Agriculture
lekhaka-Lavakumar B M
ಮಂಡ್ಯ, ಜೂನ್, 25: ಒಂದು ಕಾಲದಲ್ಲಿ ಮೆಕ್ಸಿಕೋ ಸೇರಿದಂತೆ ಹೊರ ದೇಶಗಳಲ್ಲಷ್ಟೇ ಬೆಳೆಯುತ್ತಿದ್ದ ಡ್ರ್ಯಾಗನ್ ಹಣ್ಣನ್ನು ನಾವೆಲ್ಲರೂ ಅಚ್ಚರಿಯಿಂದ ನೋಡುವ ಕಾಲವಿತ್ತು. ಆದರೀಗ ಇದನ್ನು ದೇಶದಲ್ಲಿ ಅದರಲ್ಲೂ ನಮ್ಮ ರಾಜ್ಯದಲ್ಲಿಯೂ ಬೆಳೆಯುತ್ತಿದ್ದಾರೆ. ಜೊತೆಗೆ ನಮ್ಮ ಊರಿನ ಹಣ್ಣು ಅಂಗಡಿಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಸಿಗುವಂತಾಗಿದ್ದು, ಇದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಹಾಗೆಯೇ ಮಂಡ್ಯದಲ್ಲೊಬ್ಬ ಬಿ.ಇ.ಪದವಿದರನೊಬ್ಬ ಇದೇ ಕೃಷಿ ಮಾಡಿ ಅದ್ಭತ ಸಾಧನೆ ಮಾಡಿದ್ದಾನೆ.
ಹಾಗೆ ನೋಡಿದರೆ ಡ್ರ್ಯಾಗನ್ ಫ್ರೂಟ್ನಲ್ಲಿ ಹಲವು ಪೋಷಕಾಂಶಗಳಿದ್ದು, ಅವು ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತವೆ. ಜೊತೆಗೆ ಆರೋಗ್ಯಕಾರಿಯೂ ಆಗಿರುವುದರಿಂದ ಹೆಚ್ಚಿನ ಬೇಡಿಕೆಯೂ ಇದೆ. ಈ ಹಣ್ಣುಗಳು ಕೇವಲ ಶ್ರೀಮಂತರು ಮಾತ್ರ ಸೇವಿಸಬಹುದಷ್ಟೆ, ನಮ್ಮಂತಹವರು ಖರೀದಿ ಮಾಡೋಕೆ ಆಗುತ್ತಾ? ಅಂತಾ ಮಾತಾಡಿಕೊಳ್ಳುತ್ತಿದ್ದರು. ಆದರೆ ಈಗ ನಮ್ಮ ರಾಜ್ಯದಲ್ಲಿಯೇ ಕೆಲವರು ಬೆಳೆಯಲು ಆರಂಭಿಸಿರುವುದರಿಂದ ಇದು ಕಡಿಮೆ ಬೆಲೆಯಲ್ಲಿ ದೊರೆಯುವಂತಾಗಿದೆ.
ಡ್ರ್ಯಾಗನ್ ಫ್ರೂಟ್ ಒಂದು ವಾಣಿಜ್ಯ ಬೆಳೆಯಾಗಿದ್ದು, ಇದರ ಕೃಷಿಗೆ ಒಂದಷ್ಟು ಬಂಡವಾಳವನ್ನು ಹಾಕಬೇಕಾಗುತ್ತದೆ. ಮತ್ತು ಸೂಕ್ತ ನಿರ್ವಹಣೆ ಮಾಡುವ ಧೈರ್ಯವಿದ್ದರೆ ರೈತರು ಬೆಳೆಯಬಹುದಾಗಿದೆ. ಆದರೆ ನಮ್ಮಲ್ಲಿ ತುಂಬಾ ರೈತರು ಸಾಂಪ್ರದಾಯಿಕ ಬೆಳೆಗಳಿಗೆ ಹೊಂದಿಕೊಂಡಿರುವುದರಿಂದ ಹೊಸ ಪ್ರಯೋಗ ಮಾಡಲು ಸುತರಾಂ ಒಪ್ಪುತ್ತಿಲ್ಲ. ಹೀಗಿರುವಾಗಲೇ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದ ಮಂಜೇಗೌಡರ ಪುತ್ರ ಕೀರ್ತಿಗೌಡ ಎಂಬುವರು ಡ್ರಾಗನ್ ಫ್ರೂಟ್ ಕೃಷಿ ಮಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲಸಿನ ಹಬ್ಬಕ್ಕೆ ಎರಡನೇ ದಿನವೂ ಉತ್ತಮ ಸ್ಪಂದನೆ
ಕೃಷಿ ಕ್ಷೇತ್ರಕ್ಕೆ ವಿದ್ಯಾವಂತರು ಬರಬೇಕು
ನಮ್ಮಲ್ಲಿ ಇವತ್ತಿಗೂ ಹೆಚ್ಚು ವಿದ್ಯಾಭ್ಯಾಸವಿಲ್ಲದ, ಬೇರೇನು ಕೆಲಸ ಮಾಡಲು ಅರ್ಹತೆಯಿಲ್ಲದವರಷ್ಟೇ ಕೃಷಿ ಮಾಡಿಕೊಂಡು ಹೋಗುತ್ತಿದ್ದಾರೆ ಎಂಬ ಮನಸ್ಥಿತಿಯಿದೆ. ಆದರೆ ಕೃಷಿ ಕ್ಷೇತ್ರಕ್ಕೂ ವಿದ್ಯಾವಂತರು ಬರಬೇಕು. ಕೃಷಿಯಲ್ಲಿ ತಂತ್ರಜ್ಞಾನ ಬೆಳೆಯಬೇಕು ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತಿವೆ. ಆದರೂ ರೈತರಾಗಲು ಯಾರು ಮುಂದಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಎನ್ನುವಂತೆ ಕೆಲವು ವಿದ್ಯಾವಂತರು ಕೃಷಿಯಲ್ಲಿ ಸಾಧನೆ ಮಾಡಿದ ಸುದ್ದಿಗಳು ಕೇಳಿದಾಗ ಮರುಭೂಮಿಯಲ್ಲಿ ತಂಗಾಳಿ ಬೀಸಿದ ಅನುಭವವಾಗುತ್ತದೆ.
ಇದೀಗ ಹೆಮ್ಮಡಹಳ್ಳಿ ಗ್ರಾಮದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ಕೀರ್ತಿಗೌಡ ವಿದ್ಯಾವಂತ ಎನ್ನುವುದು ಖುಷಿಯ ವಿಚಾರವಾಗಿದೆ. ಇವರು ಬಿ.ಇ. ಏರೋನಾಟಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಈಗ ತಮ್ಮ ತಂದೆ ಮಂಜೇಗೌಡರ ಜೊತೆಗೂಡಿ ಒಂದೂವರೆ ಹೆಕ್ಟೇರ್ ಕೃಷಿ ಭೂಮಿಯಲ್ಲಿ ವಾಣಿಜ್ಯ ಬೆಳೆಯಾಗಿರುವ ಡ್ರ್ಯಾಗನ್ ಫ್ರೂಟ್ ಬೆಳೆದಿರುವುದು ಗಮನಾರ್ಹವಾಗಿದೆ.
ಡ್ರ್ಯಾಗನ್ ಹಣ್ಣು ಬೆಳೆಯುತ್ತ ಆಸಕ್ತಿ
ತಮ್ಮ ಜಮೀನಿನಲ್ಲಿ ಎಲ್ಲರೂ ಬೆಳೆಯುವಂತೆ ಇವರು ಕೂಡ ಅಡಿಕೆ, ತೆಂಗು, ಮಾವು, ರೇಷ್ಮೆ ಸೇರಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಈ ಬೆಳೆಗಳಿಂದ ಹೇಳಿಕೊಳ್ಳುವಷ್ಟು ಆದಾಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಬೆಲೆ ಏರಿಳಿತಗಳು ನಷ್ಟವನ್ನು ತಂದೊಡ್ಡುತ್ತಿತ್ತು. ಹೀಗಿರುವಾಗಲೇ ಬಿ.ಇ. ಓದಿದ್ದ ಕೀರ್ತಿಗೌಡರಿಗೆ ಡ್ರ್ಯಾಗನ್ ಫ್ರೂಟ್ ಅನ್ನು ಬೆಳೆಯುವ ಮನಸ್ಸಾಗಿತ್ತು. ಕಾರಣ ಅದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿತ್ತು.
ಅದರಲ್ಲಿಯೂ ಔಷಧೀಯ ಗುಣಗಳು, ಪೌಷ್ಠಿಕಾಂಶಗಳು ಹೇರಳವಾಗಿದ್ದರಿಂದ ಡ್ರ್ಯಾಗನ್ ಫ್ರೂಟ್ ಅನ್ನು ಜನ ಮುಗಿ ಬಿದ್ದು ಖರೀದಿಸುತ್ತಿದ್ದರು. ಹೊರದೇಶಗಳಿಂದ ಬರಬೇಕಾಗಿರುವುದರಿಂದ ಬೇಡಿಕೆಯೂ ಹೆಚ್ಚಾಗಿತ್ತು. ಇದೆಲ್ಲವನ್ನು ಗಮನಿಸಿದ ಕೀರ್ತಿಗೌಡ ಈ ಬೆಳೆಯತ್ತ ಆಸಕ್ತಿ ತೋರಿದರು ಎಂದು ತಿಳಿದುಬಂದಿದೆ.
50 ವರ್ಷಗಳ ಕಾಲ ಬದುಕುವ ಗಿಡಗಳು
ಈ ಹಣ್ಣನ್ನು ನಾವು ಏಕೆ ಬೆಳೆಯಬಾರದು ಎಂಬ ಆಲೋಚನೆ ಕೀರ್ತಿಗೌಡರನ್ನು ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ ಇದರ ಕೃಷಿ ಕುರಿತಂತೆ ಕೃಷಿ ತಜ್ಞರ ಸಲಹೆ ಮಾರ್ಗದರ್ಶನವನ್ನು ಪಡೆದುಕೊಂಡು ಕೃಷಿ ಮಾಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಬಂದರು. ಇವರ ಈ ಸಾಹಸವನ್ನು ನೋಡಿದ ಕೆಲವರು ಇದೆಲ್ಲ ಆಗುತ್ತಾ? ಎಂದು ಅನುಮಾನ ಪಟ್ಟರು.
ಆದರೆ ಡ್ರಾಗನ್ ಕೃಷಿ ಬಗ್ಗೆ ತಿಳಿದುಕೊಂಡಿದ್ದ ಕೀರ್ತಿಗೌಡ ಅವರಿಗೆ ಒಂದು ಬಾರಿ ಬಂಡವಾಳ ಹೂಡಿ ಕೃಷಿ ಮಾಡಿದರೆ ಸುಮಾರು ಐವತ್ತು ವರ್ಷಗಳ ಕಾಲ ಗಿಡಗಳು ಜೀವಂತವಾಗಿ ಉಳಿದು ಫಲ ನೀಡುತ್ತವೆ ಎಂಬುದು ಗೊತ್ತಿತ್ತು.
ಮುಂಬೈಗೂ ಡ್ರ್ಯಾಗನ್ ಹಣ್ಣುಗಳ ರವಾನೆ
ಕೀರ್ತಿಗೌಡ ಅವರು ತಂದೆ ಮಂಜೇಗೌಡರ ಸಹಕಾರ ಪಡೆದು ಕೃಷಿ ಆರಂಭಿಸಿದರು. ಈಗ ಡ್ರ್ಯಾಗನ್ ಫ್ರೂಟ್ ಬೆಳೆದು ಫಸಲು ನೀಡುತ್ತಿವೆ. ಒಂದು ಹಣ್ಣು ಏಳುನೂರರಿಂದ ಎಂಟುನೂರು ಗ್ರಾಂ ತೂಕ ಬೆಳೆಯುತ್ತಿದ್ದು, ಅವರು ಕಿಲೋವೊಂದಕ್ಕೆ ನೂರು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇಲ್ಲಿಂದ ಹಣ್ಣುಗಳನ್ನು ಮೈಸೂರು, ಬೆಂಗಳೂರು ಸೇರಿದಂತೆ ಮುಂಬೈಗೂ ಕಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಗಿಡವನ್ನು 50 ರೂಪಾಯಿಗೆ ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದಾರೆ.
ಡ್ರ್ಯಾಗನ್ ಫ್ರೂಟ್ ಬೇಸಾಯ ಮಾಡುತ್ತಿರುವ ಕೀರ್ತಿಗೌಡ ಅವರ ತೋಟವು ಕೆ.ಆರ್.ಪೇಟೆ ಪಟ್ಟಣದಿಂದ 8 ಕಿಲೋ ಮೀಟರ್ ದೂರದ ಹೆಮ್ಮಡಹಳ್ಳಿ ಗ್ರಾಮದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ 8431162356 ನ್ನು ಸಂಪರ್ಕಿಸಬಹುದಾಗಿದೆ.
English summary
How did the Engineering graduate succeed in agriculture field At Mandya district?, here see details
Story first published: Sunday, June 25, 2023, 17:58 [IST]