ಮೋದಿ ಅವರಿಗೆ ಈಜಿಪ್ಟ್ ಅದ್ಧೂರಿಯಾಗಿ ಸ್ವಾಗತ ಕೋರಿತ್ತು. ಅಲ್ಲದೆ 26 ವರ್ಷಗಳ ನಂತರ ಬಂದ ಭಾರತದ ಪ್ರಧಾನಿಯನ್ನು ಗೌರವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು 13ನೇ ಅತ್ಯುನ್ನತ ಗೌರವ ಪುರಸ್ಕಾರ ಎಂಬುದು ಮತ್ತೊಂದು ವಿಶೇಷವಾಗಿದೆ. ಅಷ್ಟಕ್ಕೂ ಈ ಪ್ರಶಸ್ತಿಯನ್ನು ಈಜಿಪ್ಟ್ ಕಲ್ಯಾಣಕ್ಕೆ ಅಥವಾ ಮಾನವ ಕಲ್ಯಾಣಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಯಾವುದೇ ದೇಶಗಳ ಅಧ್ಯಕ್ಷ & ಉಪಾಧ್ಯಕ್ಷ ಅಥವಾ ಪ್ರಧಾನಿ ಇಲ್ಲವೇ ರಾಜರಿಗೆ ಪ್ರದಾನ ಮಾಡಲಾಗುತ್ತದೆ. ಭಾರತದ ಪ್ರಧಾನಿ ಮೋದಿ ಅವರಿಗೂ ಈಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
It is with great humility that I accept the ‘Order of the Nile.’ I thank the Government and people of Egypt for this honour. It indicates the warmth and affection they have towards India and the people of our nation. pic.twitter.com/ZTh3g0nn9P
— Narendra Modi (@narendramodi) June 25, 2023
ಭಾರತ & ಈಜಿಪ್ಟ್ ನಡುವೆ ಯಾವೆಲ್ಲಾ ಒಪ್ಪಂದ?
ಅಂದಹಾಗೆ ಪ್ರಧಾನಿ ಮೋದಿ ಭೇಟಿ ವೇಳೆ, ರಕ್ಷಣಾ ಕ್ಷೇತ್ರ, ವ್ಯಾಪಾರ, ಹೂಡಿಕೆ, ಭದ್ರತೆ ವಿಷಯದಲ್ಲಿ ಸಹಕಾರ ಹೆಚ್ಚಿಸುವುದು, ವಿಜ್ಞಾನ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ಮತ್ತಷ್ಟು ಬಲಪಡಿಸುವುದಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕಿದ್ದಾರೆ.
ಅಲ್ಲದೆ ಕೃಷಿ, ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳ ಸಂರಕ್ಷಣೆ ಹಾಗೂ ಸ್ಪರ್ಧಾತ್ಮಕ ಕಾನೂನು ಕುರಿತ 3 ಮಹತ್ವದ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿದವು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ. ಈ ಮೂಲಕ ಭಾರತ ಮತ್ತು ಈಜಿಪ್ಟ್ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
English summary
Prime Minister Narendra Modi awarded Order of the Nile by Egypt.
Story first published: Monday, June 26, 2023, 16:38 [IST]