Hassan
lekhaka-Veeresha H G
ಹಾಸನ, ಜುಲೈ 31: ನಿರಂತರ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಹೋಬಳಿ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜು (52) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ನಾಗರಾಜು ಅವರ ಮನೆಯ ಗೋಡೆ ಸಂಪೂರ್ಣ ಶಿಥಿಲಗೊಂಡಿತ್ತು. ಭಾನುವಾರ ಸಂಜೆ ತಮ್ಮ ಮನೆಯ ಪಕ್ಕದಲ್ಲಿ ಸ್ವಚ್ಛತೆ ಮಾಡುತ್ತಿದ್ದಾಗ ಮನೆಯ ಗೋಡೆ ಏಕಾಏಕಿ ನಾಗರಾಜು ಮೇಲೆ ಕುಸಿದು ಬಿದ್ದಿದೆ. ಈ ವೇಳೆ ನಾಗರಾಜು ಪತ್ನಿ ಲಕ್ಷ್ಮಮ್ಮ ಹಾಗೂ ಪುತ್ರ ಧರ್ಮರಾಜು ಕೂಲಿ ಕೆಲಸಕ್ಕೆ ತೆರಳಿದ್ದರು.
ಪತ್ನಿ ಹಾಗೂ ಪುತ್ರ ಕೆಲಸದಿಂದ ವಾಪಾಸ್ ಬಂದು ನೋಡಿದ ವೇಳೆ ನಾಗರಾಜ್ ಗೋಡೆಯಡಿ ಸಿಲುಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯದಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ
ಚಿಕ್ಕಮಗಳೂರು: ಅರಣ್ಯದಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಸ್ಥಳೀಯರು ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆ ಪಟ್ಟಣದ ಬಿಳಗುಳ ಗ್ರಾಮದ ಚಂದ್ರು ನಾಪತ್ತೆಯಾಗಿದ್ದ ವ್ಯಕ್ತಿಯಾಗಿದ್ದು, ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಸಾರಗೋಡು ಅರಣ್ಯದಲ್ಲಿ ನಾಪತ್ತೆಯಾಗಿದ್ದ ಚಂದ್ರು ಅವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಚಂದ್ರು ಕಳೆದ ಶುಕ್ರವಾರ ಮೂಡಿಗೆರೆಯಿಂದ ಕುಂದೂರು ಗ್ರಾಮದ ಹರೀಶ್ ಗೌಡ ಎನ್ನುವವರ ತೋಟದ ಕೆಲಸಕ್ಕೆ ತೆರಳಿದ್ದರು. ಕೆಲಸ ಬಿಟ್ಟು ಬಳಿಕ ಸಾರಗೋಡು ಅರಣ್ಯ ವ್ಯಾಪ್ತಿಯ ದಾರಿಯಲ್ಲಿ ಬರುವ ವೇಳೆ ದಾರಿ ತಪ್ಪಿ ನಾಪತ್ತೆಯಾಗಿದ್ದರು. ರಾತ್ರಿ ಕಳೆದರೂ ಚಂದ್ರು ಮನೆಗೆ ಬಾರದಿರುವುದನ್ನು ಕಂಡ ಚಂದ್ರು ಮನೆಯವರು ಗಾಬರಿಗೊಂಡಿದ್ದರು.
ಹಾಸನ: ಭಾರೀ ಮಳೆಗೆ ಶಾಲೆ ಗೋಡೆ ಕುಸಿತ, ಶಿಥಿಲಗೊಂಡ ಕಟ್ಟಡದ ಬಳಿಯೇ ವಿದ್ಯಾರ್ಥಿಗಳಿಗೆ ಪಾಠ
ಚಂದ್ರು ದಾರಿ ತಪ್ಪಿ ಅರಣ್ಯದಲ್ಲಿ ನಾಪತ್ತೆಯಾಗಿರುವ ಶಂಕೆಯನ್ನು ಮನೆಯವರು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಮೂಡಿಗೆರೆ ಅರಣ್ಯ ಇಲಾಖೆ ಎಸಿಎಫ್ ಬಿ.ಎಲ್.ಸ್ವಾಮಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆಯ ಉಪವಲಯ ಅರಣ್ಯಾಧಿಕಾರಿ ವಿಜಯ್ಕುಮಾರ್ ನೇತೃತ್ವದ ತಂಡ ಸ್ಥಳೀಯ ಗ್ರಾಮಸ್ಥರೊಂದಿಗೆ ಸಾರಗೋಡು, ಕುಂದೂರು ಅರಣ್ಯದೊಳಗೆ ಎರಡು ದಿನಗಳ ಕಾಲ ಹುಡುಕಾಟ ಆರಂಭಿಸಿದ್ದರು.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಕೆಲ ತಿಂಗಳ ಹಿಂದೆ ಕಟ್ಟಿಗೆ ತರಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಡಾನೆ ತುಳಿದು ಸಾವನ್ನಪ್ಪಿದ್ದರು.ಈ ಹಿನ್ನೆಲೆಯಲ್ಲಿ ಚಂದ್ರು ಮನೆಯವರು ತೀವ್ರ ಆತಂಕ ವ್ಯಕ್ತಪಡಿಸಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಚಂದ್ರು ಪತ್ತೆಗೆ ಎರಡು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದರು. ಭಾನುವಾರ ಮಧ್ಯಾಹ್ನ ಸಾರಗೋಡು ಕಾಡಿನಲ್ಲಿ ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದ ಚಂದ್ರು ಪತ್ತೆಯಾಗಿದ್ದು, ಆತನನ್ನು ಸುರಕ್ಷಿತವಾಗಿ ಕರೆ ತರಲಾಗಿದೆ.
English summary
Heavy Rain Effect in Hassan: Man dies due to House wall collapsed in Hassan. Know more
Story first published: Monday, July 31, 2023, 9:03 [IST]