India
oi-Shankrappa Parangi
ಮುಂಬೈ, ಜೂನ್ 26: ನೆರೆಯ ಮಹಾರಾಷ್ಟ್ರ ರಾಜ್ಯದ ಥಾಣೆಯಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಪರಿಣಾಮ ಥಾಣೆ ಪಶ್ಚಿಮದ ವರ್ತಕ್ ನಗರ ಪ್ರದೇಶದಲ್ಲಿ ವಿವಿಯಾನ ಮಾಲ್ ಹಿಂದೆ ಬೃಹತ್ ಗೋಡೆಯೊಂದು ಕುಸಿದಿದೆ. ಅದೃಷ್ಟಿವಶಾತ್ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಆಗಿದೆ.
ಮುಂಬೈ ಭಾಗದಲ್ಲಿ ನಿರಂತರ ಮಳೆ ಸುರಿದ ಕಾರಣ ಥಾಣೆಯಲ್ಲಿನ 40 ಅಡಿ ಉದ್ದದ ಗೋಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ, ಜೀವ ಹಾನಿಗಳು ಸಂಭವಿಸಿಲ್ಲ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಗೋಡೆ ತೆರವು, ಪರಿಶೀಲನೆ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಮಧ್ಯೆ ಭಾನುವಾರ ಬೆಳಗ್ಗೆ ಮುಂಬೈನ ರಾಜವಾಡಿ ಕಾಲೋನಿ ಘಾಟ್ಕೋಪರ್ (ಪೂರ್ವ ಭಾಗ) ನಲ್ಲಿ ಕಟ್ಟಡದ ಒಂದು ಭಾಗವು ಕುಸಿದು ಬಿದ್ದಿತ್ತು. ಇದಕ್ಕೂ ಭಾರೀ ಮಳೆಯೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಸಿದ ಈ ಕಟ್ಟಡದ ಅವಶೇಷಗಳ ಅಡಿಯಲ್ಲಿ ಕೆಲವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆ ಪೈಕಿ ಘಟನೆ ಬಳಿಕ ರಕ್ಷಣಾ ತಂಡಗಳು ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದರು. ಗಾಯಗೊಂಡ ನಾಲ್ಕು ಜನರನ್ನು ರಕ್ಷಸಿಸಲಾಗಿದೆ. ಕೆಲವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಇಬ್ಬರು 3 ಅಂತಸ್ತಿನ ಕಟ್ಟಡದ ಒಂದು ಭಾಗದೊಳಗೆ ಇಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು.
ಹೆಣವಾಗಿ ಪತ್ತೆ: ಜನರ ಸ್ಥಳಾಂತರ
ಭಾನುವಾರ ನಡೆದಿದ್ದ ಘಟನೆಯಲ್ಲಿ ಇಬ್ಬರ ಮೃತದೇಹಗಳು ಸೋಮವಾರ ಪತ್ತೆ ಆಗಿವೆ. ಮೃತದೇಹಗಳನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿದ್ದು, ಇವರು ಅವಶೇಷಗಳಡಿಯೇ ಉಸಿರು ಚೆಲ್ಲಿದ್ದಾರೆ ಎಂದು ಘೋಷಿಸಿದರು. ಘಟನಾ ಸ್ಥಳದ ಸುತ್ತಮುತ್ತಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಸ್ಥಳದಲ್ಲಿ ಮುಂಬೈ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (NDRF), ಪೊಲೀಸ್, ವಾರ್ಡ್ ಸಿಬ್ಬಂದಿ, 108 ಆಂಬ್ಯುಲೆನ್ಸ್ ಹಾಗೂ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ.
ಭಾನುವಾರ ಬೆಳಗ್ಗೆ ಮುಂಬೈ ನಗರದ ನಾನಾವತಿ ಆಸ್ಪತ್ರೆ ಬಳಿ ಸೇಂಟ್ ಬ್ರಾಜ್ ರಸ್ತೆಯ ಪಕ್ಕದ ಕಟ್ಟಡದ ಬಾಲ್ಕನಿಯ ಪ್ರದೇಶ ಕುಸಿದಿತ್ತು. ಈ ಅವಘಡದಲ್ಲಿ ಸುಮಾರು ಐವರು ಗಾಯಗೊಂಡಿದ್ದರು. ಗಾಯಾಳುಗಳನ್ನು ವಿಲೆ ಪಾರ್ಲೆ ಗೌಥಾನ್ ನ ನಿವಾಸಿಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
English summary
Maharashtra: 40 feet long wall collapsed due to Heavy rain in Thane, Another incident 2 death.