Karwar
lekhaka-Vasudeva Gouda
ಕಾರವಾರ, ಜೂನ್, 26: ನೌಕಾನೆಲೆ ವ್ಯಾಪ್ತಿಗೊಳಪಟ್ಟಿರುವ ಬೈತಖೋಲ್ ಭೂದೇವಿ ಗುಡ್ಡದಲ್ಲಿ ಬೇಸಿಗೆ ವೇಳೆ ಸ್ಥಳೀಯರ ವಿರೋಧದ ನಡುವೆಯೂ ನೌಕಾನೆಲೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿತ್ತು. ಆದರೆ ಇದೀಗ ಮೊದಲ ಮಳೆಗೆ ಗುಡ್ಡದ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಇದೀಗ ಇಲ್ಲಿನ ಸ್ಥಳೀಯರಿಗೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ನಗರದ ಬೈತಖೋಲ್ ಭೂದೇವಿ ಗುಡ್ಡದ ಬಳಿ ನೌಕಾನೆಲೆಯವರು ನಡೆಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಮೊದಲ ಮಳೆಯಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಲಾರಂಭಿಸಿದ್ದು, ಇಲ್ಲಿನ ಸ್ಥಳೀಯರು ಗುಡ್ಡ ಕುಸಿಯುವ ಆತಂಕದಲ್ಲಿದ್ದಾರೆ. ನೌಕಾನೆಲೆ ವ್ಯಾಪ್ತಿಗೊಳಪಟ್ಟಿರುವ ಬೈತಖೋಲ್ ಗುಡ್ಡದ ಬಳಿ ನೌಕಾಸಿಬ್ಬಂದಿ ಸ್ಥಳೀಯರ ವಿರೋಧದ ನಡುವೆಯೂ ಬೇಸಿಗೆ ವೇಳೆ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಿದ್ದರು. ಈ ವೇಳೆ ಬೃಹತ್ ಗುಡ್ಡವನ್ನು ತೆರವು ಮಾಡಿ ರಸ್ತೆ ಮಾರ್ಗವನ್ನು ನಿರ್ಮಿಸಲಾಗಿತ್ತು.
ನೌಕಾನೆನೆಲೆಯ ಗುಡ್ಡ ಕಡಿಯುವ ನಿರ್ಧಾರವನ್ನು ವಿರೋಧಿಸಿ ಇಲ್ಲಿನ ಸ್ಥಳೀಯರು ಹೋರಾಟ ನಡೆಸಿ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗುಡ್ಡದದಿಂದ ಹರಿದು ಬರುವ ಮಳೆ ನೀರು ನೇರವಾಗಿ ಇಲ್ಲಿ ವಾಸವಾಗಿರುವ ನಿರಾಶ್ರೀತರ ಮನೆಗಳನ್ನು ನುಗ್ಗಲಾರಂಭಿಸಿದೆ.
ಅಷ್ಟೇ ಅಲ್ಲದೆ ಕಲ್ಲು ಮಣ್ಣು ಮಿಶ್ರಿತ ನೀರು ಕೂಡ ಮನೆಗಳಿಗೆ ನುಗ್ಗಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೆ ದಿನವಿಡಿ ಮಳೆಯಾದ ಕಾರಣ ಗುಡ್ಡದ ತಪ್ಪಲಿನ ಜನ ಆತಂಕದಲ್ಲಿ ದಿನಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾವು 25 ವರ್ಷದಿಂದ ಇದೇ ಸ್ಥಳದಲ್ಲಿ ವಾಸವಾಗಿದ್ದೇವೆ. ಆದರೆ ಎಂದು ಈ ರೀತಿಯ ಮಳೆಗೆ ನೀರು ನುಗ್ಗುತ್ತಿರಲಿಲ್ಲ. ಇದೀಗ ನೀರು ನುಗ್ಗುವುದರ ಜೊತೆಗೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಪೂರ್ಣಗೊಂಡ ಹೆದ್ದಾರಿ ಕಾಮಗಾರಿ: ಬಾಯ್ತೆರೆದ ಗುಡ್ಡಗಳಿಂದ ವಾಹನ ಸವಾರರಿಗೆ ಹೆಚ್ಚಿದ ಆತಂಕ!
ನೌಕಾನೆಲೆಯವರು ರಸ್ತೆಗಾಗಿ ಗುಡ್ಡ ತೆರವು ಮಾಡಿ ಗುಡ್ಡದ ನೀರನ್ನು ಇದೀಗ ಎಲ್ಲೆಂದರಲ್ಲಿ ಹರಿಬಿಡಲಾಗಿದೆ. ಇದರಿಂದ ಗುಡ್ಡದ ಕೆಳಭಾಗದ ಮನೆಗಳು ಮುಳುಗುವ ಸ್ಥಿತಿಯಲ್ಲಿವೆ. ಅಲ್ಲದೆ ಗುಡ್ಡ ತೆರವಿನ ವೇಳೆ ಬೃಹತ್ ಬಂಡೆಗಲ್ಲುಗಳನ್ನು ತೆರವುಗೊಳಿಸಿದ್ದು, ಇದೀಗ ಮಳೆಗಾಲದಲ್ಲಿ ಭಾರೀ ಮಳೆಯಾದಲ್ಲಿ ಕುಸಿದು ಉರುಳುವ ಭೀತಿ ಇದೆ. ಮೊದಲ ಮಳೆಗೆ ಈ ಪರಿಸ್ಥಿತಿ ಎದುರಾಗಿದ್ದು, ಇನ್ನು ಎರಡು ತಿಂಗಳು ಮಳೆಗಾಲ ಇರುವ ಕಾರಣ ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸ್ಥಳೀಯರಾದ ಕಮಲಾ ಆಗ್ರಹಿಸಿದ್ದಾರೆ.
ಇನ್ನು ನೌಕಾನೆಲೆಯವರು ಲೇಡಿಸ್ ಬೀಚ್‌ಗೆ ತೆರಳಲು ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ರಸ್ತೆ ಕಾಮಗಾರಿಯಿಂದ ನಿರಾಶ್ರೀತ ಬಡ ಮೀನುಗಾರರಿಗೆ ತೊಂದರೆ ಆಗುತ್ತಿದೆ. ಕಾಮಗಾರಿಯಿಂದ ಗುಡ್ಡದ ತಪ್ಪಲಿನ ಜನರಿಗೆ ಮಳೆಗಾಲದಲ್ಲಿ ತೊಂದರೆಯಾಗುವ ಬಗ್ಗೆ ನೌಕಾನೆಲೆಯವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿ ಹೋರಾಟ ಕೂಡ ನಡೆಸಲಾಗಿತ್ತು. ಆದರೆ ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ತಾಳಿದ ಕಾರಣ ಇದೀಗ ಬಡ ಮೀನುಗಾರರು ಆತಂಕದಲ್ಲಿ ಬದುಕುವಂತಾಗಿದೆ.
ಘಟನೆ ಬಳಿಕ ನೌಕಾನೆಲೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೆಲ ಬಂಡೆಗಲ್ಲುಗಳನ್ನು ಜೆಸಿಬಿ ಮೂಲಕ ತೆರವು ಮಾಡಿದ್ದಾರೆ. ಆದರೂ ಭಾರೀ ಪ್ರಮಾಣದಲ್ಲಿ ಗುಡ್ಡ ಕೊರೆದ ಕಾರಣ ಮಳೆಗಾಲದಲ್ಲಿ ಕುಸಿಯುವ ಭೀತಿ ಇದ್ದು, ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರಾದ ಕಾಶಿನಾಥ ಆಗ್ರಹಿಸಿದ್ದಾರೆ. ಒಟ್ಟಾರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಬ್ಬರದ ಮಳೆಗೆ ಬೈತಖೋಲದಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ನೌಕಾನೆಲೆಯವರು ನಡೆಸಿದ ಅರೆಬರೆ ರಸ್ತೆ ಕಾಮಗಾರಿ ಗುಡ್ಡದ ತಪ್ಪಲಿನ ನೂರಾರು ಜನರಿಗೆ ಭೀತಿ ಎದುರಾಗಿದ್ದು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಮುಂಜಾಗೃತೆ ವಹಿಸಿ ಅಗತ್ಯ ಕ್ರಮಕೈಗೊಳ್ಳಬೇಕಿದೆ.
English summary
Bhudevi Hill digging, Karavara district’s Baitakhol villagers are worried.
Story first published: Monday, June 26, 2023, 10:28 [IST]