Karnataka
oi-Gururaj S
ಬೆಂಗಳೂರು, ಜೂನ್ 22;’ಗೃಹಜ್ಯೋತಿ’ ಯೋಜನೆ ಅರ್ಜಿ ಸಲ್ಲಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್ 21ರ ಸಂಜೆ 7 ಗಂಟೆಯ ತನಕ 12.51 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಕಚೇರಿಗೆ ಪ್ರತ್ಯೇಕ ಯೂಸರ್ ಐಡಿ, ಪಾಸ್‌ವರ್ಡ್ ನೀಡಲಾಗಿದೆ. ಇದರಿಂದಾಗಿ ವಿದ್ಯುತ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ಸುಲಭವಾಗಿದೆ.
ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ ಎಂದು ಇಂಧನ ಇಲಾಖೆ ಹೇಳಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲು ಜನರಿಗೆ ಸಹಾಯಕವಾಗುವಂತೆ 8 ಜಿಲ್ಲೆಗಳ ವಿವಿಧ ವಿದ್ಯುತ್ ಕಚೇರಿಗಳಲ್ಲಿ ಒಟ್ಟು 911 ಕೌಂಟರ್ ತೆರೆಯಲಾಗಿದೆ.
ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ‘ಗೃಹಜ್ಯೋತಿ’ ಯೋಜನೆಯೂ ಒಂದು. ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ಯೋಜನೆ ಆಗಸ್ಟ್‌ನಲ್ಲಿ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ಜೂನ್ 18ರ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ ಸುಮಾರು 55 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವುದು ‘ಗೃಹಜ್ಯೋತಿ’ ಯೋಜನೆ. ಜನರು ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.
ಯೋಜನೆ 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ಆದರೆ ಯೋಜನೆಗೆ ಫಲಾನುಭವಿಯಾಗಲು ನೋಂದಣಿ ಮಾಡುವುದು ಕಡ್ಡಾಯವಾಗಿದೆ.
ಗೃಹಜ್ಯೋತಿ; ಇಂಧನ ಇಲಾಖೆ ನೀಡಿರುವ ಸ್ಪಷ್ಟನೆಗಳು
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಲಿಂಕ್
‘ಗೃಹಜ್ಯೋತಿ’ ಯೋಜನೆ ಫಲಾನುಭವಿಯಾಗಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. https://sevasindhugs.karnataka.gov.in/ ಲಿಂಕ್ ಕ್ಲಿಕ್ ಮಾಡಿದರೆ ಅದರಲ್ಲಿ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ವಿವರವಿದೆ. ‘ಗೃಹಜ್ಯೋತಿ’ ಕ್ಲಿಕ್ ಮಾಡಿದರೆ ಮುಂದಿನ ಪುಟ ತೆರದುಕೊಳ್ಳಲಿದೆ.
ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಈ ವೆಬ್‌ಸೈಟ್ ಮೊಬೈಲ್, ಡೆಸ್ಕ್‌ಟಾಪ್, ಲ್ಯಾಪ್ ಟಾಪ್‌ಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದೆ. ‘ಗೃಹಜ್ಯೋತಿ’ ಯೋಜನೆ ಅಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಹಾಗೂ ಅಲ್ಪಕಾಲಾವಧಿಯಲ್ಲಿಯೇ ಬಹುತೇಕ ಅರ್ಜಿಗಳು ಸಲ್ಲಕೆಯಾಗುವ ಕಾರಣ ವಿದ್ಯುತ್ ಶಕ್ತಿ ಕಚೇರಿಗಳಲ್ಲಿಯೇ ‘ಗೃಹಜ್ಯೋತಿ’ ಯೋಜನೆಗೆ ವಿಶೇಷ ಕೌಂಟರ್ ತೆರೆಯಲಾಗಿದೆ. ಅಲ್ಲಿಗೆ ಭೇಟಿ ನೀಡಿ, ಸಹ ಅರ್ಜಿ ಸಲ್ಲಿಸಬಹುದು.
‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ. ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ಕರಾರು ಪತ್ರವನ್ನು ಸಹ ನೀಡಬೇಕು.
ಗೃಹಜ್ಯೋತಿ ಯೋಜನೆ; ಬೆಸ್ಕಾಂ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಯಾವ-ಯಾವ ವಿವರಗಳು; ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಾಗ ಕೇಳುವ ವಿವರಗಳು
- ಎಸ್ಕಾಂ ಹೆಸರು
- ಖಾತೆ ಸಂಖ್ಯೆ
- ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ
- ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ
- ಎಸ್ಕಾಂ ಹೆಸರು1
- ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ
- ಆಧಾರ್ ಸಂಖ್ಯೆ
- ಅರ್ಜಿದಾರರ ಹೆಸರು
- ಸಂವಹನಕ್ಕಾಗಿ ದೂರವಾಣಿ ಸಂಖ್ಯೆ
ಎಲ್ಲಾ ವಿವರ ಭರ್ತಿ ಮಾಡಿದ ಮೇಲೆ ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದ್ದಲ್ಲಿ ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನನಗೆ ತಿಳಿದಿದೆ ಮತ್ತು ನಾನು ಈಗಾಗಲೇ ಪಡೆದಿರುವ ಪ್ರಯೋಜನಗಳನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಸಿದ್ಧನಿದ್ದೇನೆ. ನಾನು ಮೇಲೆ ಒದಗಿಸಿರುವ ಎಲ್ಲಾ ವಿವರಗಳು ನನಗೆ ತಿಳಿದಿರುವಂತೆ ಸರಿಯಾಗಿದೆ ಎಂದು ಈ ಮೂಲಕ ಧೃಢೀಕರಿಸುತ್ತೇನೆ.
ಇದಕ್ಕೆ ಒಪ್ಪಿಗೆ ನೀಡಬೇಕು. ಬಳಿಕ ಮುಂದಿನ ಹಂತ ತೆರೆದುಕೊಳ್ಳಲಿದೆ.
ಗೃಹ ಜ್ಯೋತಿ ನೋಂದಣಿ ಈಗ ಇನ್ನೂ ಸುಲಭ: ಹೊಸ ಲಿಂಕ್, ನೋಂದಣಿ ಮಾಡುವ ವಿಧಾನ
ಗೃಹಜ್ಯೋತಿ ಯೋಜನೆಯ ಸಹಾಯವಾಣಿ ಸಂಖ್ಯೆ
‘ಗೃಹಜ್ಯೋತಿ’ ಯೋಜನೆಗೆ ಜನರು ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಎದುರಾದರೆ ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಛೇರಿ ಅಥವಾ 24×7 ಸಹಾಯವಾಣಿ 1912ಗೆ ಕರೆಮಾಡಬಹುದು.
ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಈ ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. https://t.co/iO1tMY4vbZ@NammaBESCOM @BescomHelpline @CMofKarnataka @thekjgeorge pic.twitter.com/US8VnbcbzV
— Managing Director, BESCOM (@mdbescom) June 18, 2023
ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಯೋಜನೆಯಡಿ ರಾಜ್ಯದಲ್ಲಿನ ಪತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಗ್ರಾಹಕರು ಅರ್ಹರು.
ಯೋಜನೆಯಿಂದ ರಾಜ್ಯದ 2 ಕೋಟಿ ಗೃಹ ಬಳಕೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಈ ಯೋಜನೆಯು 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ‘ಗೃಹಜ್ಯೋತಿ’ ಯೋಜನೆ ಫಲಾನುವಿಯಾಗಲು ಹಿಂದಿನ ಎಲ್ಲಾ ಬಾಕಿ ಬಿಲ್ ಪಾವತಿ ಮಾಡಬೇಕು. ಬಾಕಿ ಪಾವತಿ ಮಾಡಲು ಸೆಪ್ಟೆಂಬರ್ ತನಕ ಇಂಧನ ಇಲಾಖೆ ಅವಕಾಶ ನೀಡಿದೆ.
English summary
Now people can submit applications for the Gruha Jyoti scheme. Here are the link and details to apply for 200 unit free electricity scheme in Karnataka.