International
oi-Mamatha M
ಉತ್ತರ ಕನ್ನಡ, ಜೂನ್. 26: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಐವರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಕಳ್ಳತನ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಹೊನ್ನಾವರ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆತರಲಾಗಿತ್ತು.
35 ವರ್ಷದ ಮೃತ ವ್ಯಕ್ತಿ ಬಿಹಾರ ಮೂಲದವರಾಗಿದ್ದು, ತಂದೆಯೊಂದಿಗೆ ಜೀವನೋಪಾಯಕ್ಕಾಗಿ ರಾಜ್ಯಕ್ಕೆ ಬಂದಿದ್ದರು. ಇಬ್ಬರೂ ಚಿನ್ನಾಭರಣಗಳಿಗೆ ಪಾಲಿಶ್ ಮಾಡುವ ಕೆಲಸದಲ್ಲಿ ತೊಡಗಿದ್ದರು. ಕಳ್ಳತನ ಪ್ರಕರಣದಲ್ಲಿ ಅವರನ್ನು ವಿಚಾರಣೆಗಾಗಿ ಕರೆತರಲಾಗಿತ್ತು, ಈ ವೇಳೆ ಅವರು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೊನ್ನಾವರ ಪಟ್ಟಣದ ಸಾಲೇಹಿತ್ತಲ ಮನೆಯಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆ ವೇಳೆ ಮೃತರು ಮತ್ತು ಅವರ ತಂದೆ ಚಿನ್ನಾಭರಣ ಮಾಡಿ ಕೊಡುವುದಾಗಿ ಹೇಳಿ ಜನರಿಗೆ ವಂಚಿಸಲು ಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿತ್ತು. ಹೀಗಾಗಿ ದೂರಿನ ಮೇರೆಗೆ ವಿಚಾರಣೆಗೆ ಕರೆತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಿಂತಾಮಣಿ: ಪತ್ನಿಯೊಂದಿಗೆ ಸಂಬಂಧ ಆರೋಪದಲ್ಲಿ ಸ್ನೇಹಿತನ ಕತ್ತು ಸೀಳಿ, ರಕ್ತ ಕುಡಿದ ಪತಿಯ ಬಂಧನ
ವಿಚಾರಣೆ ವೇಳೆ ಆರೋಪಿಗಳು ನೀರು ಕುಡಿಯಲು ಚೀಲದಲ್ಲಿ ತಂದಿದ್ದ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದಾಗ ಮಂಗಳೂರು ಐಜಿಪಿ ಚಂದ್ರಗುಪ್ತ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
ಬಳಿಕ ಹೊನ್ನಾವರ ವೃತ್ತ ನಿರೀಕ್ಷಕ ಮಂಜುನಾಥ್, ಸಬ್ ಇನ್ಸ್ಪೆಕ್ಟರ್ ಮಂಜೇಶ್ವರ ಚಂದಾವರ, ಪೊಲೀಸ್ ಪೇದೆಗಳಾದ ಸಂತೋಷ್, ರಮೇಶ್ ಲಂಬಾಣಿ ಮತ್ತು ಮಹಾವೀರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೃತದೇಹವನ್ನು ಹೊನ್ನಾವರ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಭಾನುವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣದ ತನಿಖೆಗೆ ಮಾನವ ಹಕ್ಕು ಆಯೋಗ, ಸಿಐಡಿ ಅಧಿಕಾರಿಗಳು ಆಗಮಿಸುವ ಸಾಧ್ಯತೆ ಇದೆ.
“ಮೃತ ವ್ಯಕ್ತಿ ಮತ್ತು ಆತನ ತಂದೆಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ಮೃತರು ಬಾಯಾರಿಕೆಯಾಗುತ್ತಿದೆ ನೀರು ಬೇಕು ಎಂದು ಮನವಿ ಮಾಡಿದ್ದಾರೆ. ನೀರು ಕುಡಿಯುವಾಗ ಅವರು ಸೈನೈಡ್ ನುಂಗಿದ್ದಾರೆ. ಪೊಲೀಸರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು ಆದರೆ ಅವರು ಬದುಕುಳಿಯಲಿಲ್ಲ ಎಂದು ಉತ್ತರ ಕನ್ನಡ ಎಸ್ಪಿ ಎನ್ ವಿಷ್ಣುವರ್ಧನ ಹೇಳಿದ್ದಾರೆ.
ಮೃತರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಅವರು ಚಿನ್ನದ ಆಭರಣಗಳನ್ನು ಪಾಲಿಶ್ ಮಾಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದರು ಎಂದು ಉತ್ತರ ಕನ್ನಡ ಎಸ್ಪಿ ಎನ್ ವಿಷ್ಣುವರ್ಧನ ತಿಳಿಸಿದ್ದಾರೆ.
“ಪ್ರಕರಣವನ್ನು ಕಾರ್ಯವಿಧಾನದ ಪ್ರಕಾರ ಸಿಐಡಿಗೆ ಹಸ್ತಾಂತರಿಸಲು ನಾವು ರಾಜ್ಯ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಐಪಿಸಿಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಗಾಯ) ಮತ್ತು 342 (ತಪ್ಪು ಬಂಧನ) ಅಡಿಯಲ್ಲಿ ಮೂವರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದಿದ್ದಾರೆ.
English summary
Five police personnel were suspended after a man died by suicide in police custody in Honnavara of Uttara Kannada district. know more.
Story first published: Monday, June 26, 2023, 16:02 [IST]